ಭಾನುವಾರ, ಮಾರ್ಚ್ 20, 2022

ಭಾವಾನುವಾದ- ಅಧ್ಯಾಯ ೦೬

 

ಭಾವಾನುವಾದ- ಅಧ್ಯಾಯ ೦೬

̐

ತಮೀಶ್ವರಾಣಾಂ ಪರಮಂ ಮಹೇಶ್ವರಂ ತಂ ದೇವತಾನಾಂ ಪರಮಂ ಚ ದೈವತಮ್

ಪತಿಂ ಪತೀನಾಂ ಪರಮಂ ಪರಸ್ತಾದ್ವಿದಾಮ ದೇವಂ ಭುವನೇಶಮೀಡ್ಯಮ್ ೦೬.೦೭

 

 ಈ ಪ್ರಪಂಚವನ್ನು ಯಾರು ಸೃಷ್ಟಿ ಮಾಡಿದರು ಮತ್ತು ಏಕೆ ಸೃಷ್ಟಿ ಮಾಡಿದರುಎನ್ನುವ ಪ್ರಶ್ನೆಯೊಂದಿಗೆ ಈ ಉಪನಿಷತ್ತು ಆರಂಭಗೊಂಡಿತ್ತಷ್ಟೇ. ಇಲ್ಲಿ ಈ ಉಪನಿಷತ್ತಿನ ಕೊನೆಯ ಅಧ್ಯಾಯದಲ್ಲಿ ಶ್ವೇತಾಶ್ವತರ ಮುನಿ ಹೇಳುತ್ತಾನೆ: ‘ನಾವು ಅದನ್ನು ತಿಳಿದೆವು’ ಎಂದು.

ನಮ್ಮನ್ನು ನಿಯಂತ್ರಿಸುವ, ನಮ್ಮಿಂದ ಎತ್ತರದಲ್ಲಿರುವ ಸಮಸ್ತ ಶಕ್ತಿಗಳಿಗೂ(ಸಮಸ್ತ ದೇವತೆಗಳಿಗೂ) ಒಡೆಯನಾದ ಭಗವಂತನನ್ನು ಶ್ವೇತಾಶ್ವತರ ಮುನಿ ಇಲ್ಲಿ ‘ಈಶ್ವರಃ’ ಎಂದು ಸಂಬೋಧಿಸಿದ್ದಾನೆ. ‘ಈಶ್ವರಃ’ ಎಂದರೆ ಎಲ್ಲಾ ದೇವಾದಿ-ದೇವತೆಗಳಿಗೂ ಒಡೆಯನಾದ ಸರ್ವಸಮರ್ಥ ಭಗವಂತ. ಅವನೇ ನಾರಾಯಣ. ಶ್ರೀಕೃಷ್ಣ ಗೀತೆಯಲ್ಲಿ(೧೮.೬೧)  ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ ತಿಷ್ಠತಿ - ಎಲ್ಲಾ ಜೀವಿಗಳ ಎದೆಯ ತಾಣದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ’ ಎಂದು ವಿವರಿಸಿದ್ದಾನೆ. ಇದನ್ನು  ಶಂಕರಾಚಾರ್ಯರು ಕೂಡಾ  ಈಶ್ವರಃ ಈಶನಶೀಲಃ ನಾರಾಯಣಃ’ ಎಂದು ತಮ್ಮ ಭಾಷ್ಯದಲ್ಲಿ ವಿವರಿಸಿರುವುದನ್ನೂ ನಾವು ಕಾಣುತ್ತೇವೆ.  ಅಷ್ಟೇ ಅಲ್ಲ, ‘ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ - ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ’ ಎಂದು ಸ್ಪಷ್ಟವಾಗಿ ಹೇಳಿದ್ದಾನೆ ಕೃಷ್ಣ (ಭಗವದ್ಗೀತೆ - ೧೫.೧೫). ‘ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ’ –ಎಲ್ಲದರ ಒಳಗೂ-ಹೊರಗೂ ತುಂಬಿ, ಎಲ್ಲವನ್ನು ನಿಯಂತ್ರಿಸುವ ಸರ್ವಸಮರ್ಥ ಶಕ್ತಿ ಆ ಭಗವಂತ ಎನ್ನುವ ಸತ್ಯವನ್ನು ನಾನು ತಿಳಿದೆ ಎನ್ನುವ ಮಾತನ್ನು ಇಲ್ಲಿ ಶ್ವೇತಾಶ್ವತರ ಮುನಿ ಹೇಳಿರುವುದನ್ನು ನಾವು ಕಾಣುತ್ತೇವೆ.

ತಂ ದೇವತಾನಾಂ ಪರಮಂ ಚ ದೈವತಮ್ ಪತಿಂ ಪತೀನಾಂ ಪರಮಂ ಪರಸ್ತಾದ್ವಿದಾಮ... ಎನ್ನುವ ಮಾತು ವಿಷ್ಣು ಸಹಸ್ರನಾಮದಲ್ಲಿ ಹೇಳಿರುವ ‘ದೈವತಂ ದೇವತಾನಾಂ ಚ ಭೂತಾನಾಂ ಯೋsವ್ಯಯಃ ಪಿತಾ’ ಎನ್ನುವ ಮಾತಿನ ಅನುವಾದ ರೂಪದಲ್ಲಿದೆ. ಯಾವಯಾವ  ದೇವತಾ ಶಕ್ತಿಗಳಿವೆ, ಆ ಎಲ್ಲಾ ಶಕ್ತಿಗಳಿಗೆ ಪರದೇವತೆ ಆ ಭಗವಂತ. ಎಲ್ಲಾ ರಕ್ಷಕರಿಗೂ ರಕ್ಷಕನಾಗಿರುವ, ಅಳಿವಿರದ ಶಕ್ತಿ ಆ ಭಗವಂತ. ಇಂತಹ ಭಗವಂತನಿಗೆ ಈ ಪ್ರಪಂಚ ಸೃಷ್ಟಿ ಎನ್ನುವುದು ಒಂದು ಕ್ರೀಡೆ. ಹೀಗೆ, ಪರಂಪರಾಗತವಾಗಿ ಋಷಿಮುನಿಗಳು  ತಾವು ಕಂಡು ದಾಖಲಿಸಿಟ್ಟಿರುವ(ಈಡ್ಯಮ್[1]) ‘ಈ ಬ್ರಹ್ಮಾಂಡವನ್ನು ಸೃಷ್ಟಿಮಾಡಿರುವ, ಬ್ರಹ್ಮಾಂಡದ ಒಡೆಯ(ಭುವನೇಶ) ಒಬ್ಬನಿದ್ದಾನೆ’ ಎನ್ನುವ  ಸತ್ಯವನ್ನು ನಾನಿಂದು ಕಂಡೆ ಎಂದಿದ್ದಾನೆ ಶ್ವೇತಾಶ್ವತರ ಮುನಿ.

 

ನ ತಸ್ಯ ಕಾರ್ಯ್ಯಂ ಕರಣಂ ಚ ವಿದ್ಯತೇ ನ ತತ್ಸಮಶ್ಚಾಭ್ಯಧಿಕಶ್ಚ ದೃಶ್ಯತೇ

ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ ಸ್ವಾಭಾವಿಕೀ ಜ್ಞಾನಬಲಕ್ರಿಯಾ ಚ ೦೬.೦೮

 

ನಾವು ನಮ್ಮ ಶರೀರ ಹಾಗೂ ಇಂದ್ರಿಯಗಳಿಂದ ಸಮಸ್ತ ಕಾರ್ಯವನ್ನು ನಿರ್ವಹಿಸುತ್ತೇವೆ. ಹಾಗಿದ್ದರೆ ಭಗವಂತನಿಗೂ ನಮ್ಮಂತೆಯೇ ಶರೀರ-ಇಂದ್ರಿಯಗಳಿವೆಯೇ ? ಈ ಪ್ರಶ್ನೆಗೆ ಶ್ವೇತಾಶ್ವತರ ಮುನಿ ಇಲ್ಲಿ ಉತ್ತರಿಸಿರುವುದನ್ನು ಕಾಣುತ್ತೇವೆ. ಸರ್ವವ್ಯಾಪಿ ಭಗವಂತನಿಗೆ ನಮ್ಮಂತೆ ದೇಹ-ಇಂದ್ರಿಯಗಳಿಲ್ಲ. ಈ ಹಿಂದೆ ಹೇಳಿದಂತೆ ‘ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ’ ಭಗವಂತನಿಗೆ ನಮ್ಮಂತೆ ಒಂದು ದಿನ ಬಿದ್ದು ಹೋಗುವ, ಸೀಮಿತವಾದ  ಪಾಂಚಭೌತಿಕ ದೇಹವಿಲ್ಲ, ಆದರೆ ಅವನಿಗೆ ಜ್ಞಾನಾನಂದಮಯವಾದ ಅಪ್ರಾಕೃತರೂಪವಿದೆ. ಅವನಿಗೆ ನಮ್ಮಂತೆ ಸೀಮಿತವಾದ ಇಂದ್ರಿಯಗಳಿಲ್ಲ. ವಿಶ್ವತೋಶ್ಚಕ್ಷುಃ-ವಿಶ್ವತೋಮುಖನಾದ ಭಗವಂತನ ಇಂದ್ರಿಯಗಳು ಸ್ವರೂಪಭೂತವಾದುದು. ಹೀಗಾಗಿ ಶ್ವೇತಾಶ್ವತರ ಮುನಿ ಹೇಳುತ್ತಾನೆ:  ‘ಭಗವಂತನಿಗೆ ಅಧಿಕವಾದ ಅಥವಾ ಸಮನಾದ ಇನ್ನೊಂದು ವಸ್ತುವಿಲ್ಲ, ಅವನು ಏಕಃ, ಅದ್ವಿತೀಯಃ’ ಎಂದು. ಸಮಸ್ತ ವೈದಿಕವಾಙ್ಮಯದಲ್ಲಿ ಭಗವಂತನಿಗೆ ಸಮನಾದ ಅಥವಾ ಮಿಗಿಲಾದ ಇನ್ನೊಂದು ವಸ್ತುವನ್ನು ಹೇಳಿಲ್ಲ. ಭಗವಂತನ ಶಕ್ತಿ ಎಲ್ಲಕ್ಕಿಂತ ಮಿಗಿಲಾದ ಪರಾಶಕ್ತಿ. ಅವನ ಜ್ಞಾನ, ಬಲ, ಕ್ರಿಯೆ ಎಲ್ಲವೂ ಸ್ವಾಭಾವಿಕ.

 

ನ ತಸ್ಯ ಕಶ್ಚಿತ್ ಪತಿರಸ್ತಿ ಲೋಕೇ ನ ಚೇಶಿತಾ ನೈವ ಚ ತಸ್ಯ ಲಿಙ್ಗಮ್

ಸ ಕಾರಣಂ ಕರಣಾಧಿಪಾಧಿಪೋ ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ ೦೬.೦೯

 

 

ಭಗವಂತ ಹೀಗೇ ಎಂದು ತಾರ್ಕಿಕವಾಗಿ ಸಾಬೀತು ಮಾಡಲು ಸಾಧ್ಯವಿಲ್ಲ. ಅವನು ಜಗದ್ಜನ್ಮಾದಿ ಕಾರಣ ಎನ್ನುವುದನ್ನು ತಿಳಿದು ಆ ಕುರಿತು ಯೋಚಿಸುತ್ತಾ ಹೋದಂತೆ ಅವನು ನಮ್ಮ ಅನುಭವಕ್ಕೆ ಬರುತ್ತಾನೆ.

ನಮ್ಮ ಇಂದ್ರಿಯಗಳನ್ನು ರಕ್ಷಿಸಿಕೊಂಡು ಅದರಿಂದ ಅನುಭವವನ್ನು ಪಡೆವ ನಾವು ‘ಕರಣಪರು’. ಆದರೆ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಇಂದ್ರಿಯಾಭಿಮಾನಿ[2] ದೇವತೆಗಳು ‘ಕರಣಾಧಿಪರು’. ಈ ಎಲ್ಲಾ ದೇವತೆಗಳನ್ನು ನಿಯಂತ್ರಿಸುವ ಮುಖ್ಯಪ್ರಾಣ[3] ‘ಕರಣಾಧಿಪಾಪ’. ಈ ಪ್ರಾಣತತ್ವವನ್ನೂ ನಿಯಂತ್ರಿಸುವ ಭಗವಂತ  ಕರಣಾಧಿಪಾಧಿಪ’. ಇಂತಹ ಭಗವಂತನಿಗೆ ಅಧಿಪ ಇನ್ನೊಬ್ಬನಿಲ್ಲ. ಅಂದರೆ ಎಲ್ಲವನ್ನೂ ಸೃಷ್ಟಿಮಾಡುವ ಭಗವಂತನನ್ನು ಇನ್ನೊಬ್ಬ ಸೃಷ್ಟಿಮಾಡುವುದಿಲ್ಲ. ಇದನ್ನೇ ದಾಸರು ನನಗೆ ನಿನ್ನಂಥ ತಂದೆಯುಂಟು, ನಿನ್ನ ತಂದೆಯ ತೋರೋ[4] ಎಂದು ಹಾಡಿರುವುದು.

 

ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾನ್ತರಾತ್ಮಾ

ಕರ್ಮ್ಮಾಧ್ಯಕ್ಷಃ ಸರ್ವಭೂತಾಧಿವಾಸಃ  ಸಾಕ್ಷೀ ಚೇತಾ ಕೇವಲೋ ನಿರ್ಗ್ಗುಣಶ್ಚ ೦೬.೧೧

 

ಬಹಳ ಜನರಿಗೆ ‘ಭಾರತೀಯರು ಬಹುದೇವತಾವಾದಿಗಳು’ ಎನ್ನುವ ಕಲ್ಪನೆ ಇದೆ. ಆದರೆ ಅದು ಸರಿಯಲ್ಲ. ಬೇರೆಬೇರೆ ಮತಾಚಾರ್ಯರಲ್ಲಿ  ಅಭಿಪ್ರಾಯಭೇದವಿರಬಹುದು. ಆದರೆ ದೇವರು ಒಬ್ಬನೇ ಎನ್ನುವುದು ಎಲ್ಲರ ಸಾರ್ವತ್ರಿಕ ಸಿದ್ಧಾಂತ. ಯಾರು ದೇವರನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೋ, ಅವರಿಗೆ ಮೊದಲು ತಿಳಿಯುವುದೇನೆಂದರೆ ‘ಇಂತಹ ದೇವರು ಇನ್ನೊಬ್ಬನಿಲ್ಲ’ ಎನ್ನುವ ಸತ್ಯ. ಅಪರೋಕ್ಷದ ಅನುಭೂತಿಯಿಂದ ಈ ವಿಷಯವನ್ನು ಶ್ವೇತಾಶ್ವತರ ಮುನಿ ಇನ್ನೊಮ್ಮೆ ಒತ್ತು ಕೊಟ್ಟು ಹೇಳುವುದನ್ನು ನಾವಿಲ್ಲಿ ಕಾಣುತ್ತೇವೆ.

 ಏಕಃ ಶಬ್ದದ ನಿರ್ವಚನದಿಂದ ನೋಡಿದರೆ:  ಏಷ ಏವ ಕರೋತೀತಿ ಏಕಃ’.  ಜಗತ್ತಿನಲ್ಲಿ ಇರುವ ಎಲ್ಲವನ್ನೂ ಮಾಡಿದವನು ಅವನೊಬ್ಬನೇ, ಅಂಥವನು ಇನ್ನೊಬ್ಬನಿಲ್ಲ  ಎನ್ನುವ ವಿವರ ತಿಳಿಯುತ್ತದೆ. ‘ಏಕೋ ದೇವಃ’ ಎನ್ನುವುದು ‘ಜನ್ಮಾದಸ್ಯ ಯತಃ’ ಎನ್ನುವ ಭಾಗವತ ಸೂತ್ರದ ಅನುಸಂಧಾನವೇ ಆಗಿದೆ. ಈ ಪ್ರಪಂಚಕ್ಕೆ ಹತ್ತಾರು ಮಂದಿ ಒಡೆಯರಿಲ್ಲ.  ಅದು ಒಬ್ಬನದೇ ಸೃಷ್ಟಿ. ಹೀಗೆ ಸೃಷ್ಟಿ ಮಾಡಿದವನು ಎಲ್ಲಕ್ಕಿಂತ ಅತೀತ. ಇಂತಹ ಭಗವಂತನನ್ನು ಶ್ವೇತಾಶ್ವತರ ಮುನಿ ಇಲ್ಲಿ  ‘ದೇವಃ’ ಎಂದು ಸಂಬೋಧಿಸಿದ್ದಾನೆ. ಜಗತ್ತನ್ನು ಲೀಲಾಮಾತ್ರವಾಗಿ ಸೃಷ್ಟಿಮಾಡಿರತಕ್ಕ, ಸರ್ವಜ್ಞನೂ , ಸರ್ವಗತನೂ, ಸರ್ವಸಮರ್ಥನೂ ಆದ ಭಗವಂತ ‘ದೇವಃ’. ಇಚ್ಛಾಮಾತ್ರದಿಂದ,  ಕ್ರೀಡಾಮಾತ್ರದಿಂದ ಸೃಷ್ಟಿಮಾಡಿದ ಸತ್ಯಸಂಕಲ್ಪನಾದ ಪರಾಶಕ್ತಿ ಆ ಭಗವಂತ.

 ಸರ್ವಭೂತೇಷು ಗೂಢಃ - ಇಲ್ಲಿ ಭೂತಗಳು ಎಂದರೆ ಮುಖ್ಯವಾಗಿ ಭೂತಿಯನ್ನು ಪಡೆಯಬಲ್ಲ ಚೈತನ್ಯ. ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ” ಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು. ಇನ್ನು ಜಡಭೂತಗಳು ಎಂದರೆ ಪಂಚಭೂತಗಳಿಂದ ನಿರ್ಮಿತವಾದ ಸಮಸ್ತ ಪ್ರಪಂಚ. ಭಗವಂತ ಸಮಸ್ತ ಪ್ರಪಂಚದಲ್ಲಿ ಎಲ್ಲದರ ಒಳಗೂ ಹೊರಗೂ ತುಂಬಿರುವ ಸರ್ವವ್ಯಾಪಿ. ಅವನಿಲ್ಲದ ತಾಣವಿಲ್ಲ. ಆದರೆ ಅವನಿರುವುದು ನಮಗೆ ತಿಳಿಯುವುದಿಲ್ಲ(ಗೂಢಃ) ಅಷ್ಟೇ. 

ಸರ್ವಭೂತಾನ್ತರಾತ್ಮಾ- ಜೀವಾತ್ಮನ(ಚೇತನದ) ಒಳಗಿರುವ ಭಗವಂತನನ್ನು ‘ಅಂತರಾತ್ಮ’ ಎನ್ನುತ್ತಾರೆ.  ಭಗವಂತ ಸಮಸ್ತ ಜೀವದ ಅಂತರಾತ್ಮನಾಗಿರುವ ‘ಕರ್ಮಾಧ್ಯಕ್ಷಃ’. ಅವನು ಮೇಲೆ(ಉಪರಿ) ಕೂತು ಎಲ್ಲವನ್ನೂ ನೋಡುವ ಅಧ್ಯಕ್ಷ. ಇಂತಹ ಭಗವಂತನಲ್ಲಿ ಸಮಸ್ತಭೂತಗಳೂ ಆಶ್ರಯವನ್ನು ಪಡೆದಿವೆ(ಸರ್ವಭೂತಾಧಿವಾಸಃ). ಇಂತಹ ವಿಶ್ವತಶ್ಚಕ್ಷು-ವಿಶ್ವತೋಮುಖನಾದ ಭಗವಂತ ಎಲ್ಲವನ್ನೂ ಸಾಕ್ಷೀಭೂತನಾಗಿ, ಅಜ್ಞಾನದ ಸ್ಪರ್ಶವೇ ಇಲ್ಲದೆ(ಕೇವಲೋ), ಜ್ಞಾನದೃಷ್ಟಿಯಿಂದ(ಚೇತಾ)  ಕಾಣುತ್ತಿರುತ್ತಾನೆ. ಮೂರು ಗುಣಗಳ ಮೂಲಕ ಸೃಷ್ಟಿ-ಸಂಹಾರ-ಪಾಲನೆ ಮಾಡುವ ಭಗವಂತ, ಸ್ವತಃ ಗುಣಗಳನ್ನು ಅಂಟಿಸಿಕೊಳ್ಳುವುದಿಲ್ಲ. ಹೀಗೆ ತ್ರಿಗುಣಾತೀತನಾಗಿರುವ ಭಗವಂತನಿಗೆ ದುಃಖವಾಗಲೀ ಅಜ್ಞಾನದ ಸ್ಪರ್ಶವಾಗಲೀ ಇಲ್ಲವೇ  ಇಲ್ಲಾ. ಅವನು ಜ್ಞಾನಾನಂದ ಸ್ವರೂಪ.

 

ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್

ತತ್ಕಾರಣಂ ಸಾಂಖ್ಯಯೋಗಾಧಿಗಮ್ಯಂ ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ ೦೬.೧೩

 

ಈ ಶ್ಲೋಕದ ಪೂರ್ವಾರ್ಧವನ್ನು ಕಠೋಪನಿಷತ್ತಿನಲ್ಲೂ(೨.೨.೧೩) ಕಾಣಬಹುದು. ನಮ್ಮೆಲ್ಲಾ ಅಪೇಕ್ಷೆಗಳನ್ನೂ ಈಡೇರಿಸುವ ಭಗವಂತ ನಾವು ಬಯಸಿದ್ದನ್ನು ಕರುಣಿಸುವ ಭಕ್ತವತ್ಸಲ. ಅನಂತ ಜೀವರಿಗೆ ಭಗವಂತ ಒಬ್ಬನೇ  ಹಾಗೂ ಅವನೇ ಎಲ್ಲರ ಬಯಕೆಗಳನ್ನು ಈಡೇರಿಸುವ ಕರುಣಾಸಿಂಧು. ಎಲ್ಲಾ ನಿತ್ಯಗಳಿಗೆ ನಿತ್ಯತ್ವವನ್ನು ಕೊಟ್ಟ, ನಿತ್ಯಗಳ ನಿತ್ಯ, ಚೇತನಗಳ ಚೇತನ, ಆ ಭಗವಂತ.

ಇಲ್ಲಿ ಶ್ವೇತಾಶ್ವತರರು ಹೇಳುತ್ತಾರೆ: ‘ಅರಿವು(ಸಂಖ್ಯ) ಮತ್ತು ಅನುಷ್ಠಾನದಿಂದ(ಸಾಧನೆಯಿಂದ) ನಾವು ಭಗವಂತನನ್ನು ಕಂಡೆವು’ ಎಂದು. ಈ ರೀತಿ ಭಗವಂತನನ್ನು ತಿಳಿದವನು ‘ಸಮಸ್ತ ಬಂಧನದಿಂದ ಕಳಚಿಕೊಳ್ಳುತ್ತಾನೆ’.

 

ನ ತತ್ರ ಸೂರ್ಯ್ಯೋ ಭಾತಿ ನ ಚನ್ದ್ರತಾರಕಂ ನೇಮಾ ವಿದ್ಯುತೋ ಭಾನ್ತಿ ಕುತೋಽಯಮಗ್ನಿಃ

ತಮೇವ ಭಾನ್ತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ೦೬.೧೪

 

ಈ ಮಂತ್ರವನ್ನೂ  ಕೂಡಾ ನಾವು ಕಠೋಪನಿಷತ್ತಿನಲ್ಲಿ(೨.೨.೧೩) ಕಾಣುತ್ತೇವೆ.   ಭಗವಂತನ ಬಗೆಗೆ ತಮಗಾದ ಅಂತರ್ದರ್ಶನದ ಇನ್ನೊಂದು ಮುಖವನ್ನು ಶ್ವೇತಾಶ್ವತರರು ಇಲ್ಲಿ ವಿವರಿಸಿದ್ದಾರೆ. ಭಗವಂತನನ್ನು ಸೂರ್ಯನಾಗಲಿ, ಚಂದ್ರನಾಗಲೀ, ಮಿಂಚು-ನಕ್ಷತ್ರವಾಗಲೀ, ಅಗ್ನಿಯಾಗಲೀ, ಬೆಳಗಿಸಿ ತೋರಿಸಲಾರವು. ಏಕೆಂದರೆ ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನೀಯುವ ಮೂಲ ಬೆಳಕು ಆ ಭಗವಂತ. ಭಗವಂತನ ಬೆಳಕಿಗೆ ಅನುಗುಣವಾಗಿ ಕಣ್ಣಿಗೆ ಕಾಣುವ ಈ ಬೆಳಕುಗಳಿವೆ. ಎಲ್ಲಾ ಬೆಳಕುಗಳ ಒಳಗೆ ಬೆಳಕಾಗಿ ಭಗವಂತ ತುಂಬಿದ್ದಾನೆ. ಎಲ್ಲಾ ಬೆಳಕುಗಳೂ ಭಗವಂತನ ಬೆಳಕಿನ ಪ್ರತಿಫಲನ. ಭಗವಂತನಲ್ಲದ, ಸ್ವತಂತ್ರವಾದ ಬೆಳಕು ಈ ಪ್ರಪಂಚದಲ್ಲಿಲ್ಲ.  ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ‘ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ । ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ  ೧೫-೬॥  ‘ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ’.

 

ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ

ತಂ ಹ ದೇವಂ ಆತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ ೦೬.೧೮

 

‘ಸೃಷ್ಟಿಪೂರ್ವದಲ್ಲಿ ನೀನು ನಿನ್ನ ಮೊದಲ ಮಗನಾದ ಚತುರ್ಮುಖಬ್ರಹ್ಮನಿಗೆ ಉಪದೇಶವನ್ನು ಮಾಡಿ, ಸೃಷ್ಟಿ ವಿಜ್ಞಾನದ ರಹಸ್ಯಗಳ ವೇದ-ವಾಙ್ಮಯವನ್ನು ಕ್ಷಣಮಾತ್ರದಲ್ಲಿ ಅವನಿಗೆ ನೀಡಿದೆ.  ನಾನು ನಿನ್ನ ಮಕ್ಕಳಲ್ಲಿ ಕೊನೇಯವನಾಗಿರಬಹುದು. ಆದರೂ ಕೂಡಾ, ನಾನೂ ನಿನ್ನ ಮಗನಲ್ಲವೇ? ಹೇಗೆ ಚತುರ್ಮುಖನಿಗೆ ಜ್ಞಾನವನ್ನು ನೀಡಿದೆಯೋ ಹಾಗೇ, ನನಗೂ, ಕಿಂಚಿತ್ ಆದರೂ  ಜ್ಞಾನವನ್ನು ಕೊಡು. ನಿನ್ನ ಸ್ವರೂಪದ ಬುದ್ಧಿಯ ಪ್ರಕಾಶ ನನ್ನಲ್ಲಾಗಬೇಕೆಂದರೆ ಅದನ್ನು ನೀನೇ ಕೊಡಬೇಕು. ನಾನು ನಿನ್ನಲ್ಲಿ ಶರಣು ಬಂದಿದ್ದೇನೆ. ನನಗೆ ಈ ಪ್ರಾಪಂಚಿಕ ಬಂಧನ ಬೇಡವಾಗಿದೆ. ನನ್ನನ್ನು ನಿನ್ನ ಪಾದದೆಡೆಗೆ  ಕರೆದುಕೋ’    ಇದು ಭಗವಂತನಲ್ಲಿ ಶ್ವೇತಾಶ್ವತರ ಮುನಿಯ ಪ್ರಾರ್ಥನೆ.

 

ಯದಾ ಚರ್ಮ್ಮವದಾಕಾಶಂ ವೇಷ್ಟಯಿಷ್ಯನ್ತಿ ಮಾನವಾಃ

ತದಾ ದೇವಮವಿಜ್ಞಾಯ ದುಃಖಸ್ಯಾನ್ತೋ ಭವಿಷ್ಯತಿ ೦೬.೨೦

 

ಯಸ್ಯ ದೇವೇ ಪರಾ ಭಕ್ತಿಃ ಯಥಾ ದೇವೇ ತಥಾ ಗುರೌ

ತಸ್ಯೈತೇ ಕತ್ಥಿತಾ ಹ್ಯರ್ತ್ಥಾಃ ಪ್ರಕಾಶನ್ತೇ ಮಹಾತ್ಮನಃ ಪ್ರಕಾಶನ್ತೇ ಮಹಾತ್ಮನ ಇತಿ ೦೬.೨೩

 

‘ಹೇಗೆ ಆಕಾಶವನ್ನು ಚಾಪೆಯಂತೆ ಮಡಚಲು ಸಾಧ್ಯವಿಲ್ಲವೋ ಹಾಗೇ, ಭಗವಂತನನ್ನು ತಿಳಿಯದೇ ದುಃಖ ಕೊನೆಯಾಗುವುದು ಸಾಧ್ಯವಿಲ್ಲ’

ಭಗವಂತನನ್ನು ಕಾಣುವ ಸುಲಭ ಉಪಾಯ  ಎಂದರೆ ‘ಎಲ್ಲಕ್ಕಿಂತ ಮಿಗಿಲಾಗಿ ಅವನನ್ನು ಪ್ರೀತಿಸುವುದು’. ತಿಳಿಯದೇ ಇರುವ ಭಗವಂತನನ್ನು ತಿಳಿಯಲು ನಾವು ಗುರುವಿನ ಬೆನ್ನು ಹತ್ತಬೇಕು. ‘ಯಾರಿಗೆ ಭಗವಂತನಲ್ಲಿ ಭಕ್ತಿ ಇದೆಯೋ, ಯಾರಿಗೆ ಗುರುವಿನಲ್ಲಿ ಅಚಲವಾದ  ನಿಷ್ಠೆ ಇದೆಯೋ, ಅವನಿಗೆ ವೇದ ತೆರೆದುಕೊಳ್ಳುತ್ತದೆ’. ಇದು ಶ್ವೇತಾಶ್ವತರ ಮುನಿ ನಮಗೆ ನೀಡಿದ ಸಂದೇಶ.

ಶ್ವೇತಾಶ್ವತರ ಮುನಿಯ ಈ ಸಂದೇಶದೊಂದಿಗೆ ಆರು ಅಧ್ಯಾಯಗಳ ಈ ಉಪನಿಷತ್ತು ಇಲ್ಲಿಗೆ ಮುಕ್ತಾಯವಾಯಿತು.

 

 

̐  ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯ್ಯಂ ಕರವಾವಹೈ

ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ ಓ̐ ಶಾನ್ತಿಃ ಶಾನ್ತಿಃ ಶಾನ್ತಿಃ



[1] ಅಗ್ನಿಃ ಪೂರ್ವೇಭಿರೃಷಿಭಿರೀಡ್ಯೋ ನೂತನೈರುತ (ಋಗ್ವೇದ ೧.೧.೨), ಭಗವಂತನನ್ನು ಕಂಡು ಭಗವಂತನನ್ನು ಕೊಂಡಾಡಿದ ಜ್ಞಾನಿಗಳ ಪರಂಪರೆಯೇ ಅಪೌರುಷವಾಗಿರುವ ವೈದಿಕ ಸಾಹಿತ್ಯ. ಭಗವಂತ ಭುವನೇಶ ಎನ್ನುವುದು ಸಾವಿರ-ಸಾವಿರ ವರ್ಷಗಳಿಂದ ಋಷಿಗಳ ಅನುಭವದ ಹಿನ್ನೆಲೆ ಇರುವ ಸತ್ಯ- ಭುವನೇಶಮೀಡ್ಯಮ್’ .

[2] ಕಣ್ಣಿನ ದೇವತೆ ಸೂರ್ಯ, ಕಿವಿಯ ದೇವತೆ ಚಂದ್ರ, ಮೂಗಿನ ದೇವತೆ ಅಶ್ವೀದೇವತೆಗಳು, ವಾಗೀನ್ದ್ರಿಯ ದೇವತೆ ಅಗ್ನಿ, ನಾಲಿಗೆಯ ದೇವತೆ ವರುಣ, ಹೀಗೆ ಪ್ರತಿಯೊಂದು ಇಂದ್ರಿಯಗಳಿಗೂ  ಒಬ್ಬ ಅಭಿಮಾನಿ ದೇವತೆ ಇರುತ್ತಾನೆ.

[3] ಯಾವ ರೀತಿ ಸಮಸ್ತ ಇಂದ್ರಿಯಾಭಿಮಾನಿ ದೇವತೆಗಳಿಗೂ ಮುಖ್ಯಪ್ರಾಣ ಅಧಿಕ ಎನ್ನುವ ವಿವರಣೆಯನ್ನು ಪ್ರಶ್ನೋಪನಿಷತ್ತಿನ ಎರಡನೇ ಪ್ರಶ್ನೆಯಲ್ಲಿ ಸುಂದರವಾದ ಕಥೆಯ ರೂಪದಲ್ಲಿ ವಿವರಿಸಿರುವುದನ್ನು ಕಾಣಬಹುದು.

[4] ನಿನ್ನಂಥ ತಂದೆ  ನನಗುಂಟು ನಿನಗಿಲ್ಲ ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ ನಿನ್ನಂಥ ದೊರೆ  ಎನಗುಂಟು ನಿನಗಿಲ್ಲ ನೀನೇ ಪರದೇಶಿ ನಾನೇ ಸ್ವದೇಶಿ   ನಿನ್ನ ಅರಸಿ ಲಕ್ಷ್ಮೀ  ಎನಗೆ ತಾಯಿಯುಂಟು ಎನಗಿದ್ದ ತಾಯಿ ತಂದೆ ನಿನಗ್ಯಾರು 

ತೋರೋ ಪುರಂದರವಿಠಲ.

 

ಮೂಲಶ್ಲೋಕ- ಷಷ್ಠೋಽಧ್ಯಾಯಃ

 

ಮೂಲಶ್ಲೋಕ- ಷಷ್ಠೋಽಧ್ಯಾಯಃ

̐

ಸ್ವಭಾವಮೇಕೇ ಕವಯೋ ವದನ್ತಿ  ಕಾಲಂ ತಥಾನ್ಯೇ ಪರಿಮುಹ್ಯಮಾನಾಃ

ದೇವಸ್ಯೈಷ ಮಹಿಮಾ ತು ಲೋಕೇ ಯೇನೇದಂ ಭ್ರಾಮ್ಯತೇ ಬ್ರಹ್ಮಚಕ್ರಮ್ ೦೬.೦೧

 

ಯೇನಾವೃತಂ ನಿತ್ಯಮಿದಂ ಹಿ ಸರ್ವಂ ಜ್ಞಃ ಕಾಲಕಾರೋ ಗುಣೀ ಸರ್ವವಿದ್ ಯಃ

ತೇನೇಶಿತಂ ಕರ್ಮ್ಮ ವಿವರ್ತ್ತತೇಹ ಪೃಥಿವ್ಯಪ್ತೇಜೋನಿಲಖಾನಿ ಚಿನ್ತ್ಯಮ್ ೦೬.೦೨

 

ತತ್ಕರ್ಮ್ಮ ಕೃತ್ವಾ ವಿನಿವರ್ತ್ತ್ಯ ಭೂಯಸ್ತತ್ತ್ವಸ್ಯ ತಾವೇನ ಸಮೇತ್ಯ ಯೋಗಮ್

ಏಕೇನ ದ್ವಾಭ್ಯಾಂ ತ್ರಿಭಿರಷ್ಟಭಿರ್ವಾ ಕಾಲೇನ ಚೈವಾತ್ಮಗುಣೈಶ್ಚ ಸೂಕ್ಷ್ಮೈಃ ೦೬.೦೩

 

ಆರಭ್ಯ ಕರ್ಮ್ಮಾಣಿ ಗುಣಾನ್ವಿತಾನಿ ಭಾವಾಂಶ್ಚ ಸರ್ವಾನ್ ವಿನಿಯೋಜಯೇದ್ ಯಃ

ತೇಷಾಮಭಾವೇ ಕೃತಕರ್ಮ್ಮನಾಶಃ ಕರ್ಮ್ಮಕ್ಷಯೇ ಯಾತಿ ಸ ತತ್ತ್ವತೋಽನ್ಯಃ ೦೬.೦೪

 

ಆದಿಃ ಸ ಸಂಯೋಗನಿಮಿತ್ತಹೇತುಃ ಪರಸ್ತ್ರಿಕಾಲಾದಕಲೋಽಪಿ ದೃಷ್ಟಃ

ತಂ ವಿಶ್ವರೂಪಂ ಭವಭೂತಮೀಡ್ಯಂ ದೇವಂ ಸ್ವಚಿತ್ತಸ್ಥಮುಪಾಸ್ಯ ಪೂರ್ವಮ್ ೦೬.೦೫

 

ಸ ವೃಕ್ಷಕಾಲಾಕೃತಿಭಿಃ ಪರೋಽನ್ಯೋ ಯಸ್ಮಾತ್ ಪ್ರಪಞ್ಚಃ ಪರಿವರ್ತ್ತತೇಽಯಮ್

ಧರ್ಮ್ಮಾವಹಂ ಪಾಪನುದಂ ಭಗೇಶಂ ಜ್ಞಾತ್ವಾಽತ್ಮಸ್ಥಮಮೃತಂ ವಿಶ್ವಧಾಮ ೦೬.೦೬

 

ತಮೀಶ್ವರಾಣಾಂ ಪರಮಂ ಮಹೇಶ್ವರಂ ತಂ ದೇವತಾನಾಂ ಪರಮಂ ಚ ದೈವತಮ್

ಪತಿಂ ಪತೀನಾಂ ಪರಮಂ ಪರಸ್ತಾದ್ವಿದಾಮ ದೇವಂ ಭುವನೇಶಮೀಡ್ಯಮ್ ೦೬.೦೭

 

ನ ತಸ್ಯ ಕಾರ್ಯ್ಯಂ ಕರಣಂ ಚ ವಿದ್ಯತೇ ನ ತತ್ಸಮಶ್ಚಾಭ್ಯಧಿಕಶ್ಚ ದೃಶ್ಯತೇ

ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ ಸ್ವಾಭಾವಿಕೀ ಜ್ಞಾನಬಲಕ್ರಿಯಾ ಚ ೦೬.೦೮

 

ನ ತಸ್ಯ ಕಶ್ಚಿತ್ ಪತಿರಸ್ತಿ ಲೋಕೇ ನ ಚೇಶಿತಾ ನೈವ ಚ ತಸ್ಯ ಲಿಙ್ಗಮ್

ಸ ಕಾರಣಂ ಕರಣಾಧಿಪಾಧಿಪೋ ನ ಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪಃ ೦೬.೦೯

 

ಯಸ್ತನ್ತುನಾಭ ಇವ ತಂತುಭಿಃ ಪ್ರಧಾನಜೈಃ ಸ್ವಭಾವತಃ

ದೇವ ಏಕಃ ಸ್ವಮಾವೃಣೋತಿ ಸ ನೋ ದಧಾತು ಬ್ರಹ್ಮಾಪ್ಯಯಮ್ ೦೬.೧೦

 

ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾನ್ತರಾತ್ಮಾ

ಕರ್ಮ್ಮಾಧ್ಯಕ್ಷಃ ಸರ್ವಭೂತಾಧಿವಾಸಃ  ಸಾಕ್ಷೀ ಚೇತಾ ಕೇವಲೋ ನಿರ್ಗ್ಗುಣಶ್ಚ ೦೬.೧೧

 

ಏಕೋ ವಶೀ ನಿಷ್ಕ್ರಿಯಾಣಾಂ ಬಹೂನಾಮೇಕಂ ಬೀಜಂ ಬಹುಧಾ ಯಃ ಕರೋತಿ

ತಮಾತ್ಮಸ್ಥಂ ಯೇಽನುಪಶ್ಯನ್ತಿ ಧೀರಾಸ್ತೇಷಾಂ ಸುಖಂ ಶಾಶ್ವತಂ ನೇತರೇಷಾಮ್ ೦೬.೧೨

 

ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್

ತತ್ಕಾರಣಂ ಸಾಂಖ್ಯಯೋಗಾಧಿಗಮ್ಯಂ ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ ೦೬.೧೩

 

ನ ತತ್ರ ಸೂರ್ಯ್ಯೋ ಭಾತಿ ನ ಚನ್ದ್ರತಾರಕಂ ನೇಮಾ ವಿದ್ಯುತೋ ಭಾನ್ತಿ ಕುತೋಽಯಮಗ್ನಿಃ

ತಮೇವ ಭಾನ್ತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ೦೬.೧೪

 

ಏಕೋ ಹಂಸಃ ಭುವನಸ್ಯಾಸ್ಯ ಮದ್ಧ್ಯೇ ಸ ಏವಾಗ್ನಿಃ ಸಲಿಲೇ ಸಂನಿವಿಷ್ಟಃ

ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪನ್ಥಾ ವಿದ್ಯತೇಽಯನಾಯ ೦೬.೧೫

 

ಸ ವಿಶ್ವಕೃದ್ ವಿಶ್ವವಿದಾತ್ಮಯೋನಿರ್ಜ್ಞಃ ಕಾಲಕಾಲೋ ಗುಣೀ ಸರ್ವವಿದ್ಯಃ

ಪ್ರಧಾನಕ್ಷೇತ್ರಜ್ಞಪತಿರ್ಗ್ಗುಣೇಶಃ ಸಂಸಾರಮೋಕ್ಷಸ್ಥಿತಿಬನ್ಧಹೇತುಃ ೦೬.೧೬

 

 

ಸ ತನ್ಮಯೋ ಹ್ಯಮೃತ ಈಶಸಂಸ್ಥೋ ಜ್ಞಃ ಸರ್ವಗೋ ಭುವನಸ್ಯಾಸ್ಯ ಗೋಪ್ತಾ

ಯ ಈಶೇಽಸ್ಯ ಜಗತೋ ನಿತ್ಯಮೇವ ನಾನ್ಯೋ ಹೇತುರ್ವಿದ್ಯತ ಈಶನಾಯ ೦೬.೧೭

 

ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ

ತಂ ಹ ದೇವಂ ಆತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ ೦೬.೧೮

 

ನಿಷ್ಕಲಂ ನಿಷ್ಕ್ರಿಯಂ ಶಾನ್ತಂ ನಿರವದ್ಯಂ ನಿರಞ್ಜನಮ್

ಅಮೃತಸ್ಯ ಪರಂ ಸೇತುಂ ದಗ್ಧೇಂದನಮಿವಾನಲಮ್ ೦೬.೧೯

 

ಯದಾ ಚರ್ಮ್ಮವದಾಕಾಶಂ ವೇಷ್ಟಯಿಷ್ಯನ್ತಿ ಮಾನವಾಃ

ತದಾ ದೇವಮವಿಜ್ಞಾಯ ದುಃಖಸ್ಯಾನ್ತೋ ಭವಿಷ್ಯತಿ ೦೬.೨೦

 

ತಪಃಪ್ರಭಾವಾದ್ ದೇವಪ್ರಸಾದಾಚ್ಚ ಬ್ರಹ್ಮ ಹ ಶ್ವೇತಾಶ್ವತರೋಽಥ ವಿದ್ವಾನ್

ಅತ್ಯಾಶ್ರಮಿಭ್ಯಃ ಪರಮಂ ಪವಿತ್ರಂ ಪ್ರೋವಾಚ ಸಮ್ಯಗೃಷಿಸಙ್ಘಜುಷ್ಟಮ್ ೦೬.೨೧

 

ವೇದಾನ್ತೇ ಪರಮಂ ಗುಹ್ಯಂ ಪುರಾಕಲ್ಪೇ ಪ್ರಚೋದಿತಮ್

ನಾಽಪ್ರಶಾನ್ತಾಯ ದಾತವ್ಯಂ ನಾಽಪುತ್ರಾಯಾಶಿಷ್ಯಾಯ ವಾ ಪುನಃ ೦೬.೨೨

 

ಯಸ್ಯ ದೇವೇ ಪರಾ ಭಕ್ತಿಃ ಯಥಾ ದೇವೇ ತಥಾ ಗುರೌ

ತಸ್ಯೈತೇ ಕತ್ಥಿತಾ ಹ್ಯರ್ತ್ಥಾಃ ಪ್ರಕಾಶನ್ತೇ ಮಹಾತ್ಮನಃ ಪ್ರಕಾಶನ್ತೇ ಮಹಾತ್ಮನ ಇತಿ ೦೬.೨೩

 

̐  ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯ್ಯಂ ಕರವಾವಹೈ

ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ

̐  ಶಾನ್ತಿಃ ಶಾನ್ತಿಃ ಶಾನ್ತಿಃ

 

******************