ಭಾನುವಾರ, ಏಪ್ರಿಲ್ 25, 2021

ಭಾವಾನುವಾದ- ಅಧ್ಯಾಯ ೦೩

 

ಭಾವಾನುವಾದ- ಅಧ್ಯಾಯ ೦೩

 

̐

ಈ ಈ ಅಧ್ಯಾಯದಲ್ಲಿ ಶ್ವೇತಾಶ್ವತರ ಮುನಿ ತಾನು ಧ್ಯಾನದಲ್ಲಿ ಕಂಡ ಭಗವಂತನ ಮಹಿಮೆಯನ್ನು ವರ್ಣನೆ ಮಾಡುವುದನ್ನು ಕಾಣುತ್ತೇವೆ. ಇಲ್ಲಿ ಬಂದಿರುವ ಹೆಚ್ಚಿನ ಶ್ಲೋಕಗಳು ವೇದದ ಬೇರೆಬೇರೆ ಭಾಗಗಳಲ್ಲಿ, ಇತರ ಉಪನಿಷತ್ತಿನಲ್ಲಿ ಬಂದ ಮಂತ್ರಗಳಾಗಿವೆ. ತನಗೇನು ಅನುಭವವಾಯಿತು, ಅದು ಬೇರೆ ಮಂತ್ರಗಳನ್ನು ಕಂಡ ಋಷಿಗಳಿಗೂ ಅನುಭವವಾಗಿತ್ತು ಎನ್ನುವ ಸಂವಾದಕ್ಕೊಸ್ಕರ, ಅದೇ ಮಂತ್ರಗಳನ್ನು ಆಯ್ಕೆ ಮಾಡಿಕೊಂಡು ಹೇಳುವುದು ಆರ್ಷ ಸಂಪ್ರದಾಯ. ಇದಕ್ಕಾಗಿ ಕೆಲವೊಮ್ಮೆ ‘ತದಪ್ಯೇಶ ಶ್ಲೋಕೋ ಭವತಿ’ - ಈ ರೀತಿಯ ಶ್ಲೋಕ ಇದೆ ಎಂದು ಉಲ್ಲೇಖಿಸುತ್ತಾರೆ ಕೂಡ. ಹೀಗೆ ಬೇರೆಬೇರೆ ಋಷಿಗಳ ದರ್ಶನವನ್ನು ತನ್ನ ದರ್ಶನ ಜೊತೆಗೆ ಸಮೀಕರಿಸಿ, ಆ ಮಂತ್ರಗಳ ಮೂಲಕ ತಾನು ಕಂಡ ಸತ್ಯದ ಅನುಸಂಧಾನವನ್ನು, ತನ್ನ ಅನುಭೂತಿಯನ್ನು ಶ್ವೇತಾಶ್ವತರ ಮುನಿ ನಮ್ಮ ಮುಂದಿಟ್ಟಿರುವುದನ್ನು ನಾವಿಲ್ಲಿ ಕಾಣುತ್ತೇವೆ.

 

ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುರ್ಯ್ಯ ಇಮಾ̐ಲ್ಲೋಕಾನೀಶತೇ ಈಶನೀಭಿಃ

ಪ್ರತ್ಯಙ್ಜನಾಸ್ತಿಷ್ಠತಿ ಸಞ್ಚುಕೋಚಾನ್ತಕಾಲೇ  ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ ೦೩.೦೨

 

‘ನಮ್ಮ ಬದುಕಿನ ಬವಣೆಗಳನ್ನು ಪರಿಹಾರ ಮಾಡಿ,  ಸಂಸಾರದುಃಖವನ್ನು ಪರಿಹರಿಸಿ, ನಮಗೆ ಮೋಕ್ಷ ಕೊಡಬಲ್ಲ ಶಕ್ತಿ ಆ ಭಗವಂತನೊಬ್ಬನೇ. ಅಂತಹ ಹತ್ತಾರು ಶಕ್ತಿಗಳಿಲ್ಲ. ಸರ್ವಶಕ್ತನಾದ ಒಬ್ಬ ಮಾತ್ರ ನಮ್ಮ ಭವ-ಬಂಧನಗಳನ್ನು ಬಿಡಿಸಿ ಮೋಕ್ಷ  ಕೊಡಬಲ್ಲ.  ಪ್ರತಿಯೊಬ್ಬ ಜೀವರನ್ನು ಜ್ಞಾನಶಕ್ತಿ, ಇಚ್ಛಾಶಕ್ತಿ, ಮತ್ತು ಕ್ರಿಯಾಶಕ್ತಿಗಳ ಮಾಧ್ಯಮದಿಂದ ನಿಯಂತ್ರಿಸುವ ಭಗವಂತ-ತ್ರಿನೇತ್ರ. ಸೃಷ್ಟಿಕರ್ತನಾದ ಭಗವಂತ ಎಲ್ಲರೊಳಗೂ ತುಂಬಿ,  ಸೃಷ್ಟಿಸಿದ ಸಮಸ್ತವನ್ನೂ ಪಾಲನೆ-ನಿಯಮನಮಾಡಿ, ಕೊನೆಗೆ ಆಯಸ್ಸು ಮುಗಿದಮೇಲೆ ಸಂಕೋಚಗೊಳಿಸುವ ಮೋಕ್ಷಪ್ರದ’.

ಈ ಶ್ಲೋಕದಲ್ಲಿ ‘ರುದ್ರ ಎನ್ನುವ ಪದಪ್ರಯೋಗವನ್ನು ಕಾಣುತ್ತೇವೆ. ವಿಷ್ಣುಸಹಸ್ರನಾಮದಲ್ಲೂ ‘ರುದ್ರೋ ಬಹುಶಿರಾ ಬಭ್ರುಃ...’ ಎನ್ನುವಲ್ಲಿ ರುದ್ರಃ ಎನ್ನುವ ನಾಮವನ್ನು ಕಾಣುತ್ತೇವೆ. ಬ್ರಹ್ಮಾಂಡಪುರಾಣದಲ್ಲಿ ‘ರುಜಂ ದ್ರಾವಯತೇ ಯಸ್ಮಾತ್...’ ಎಂದರೆ ‘ರುದ್ರಸ್ತಸ್ಮಾತ್ ಜನಾರ್ದನಃ’ ಎನ್ನುತ್ತದೆ ವಾಮನಪುರಾಣ. ಹೀಗೆ ಭಗವಂತನನ್ನು ‘ರುದ್ರಃ’ ಎಂದು ಕರೆಯುವುದನ್ನು ನಾವು ಅನೇಕ ಕಡೆಗಳಲ್ಲಿ ಕಾಣುತ್ತೇವೆ.  ಕೆಲವು ಶಬ್ದಗಳು ಕೆಲವೊಂದು ವಿಶಿಷ್ಟ ಅರ್ಥದಲ್ಲಿ ಬಳಕೆಯಲ್ಲಿ ಬಂದಾಗ, ಆ ಶಬ್ದದ ಮೂಲಾರ್ಥ  ನಮಗೆ ಮರೆತು ಹೋಗುತ್ತದೆ. ಇಂದು ರುದ್ರ ಎಂದರೆ ‘ಭಯಂಕರ’  ಎನ್ನುವ ಅರ್ಥವಷ್ಟೇ ಸಾಮಾನ್ಯವಾಗಿ ಬಳಕೆಯಲ್ಲಿದೆ. ಈ ಅರ್ಥವನ್ನು ಶಾಸ್ತ್ರದಲ್ಲೂ ಬಳಸುತ್ತಾರೆ. ಆದರೆ ಈ ಶಬ್ದಕ್ಕೆ ಇನ್ನೂ ಅನೇಕ ಸುಂದರವಾದ ಅರ್ಥಗಳಿರುವುದು ಶಬ್ದದ ನಿರ್ವಚನವನ್ನು ನೋಡಿದಾಗ ತಿಳಿಯುತ್ತದೆ. ಉದಾಹರಣೆಗೆ ‘ರುಚಂ-ದ್ರಾವಯತೀತಿ ರುದ್ರಃ’. ಅಂದರೆ  ನಮ್ಮ ಸಂಸಾರ ದುಃಖವನ್ನು ಪರಿಹರಿಸಿ ಮೋಕ್ಷವನ್ನು ಕರುಣಿಸುವ ಶಕ್ತಿ ರುದ್ರಃ ಎಂದರ್ಥ. ಇಲ್ಲಿ ‘ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುಃ’ ಎಂದಿದ್ದಾರೆ. ಅಂದರೆ ‘ಈ ಪ್ರಪಂಚದಲ್ಲಿ ಮೋಕ್ಷಪ್ರದನಾದ ಭಗವಂತ ಒಬ್ಬನೇ ಒಬ್ಬ. ಅಂತಹ ಶಕ್ತಿ ಇನ್ನೊಂದಿಲ್ಲ’ ಎಂದರ್ಥ. ಹೀಗೆ ದೇವರು ಅನೇಕ ಅಲ್ಲ, ಅವನೊಬ್ಬನೇ ಎನ್ನುವುದನ್ನು ಋಷಿಗಳು ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಲೋಕ ಎಂದರೆ ಜೀವಸಮುದಾಯ ಎಂದರ್ಥ. ಶಬ್ದ ನಿಷ್ಪತ್ತಿಯಲ್ಲಿ(etymologically) ನೋಡಿದಾಗ ಲೋಕ ಎನ್ನುವುದಕ್ಕೆ  ಜ್ಞಾನಿಗಳು ಎನ್ನುವ ವಿಶೇಷ ಅರ್ಥವೂ ಇದೆ. ಇದಲ್ಲದೇ  ಸಂಸಾರದಲ್ಲಿರತಕ್ಕ  ಸಂಸಾರಿಯಾದ ಜೀವರನ್ನೂ ಲೋಕಿಗಳು ಎನ್ನುತ್ತಾರೆ.(ಮೋಕ್ಷಕ್ಕೆ ಹೋದ ಜೀವರನ್ನು ಆಲೋಕರು ಅಂದರೆ ಲೋಕವನ್ನು ದಾಟಿದವರು ಎನ್ನುತ್ತಾರೆ). ಭಗವಂತ ಜ್ಞಾನಿಗಳನ್ನಷ್ಟೇ ಅಲ್ಲ, ಸಮಸ್ತ ಸಂಸಾರಿಗಳನ್ನು ನಿಯಂತ್ರಿಸುವ ಶಕ್ತಿ.

ಇಲ್ಲಿ ‘ಈಶತೇ’ ಎನ್ನುವ ಬಹುವಚನ ಪ್ರಯೋಗವನ್ನು ಓದುಗರು ಗಮನಿಸಬೇಕು. ಭಗವಂತ ಅನಂತ ಮಾಧ್ಯಮಗಳ ಮೂಲಕ ಲೋಕವನ್ನು ನಿಯಂತ್ರಿಸುತ್ತಾನೆ. ಮೇಲೆ ಹೇಳಿದಂತೆ ಭಗವಂತ ಮೂರು ಶಕ್ತಿಗಳ(ತ್ರಿನೇತ್ರ) ಮೂಲಕ ಜಗತ್ತನ್ನು ನಿಯಂತ್ರಿಸುತ್ತಾನೆ. ನರಸಿಂಹ, ಶಿವ ಮತ್ತು ದುರ್ಗೆಯ ಉಪಾಸನೆಯಲ್ಲೂ ನಾವು ತ್ರಿನೇತ್ರ-ಉಪಾಸನಾ ಪದ್ಧತಿಯನ್ನು ಕಾಣುತ್ತೇವೆ. ಮೂರು ಕಣ್ಣು ಎಂದರೆ ಅದು ಜಗತ್ತನ್ನು ನಿಯಂತ್ರಿಸುವ ಮೂರು ಶಕ್ತಿಗಳು.  ಸಾಮಾನ್ಯವಾಗಿ ಸತ್ವ-ರಜಸ್ಸು-ತಮಸ್ಸನ್ನು ಮೂರು ಶಕ್ತಿಗಳು ಎನ್ನುತ್ತಾರೆ. ಆದರೆ ಅಷ್ಟೇ ಅಲ್ಲ,  ಜಗತ್ತನ್ನು ನಿಯಂತ್ರಿಸುವ ಮೂರು ಮೂಲಶಕ್ತಿಗಳೆಂದರೆ: ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ. ಇವೇ ಆ ಮೂರು ಕಣ್ಣುಗಳು. ಈ ಮೂರಿಲ್ಲದೇ ಯಾವ  ಸೃಷ್ಟಿಯೂ ಆಗುವುದಿಲ್ಲ. ಈ ಮೂರು ಕಣ್ಣುಳ್ಳವರು ಮುಕ್ಕಣ್ಣರಾಗುತ್ತಾರೆ. ಒಂದು ದೃಷ್ಟಿಯಿಂದ ಎಲ್ಲರೂ ಮುಕ್ಕಣ್ಣರೇ. ಆ ಶಕ್ತಿ ನಮ್ಮಲ್ಲಿ ಜಾಗೃತವಾದಾಗ ಅದು ವ್ಯಕ್ತವಾಗುತ್ತದೆ.  ಭಗವಂತನಲ್ಲಿ ಈ ಮೂರು ಶಕ್ತಿಗಳು ಪೂರ್ಣವಾಗಿರುತ್ತವೆ.  ನಮ್ಮಲ್ಲಿ ಜ್ಞಾನಶಕ್ತಿ ಇದ್ದು ಇಚ್ಛಾಶಕ್ತಿ ಇಲ್ಲದೇ ಇರಬಹುದು ಅಥವಾ ಇಚ್ಛಾಶಕ್ತಿ ಇದ್ದು  ಕ್ರಿಯಾಶಕ್ತಿ ಇಲ್ಲದೇ ಇರಬಹುದು. ಆದರೆ ಭಗವಂತನಲ್ಲಿ ಹಾಗಲ್ಲ. ಅವನಲ್ಲಿ ಈ ಮೂರೂ ಶಕ್ತಿಗಳು ಒಂದೇ ಆಗಿಬಿಡುತ್ತವೆ. ಹೀಗಾಗಿ ಕೇವಲ ಇಚ್ಛಾಮಾತ್ರದಿಂದ ಭಗವಂತ ಪ್ರಪಂಚವನ್ನು ಸೃಷ್ಟಿಸುತ್ತಾನೆ.   

ಭಗವಂತ ಸೃಷ್ಟಿಕಾಲದಲ್ಲಿ ವಿಸ್ತಾರವಾದ ರೂಪಕೊಡುತ್ತಾನೆ(ಸೃಷ್ಟಿಮಾಡುವ-ಸಂಸೃಜ್ಞಃ). ಆನಂತರ ಎಲ್ಲದರೊಳಗಿದ್ದು ರಕ್ಷಣೆಮಾಡಿ ಪಾಲಿಸುತ್ತಾನೆ (ಗೋಪಾಃ), ನಂತರ ಆಯಸ್ಸು ಮುಗಿದಮೇಲೆ ಎಲ್ಲವನ್ನು ಸಂಕೋಚಗೊಳಿಸಿ (ಸಂಚುಕೋಚಃ), ತಾನು ಮಾತ್ರ ಎಲ್ಲವುದರಿಂದ ಅತೀತನಾಗಿ ನಿಲ್ಲುತ್ತಾನೆ.

ಇಲ್ಲಿ ಸಂಹಾರ ಅಥವಾ ಪ್ರಳಯವನ್ನು ಸಂಕೋಚಗೊಳಿಸುವ ಪ್ರಕ್ರಿಯೆ ಎಂದು ವಿವರಿಸಿದ್ದಾರೆ.  ಕಾರಣ ಏನೆಂದರೆ ಈ ಪ್ರಪಂಚದಲ್ಲಿ ಮೂಲತಃ ಯಾವುದೂ ನಾಶವಾಗುವುದಿಲ್ಲ. ಉದಾಹರಣೆಗೆ ಭೂಮಿ. ಭೂಮಿಯ ಆಯಸ್ಸು  ೪೩೨ ಕೋಟಿ ವರ್ಷಗಳು. ಭೂಮಿಯ ಈ ಆಯಸ್ಸು ಮುಗಿದಾಗ ಪ್ರಳಯ. ಪ್ರಳಯಕಾಲದಲ್ಲಿ ಭೂಮಿ ಸಿಡಿದು ಪರಮಾಣುರೂಪವನ್ನು ಹೊಂದುತ್ತದೆ. ಇದರಿಂದ ಕಾಣುತ್ತಿದ್ದ ರೂಪ ಕಾಣದಾಗುತ್ತದೆ. ನಂತರ ಮರಳಿ ಸೃಷ್ಟಿಕಾಲದಲ್ಲಿ ಈ ಎಲ್ಲಾ ಪರಮಾಣುಗಳು ಒಂದಾಗಿ ಗೋಳವಾಗುತ್ತದೆ. ಹೀಗಾಗಿ ಆಯಸ್ಸು ಮುಗಿದಾಗ ನಾಶವಾಗುವುದು ಕಾಣುವ ರೂಪ ಅಷ್ಟೇ.  ಹೀಗೆ ಸೃಷ್ಟಿ-ನಿಯಮನ-ಸಂಹಾರ ಮಾಡಿ ಮೋಕ್ಷಕೊಡುವ ಭಗವಂತ, ತಾನು ಎಲ್ಲವೂ ಆಗಿ, ಎಲ್ಲಕ್ಕಿಂತ ಬೇರೆಯಾಗಿ, ಯಾವುದನ್ನೂ ಅಂಟಿಸಿಕೊಳ್ಳದೇ ನಿರ್ಲಿಪ್ತನಾಗಿರುತ್ತಾನೆ.

 

ವಿಶ್ವತಶ್ಚಕ್ಷುರುತ ವಿಶ್ವತೋಮುಖೋ  ವಿಶ್ವತೋಬಾಹುರುತ ವಿಶ್ವತಸ್ಪಾತ್

ಸಂ ಬಾಹುಭ್ಯಾಂ ನ(ಧ)ಮತಿ ಸಂಪತತ್ರೈರ್ದ್ದ್ಯಾವಾ ಪೃಥಿವೀ(ಭೂಮೀ) ಜನಯನ್ ದೇವ ಏಕಃ ೦೩.೦೩

 

ಋಗ್ವೇದದ(೧೦.೮೧.೩) ಈ ಮಂತ್ರ ಸ್ವಲ್ಪ ಪಾಠ ವ್ಯತ್ಯಾಸದೊಂದಿಗೆ ಅನೇಕ ಕಡೆ ಕಾಣಸಿಗುತ್ತದೆ.  ಇಲ್ಲಿ ಮೋಕ್ಷಪ್ರದನಾದ ‘ರುದ್ರ ಹೇಗೆ ಕಂಡ ಎನ್ನುವುದನ್ನು ಶ್ವೇತಾಶ್ವತರ ಮುನಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಇಡೀ ಪ್ರಪಂಚದಲ್ಲಿ ತುಂಬಿರುವ ಭಗವಂತನಿಗೆ ಅವನ ಸ್ವರೂಪವೇ ಕಣ್ಣು-ಕಿವಿ-ಬಾಯಿ-ಕೈ-ಕಾಲುಗಳು. ಸಮಸ್ತ ಜೀವರೊಳಗೂ ಭಗವಂತ ತುಂಬಿರುವುದರಿಂದ ಎಲ್ಲರ ಕಣ್ಣೂ ಕೂಡಾ ಅವನ ಕಣ್ಣು. ಎಲ್ಲರ ಕಿವಿ ಅವನ ಕಿವಿ.  ಅವನು ಎಲ್ಲವನ್ನೂ ಕಾಣಬಲ್ಲ, ಎಲ್ಲವನ್ನೂ ಕೇಳಬಲ್ಲ. ಅವನು ಕಾಣದ, ತಿಳಿಯದ  ತಾಣವಿಲ್ಲ. ಹೀಗಾಗಿ ದೇವರಿಗೆ ಕಾಣದಂತೆ ಗುಟ್ಟಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ಭಗವಂತ ಎಲ್ಲರಲ್ಲೂ ಮತ್ತು ಎಲ್ಲಾ ಕಡೆ ತುಂಬಿ ಎಲ್ಲವನ್ನೂ ನಿಯಂತ್ರಿಸುತ್ತಾನೆ ಎನ್ನುವ ಸತ್ಯವನ್ನು ಇಲ್ಲಿ ಋಷಿಗಳು ವಿವರಿಸಿದ್ದಾರೆ. ಇದನ್ನೇ ‘ಅಹಂ ಬ್ರಹ್ಮಾಸ್ಮಿ’ ಎಂದು ಹೇಳಲಾಗಿದೆ. ನನಗೆ ನಾನು ‘ಅಹಂ, ಏಕೆಂದರೆ ನನ್ನನ್ನು  ಬಿಟ್ಟು ನಾನು ಬೇರೆ ಕಡೆ ಹೋಗಲು ಸಾಧ್ಯವಿಲ್ಲ.  ನಾನು ಬಿಡಲಾಗದ ವಸ್ತು ನನ್ನ ಅಸ್ತಿತ್ವ.  ಆದ್ದರಿಂದ ಯಾವುದನ್ನು ನಾವು ಬಿಡಲಾಗುವುದಿಲ್ಲವೋ ಅದಕ್ಕೆ ನಾವು ‘ಅಹಂ’ ಎನ್ನುತ್ತೇವೆ.  ಯಾರನ್ನು ಬಿಟ್ಟು ಯಾರೊಬ್ಬರೂ ಇರಲು ಸಾಧ್ಯವಿಲ್ಲವೋ  ಅಂತಹ ಬೃಹತ್ ತತ್ತ್ವ ಭಗವಂತ ಎಲ್ಲರಿಗೂ ‘ಅಹಂ. ಗೀತೆಯಲ್ಲಿ ಹೇಳುವಂತೆ:  ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್ (೧೦.೩೯)ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲ”. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ  ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.

ಇಂತಹ ಭಗವಂತ ಮೇಲಿನ ಲೋಕಗಳಲ್ಲಿ  ಸೂಕ್ಷ್ಮಜೀವಿಗಳಾದ ದೇವತೆಗಳನ್ನು ಸೃಷ್ಟಿಸಿದ. ಭೂಮಿಯಲ್ಲಿ (ಅಂಡಜ, ಸ್ವೇದಜ, ಉದ್ಬಿಜ ಮತ್ತು ಜರಾಯುಜ ಎನ್ನುವ ನಾಲ್ಕು ಬಗೆಯಲ್ಲಿ) ಜೀವಜಾತದ ಸೃಷ್ಟಿ ಮಾಡಿದ.  ಕೆಲವುಗಳಿಗೆ ಎರಡು ತೋಳುಗಳನ್ನು ಕೊಟ್ಟು ಸೃಷ್ಟಿಸಿದರೆ, ಇನ್ನು ಕೆಲವುಗಳಿಗೆ ನಾಲ್ಕು ಕಾಲುಗಳನ್ನು ಕೊಟ್ಟು ಸೃಷ್ಟಿ ಮಾಡಿದ.

[ಈ  ಶ್ಲೋಕದಲ್ಲಿ ನಮಗೆ ‘ಭಗವಂತ ಎಲ್ಲಾ ಕಡೆ ಇದ್ದು ಎಲ್ಲವನ್ನೂ ಕಾಣಬಲ್ಲ’ ಎಂಬ ಅತ್ಯಂತ ಮುಖ್ಯವಾದ ವಿಷಯ  ತಿಳಿಯುತ್ತದೆ. ಇದು ಜೀವನದಲ್ಲಿ ನೈತಿಕತೆಯನ್ನು ಬೆಳೆಸಿಕೊಳ್ಳಲು  ಬೇಕಾದ ಅತೀ ಮುಖ್ಯವಾದ ವಿಚಾರ. ಈ ಎಚ್ಚರ ಇದ್ದಾಗ  ಯಾರಿಗೂ ತಿಳಿಯದಂತೆ ಕದಿಯುವುದು, ಸುಳ್ಳುಹೇಳುವುದು, ಕೊಲ್ಲುವುದು,  ಹಿಂಸೆಮಾಡುವುದು, ಇತ್ಯಾದಿ ಸಾಧ್ಯವಾಗುವುದಿಲ್ಲ. ಪ್ರಾಮಾಣಿಕತೆ ಬರಬೇಕೆಂದರೆ ಸಾಮಾಜಿಕ ಕಾಳಜಿ (Horizontal line) ಜೊತೆಗೆ ಅಧ್ಯಾತ್ಮಿಕ ಭಕ್ತಿ (Vertical line) ಅತೀ ಮುಖ್ಯ. ಈ Horizontal ಮತ್ತು Vertical line ನ ಸಮಾಗಮದ ಚಿಹ್ನೆಯೇ ನಮ್ಮಲ್ಲಿ ಸ್ವಸ್ತಿಕ್ () ಹಾಗು ಕ್ರಿಶ್ಚಿಯನ್ ಜನಾಂಗದಲ್ಲಿ ಕ್ರಾಸ್ (†) ಆಗಿ ಬಳಕೆಯಲ್ಲಿದೆ]. 

 

ಯೋ ದೇವಾನಾಂ ಪ್ರಭವಶ್ಚೋದ್ಭವಶ್ಚ ವಿಶ್ವಾಧಿಪೋ ರುದ್ರೋ ಮಹರ್ಷಿಃ

ಹಿರಣ್ಯಗರ್ಭಂ ಜನಯಾಮಾಸ ಪೂರ್ವಂ ಸ ನೋ ಬುದ್ಧ್ಯಾ ಶುಭಯಾ ಸಂಯುನಕ್ತು ೦೩.೦೪

 

ಭಗವಂತ ಕೇವಲ ಭೂಮಿಯಲ್ಲಿನ ಜೀವಜಾತಗಳನ್ನಷ್ಟೇ ಸೃಷ್ಟಿ ಮಾಡಿರುವುದಲ್ಲ, ಅವನು ದೇವತೆಗಳನ್ನೂ ಸೃಷ್ಟಿ ಮಾಡಿದ.  ಈ ದೇವತೆಗಳು ನಮ್ಮ ಜೀವಯೋಗ್ಯತೆಗನುಗುಣವಾಗಿ,  ಭಗವಂತನ ಸಂಕಲ್ಪದಂತೆ, ಭಗವಂತನೊಂದಿಗೆ ನಮ್ಮ ದೇಹದಲ್ಲಿದ್ದು ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುತ್ತಾರೆ.

 ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಇವು ಪ್ರತಿಯೊಂದು ಚೇತನವೂ ಅನುಭವಿಸುವ ಸಂಗತಿಗಳು. ಇವೆಲ್ಲವೂ ನಮ್ಮಲ್ಲೇ ಇದ್ದರೂ ಕೂಡಾ ನಮ್ಮ ಅಧೀನವಾಗಿಲ್ಲ. ಉದಾಹರಣೆಗೆ ನಾವು ಸುಖ ಪಡಬೇಕೆಂದು ಇಚ್ಛೆ ಪಡುತ್ತೇವೆ ಆದರೆ ದುಃಖ ಸರಮಾಲೆಯಾಗಿ ಬರುತ್ತದೆ. ನಮ್ಮ ಇಚ್ಛೆಯ ಹಿಡಿತ/ನಿಯಂತ್ರಣ ನಮ್ಮಲ್ಲಿಲ್ಲ. ನಾವು ಗೆಲ್ಲಲ್ಲು ಪ್ರಯತ್ನಿಸುತ್ತೇವೆ ಆದರೆ ಸೋಲುತ್ತೇವೆ. ಇವೆಲ್ಲವೂ ಪ್ರತಿಯೊಬ್ಬರಿಗೂ ಜೀವನದಲ್ಲಿ ಅನುಭವಕ್ಕೆ ಬರುವ ಸಂಗತಿ. ಇದರಿಂದ ಸ್ಪಷ್ಟವಾಗಿ ನಮಗೆ ತಿಳಿಯುವುದೇನೆಂದರೆ: ನಮ್ಮಲ್ಲಿ    ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಎಲ್ಲವೂ ಇದೆ, ಆದರೆ ನಾವು ಅದರ ಒಡೆಯರಲ್ಲ ಎನ್ನುವುದು. ಈ ಅನುಭವದ ಯುಕ್ತಿಯಿಂದ ನಾವು ನೋಡಿದಾಗ ಇವೆಲ್ಲವನ್ನೂ ನಿಯಂತ್ರಿಸುವ ಪರಶಕ್ತಿಯೊಂದಿದೆ ಎನ್ನುವುದು ತಿಳಿಯುತ್ತದೆ.  ‘ನನ್ನಲ್ಲಿ ಇಚ್ಛೆ ಇದೆ, ಪ್ರಯತ್ನವಿದೆ, ಜ್ಞಾನವಿದೆ. ಇವೆಲ್ಲಾ ಇದ್ದರೂ ಕೂಡಾ ಇದರ ಒಡೆತನ ನನ್ನಲ್ಲಿ ಏಕಿಲ್ಲಾ’  ಎಂದು ನಾವು ಚಿಂತನೆ ಮಾಡಬೇಕು. ಕೇನೋಪನಿಷತ್ತಿನಲ್ಲಿ ಹೇಳುವಂತೆ: ‘ಕೇನೇಷಿತಂ ಪತತಿ ಪ್ರೇಷಿತಂ ಮನಃ  ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ । ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃಶ್ರೋತ್ರಂ ಕ ಉ ದೇವೋ ಯುನಕ್ತಿ’೧-೧॥  ಅಧ್ಯಾತ್ಮ ಚಿಂತನೆಯ ಮೂಲಭೂತ ಉಪಕ್ರಮವಿದು. ನಮ್ಮ ಮನಸ್ಸು ಯಾವುದ್ಯಾವುದೋ ವಿಷಯಗಳ ಕಡೆಗೆ ಹರಿಯುತ್ತದೆ. ಕೆಲವನ್ನು ಗ್ರಹಿಸುತ್ತದೆ, ಇನ್ನು ಕೆಲವನ್ನು ಗ್ರಹಿಸುವುದಿಲ್ಲ; ಕೆಲವನ್ನು ಬಯಸುತ್ತದೆ, ಇನ್ನು ಕೆಲವನ್ನು ಬಯಸುವುದಿಲ್ಲ; ಕೆಲವನ್ನು ಮರೆಯುತ್ತದೆ, ಇನ್ನು ಕೆಲವನ್ನು ಮರೆಯುವುದಿಲ್ಲ. ವಿಷಯ ಗ್ರಹಣ ಮಾಡಬೇಕು ಎಂದರೆ ಮಾಡಲು ಆಗುವುದಿಲ್ಲ, ಮಾಡಬಾರದು ಎಂದರೆ ಮಾಡುತ್ತದೆಮರೆತುಬಿಡು ಎಂದರೆ ಮರೆಯುವುದಿಲ್ಲ, ನೆನಪಿನಲ್ಲಿಟ್ಟುಕೋ ಎಂದರೆ ಮರೆತುಬಿಡುತ್ತದೆ!  ಇಂತಹ ಮನಸ್ಸೆಂಬ ಒಂದು ವಿಶಿಷ್ಟ ಯಂತ್ರ ನಮ್ಮೊಳಗೆ ಕಾರ್ಯ ನಿರ್ವಹಿಸುತ್ತಿರುತ್ತದೆ, ಅದನ್ನು ಯಾರೋ ನಿಯಂತ್ರಿಸುತ್ತಿರುತ್ತಾರೆ. ಇನ್ನು ನಮ್ಮ ಉಸಿರು. ತಾಯಿಯ ಹೊಟ್ಟೆಯಲ್ಲಿದ್ದಾಗ ನಾವು ಮೂಗಿನಿಂದ ಉಸಿರಾಡುತ್ತಿರಲಿಲ್ಲ. ಆದರೆ ಈ ಭೂಮಿಗೆ ಬಿದ್ದ ತಕ್ಷಣ ಉಸಿರು ಆರಂಭವಾಯಿತು. ಈ ಉಸಿರು ಎಂದು ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ.  ಇದೇ ರೀತಿ ನಮ್ಮ ಮಾತು, ನಮ್ಮ ದೃಷ್ಟಿ(ಕಣ್ಣು) ಇತ್ಯಾದಿ. ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುತ್ತದೆ. ಈ ವ್ಯವಸ್ಥೆಯ ಹಿಂದಿನ ಶಕ್ತಿ ಯಾವುದು ಎನ್ನುವುದಕ್ಕೆ ಇಂದಿನ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಉಪನಿಷತ್ತಿನಲ್ಲಿ ಉತ್ತರವಿದೆ. ಪ್ರಾಚೀನರು ಯಾವುದನ್ನು ಯಾವ ದೇವತೆ ನಿಯಂತ್ರಿಸುತ್ತಾನೆ ಎನ್ನುವ ವಿಜ್ಞಾನವನ್ನು ವಿವರಿಸಿರುವುದನ್ನು ಶಾಸ್ತ್ರಗಳಲ್ಲಿ ನಾವು ಕಾಣಬಹುದು. ಹೀಗೆ ಒಂದೊಂದು ವಿಭಾಗವನ್ನು ನಿರ್ವಹಣೆ ಮಾಡುವ, ಅವಾಂತರ ಶಕ್ತಿಗಳಾದ, ನಮಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ, ಸೂಕ್ಷ್ಮಶರೀರಿಗಳಾದ ದೇವತೆಗಳನ್ನು ಭಗವಂತ ಸೃಷ್ಟಿಮಾಡಿದ.

ಇಂತಹ ಭಗವಂತನನ್ನು ಇಲ್ಲಿ ‘ವಿಶ್ವಾಧಿಕಃ’  ಎಂದು ಸಂಬೋಧಿಸಿದ್ದಾರೆ.  ಇಡೀ ಜಗತ್ತಿಗೆ ಶಕ್ತಿ ಕೊಟ್ಟವನು ಈ ಜಗತ್ತಿನಲ್ಲೇ ಇರುವ ಒಬ್ಬನಾಗಿರಲು ಸಾಧ್ಯವಿಲ್ಲ. ಅದು ಇಡೀ ವಿಶ್ವವನ್ನು ಮೀರಿನಿಂತ ಶಕ್ತಿ. ಅವನೇ ‘ರುದ್ರಃ’ (ಮೋಕ್ಷಪ್ರದನಾದ ಭಗವಂತ). ಅಂತಹ ಭಗವಂತನನ್ನು ಇಲ್ಲಿ ‘ಮಹರ್ಷಿಃ’ ಎಂದಿದ್ದಾರೆ. ಭಗವದ್ವಾಚಕವಾದ ಈ ನಾಮವನ್ನೂ ಕೂಡಾ ನಾವು ವಿಷ್ಣು ಸಹಸ್ರನಾಮದಲ್ಲಿ ಕಾಣುತ್ತೇವೆ(ಮಹರ್ಷಿಃ ಕಪಿಲಾಚಾರ್ಯಃ .....).   ಋಷಿ ಎಂದರೆ ವೇದ ಮಂತ್ರದ ದೃಷ್ಟಾರ. ವೇದ ಮಂತ್ರವನ್ನು ಕಂಡವರು ಋಷಿಗಳು. ಸಮಗ್ರ ವೇದವನ್ನು ಕಂಡ ಋಷಿ- ಮಹರ್ಷಿ. ಸಮಸ್ತ ವೇದಗಳನ್ನು ಮೊತ್ತಮೊದಲ ಬಾರಿ ಆವಿಷ್ಕಾರ ಮಾಡಿ ಚತುರ್ಮುಖನಿಗೆ ಉಪದೇಶ ಮಾಡಿದ ಮಹರ್ಷಿ-ಭಗವಂತ. ಶಾಸ್ತ್ರಕಾರರು ಹೇಳುವಂತೆ- ‘ಯಾವುದಾದರು ಮಂತ್ರ ಜಪ ಮಾಡುವಾಗ ಅಥವಾ ಒಂದು ಸೂಕ್ತ ಹೇಳುವಾಗ ನಮಗೆ ಋಷಿ ಯಾರು ಎಂದು ತಿಳಿದಿಲ್ಲವಾದರೆ ಆಗ ‘ಅಸ್ಯ  ಶ್ರೀ  ಮಹಾಮಂತ್ರಸ್ಯ ಹಯಗ್ರೀವ ಋಷಿಃ' ಎಂದು ಹೇಳಿದರೆ ಸಾಕು ಎಂದು. ಏಕೆಂದರೆ ಸರ್ವ ವೇದಗಳ ಪ್ರಥಮ ದೃಷ್ಟನಾದ ಭಗವಂತ ಕಾಣದ ಮಂತ್ರವಿಲ್ಲ. ಋಷಿ ಅಂದರೆ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡು ಭಗವಂತನನ್ನು ತಿಳಿದ ಸತ್ಯದರ್ಶಿಗಳು, ಸತ್ಯವಚನರು. ಭಗವಂತನನ್ನು ಪೂರ್ತಿ ತಿಳಿದವರು ಭಗವಂತನನ್ನು ಬಿಟ್ಟು ಇನ್ನ್ಯಾರೂ ಇಲ್ಲ. ಆದ್ದರಿಂದ ಸರ್ವಜ್ಞನೂ, ಸರ್ವವೇದದೃಷ್ಟನೂ ಆದ ಭಗವಂತ ಮಹರ್ಷಿಃ. ಯಾರಲ್ಲಾದರೂ ಲೋಕೋತ್ತರವಾದ ಜ್ಞಾನವಿದ್ದರೆ ಅದಕ್ಕೆ ಕಾರಣ ಕೂಡಾ  ಭಗವಂತನ ವಿಭೂತಿ. ‘ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ । ತತ್ತದೇವಾವಗಚ್ಛ ತ್ವಂ ಮಮ ತೇಜೋಽಮ್ಶಸಂಭವಮ್ -  ‘ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಟ ಗುಣವಿದೆಯೋ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ’ ಎಂದು ಶ್ರೀಕೃಷ್ಣ ಗೀತೆಯಲ್ಲಿ(೧೦.೪೧)     ವಿವರಿಸಿರುವುದನ್ನು ನಾವು ಕಾಣುತ್ತೇವೆ. ಅದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು. ಇಂತಹ ಭಗವಂತನೇ ಈ ಪ್ರಪಂಚದ ನಿಜವಾದ ಜಗದ್ಗುರು. (ಕೃಷ್ಣಂ ವಂದೇ ಜಗದ್ಗುರುಮ್).

ಯಾರು ಈ ಭಗವಂತ ಎನ್ನುವುದನ್ನು ಶ್ವೇತಾಶ್ವತರ ಮುನಿ ಈ ಶ್ಲೋಕದ ಉತ್ತರಾರ್ಧದಲ್ಲಿ ಇನ್ನೂ ಸ್ಪಷ್ಟವಾಗಿ ಹೇಳಿರುವುದನ್ನು ನಾವು ಕಾಣುತ್ತೇವೆ. ಹಿರಣ್ಯಗರ್ಭ ಚತುರ್ಮುಖ ಬ್ರಹ್ಮನನ್ನು ತನ್ನ ನಾಭೀಕಮಲದಲ್ಲಿ ಮೊಟ್ಟಮೊದಲು ಸೃಷ್ಟಿ ಮಾಡಿದವನು ಈ ಭಗವಂತ. ವೇದದಲ್ಲಿ ವಿಶ್ವಕರ್ಮ ಸೂಕ್ತ ಎನ್ನುವ ಸೂಕ್ತವೊಂದಿದೆ. ಅಲ್ಲಿ ಭಗವಂತನ ವರ್ಣನೆ ಮಾಡಿ, ಆತನನ್ನು ಹೇಗೆ ಉಪಾಸನೆ ಮಾಡಬೇಕು ಎಂದು ವಿವರಿಸಿದ್ದಾರೆ. ಅಲ್ಲಿ ಹೇಳುವಂತೆ: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ” ಎಂದಿದ್ದಾರೆ.  ಅಂದರೆ ‘ಯಾವುದರಲ್ಲಿ ಆ ಹದಿನಾಲ್ಕು ಲೋಕಗಳು ಸೇರಿಕೊಂಡಿವೆಯೋ, ಅದು ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿ ಬಂತು’ ಎಂದರ್ಥ. ಇದು ವೇದ ಭಾಷೆ. ನಮಗೆ ತಕ್ಷಣ ಈ ಭಾಷೆ ಅರ್ಥವಾಗುವುದಿಲ್ಲ. ಅದಕ್ಕಾಗಿ ವೇದವ್ಯಾಸರು ಇದಕ್ಕೆ ಸ್ಕಾಂಧಪುರಾಣದಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಅಲ್ಲಿ ಹೇಳುವಂತೆ: ಭಗವಂತನ ಉದರದಿಂದ ಈ ಪ್ರಪಂಚ ಸೃಷ್ಟಿಯಾಯಿತು. ಅದು ಕಮಲ ಅಥವಾ ಬಂಗಾರದ ಮೊಟ್ಟೆಯ ರೂಪದಲ್ಲಿ  ಆತನ ನಾಭಿಯಿಂದ ಹೊರ ಚಿಮ್ಮಿತು. ಹೀಗೆ ಹೊರ ಹೊಮ್ಮಿದ ಕಮಲದಲ್ಲಿ ಇಡೀ ವಿಶ್ವ ಸೂಕ್ಷ್ಮರೂಪದಲ್ಲಿದ್ದು, ಅದರ ಜೊತೆಗೆ ಚತುರ್ಮುಖ ಬ್ರಹ್ಮ(ಹಿರಣ್ಯಗರ್ಭ) ಕೂಡಾ ಸೃಷ್ಟನಾದ. ಹೀಗೆ ಸೃಷ್ಟನಾದ ಚತುರ್ಮುಖದೂಳಗೆ ತಾನೂ ನಿಂತು, ಸೂಕ್ಷ್ಮಪ್ರಪಂಚಕ್ಕೆ ಸ್ಥೂಲ ರೂಪವನ್ನು ಭಗವಂತ ನೀಡಿದ. ಇಂತಹ ಭಗವಂತನನ್ನು  ‘ಪಂಕಜನಾಭಃ ಅಥವಾ ಪದ್ಮನಾಭಃ’ ಎಂದೂ ಕರೆಯುತ್ತಾರೆ. ಕಮಲ ಸಂಭವನಾದ ಚತುರ್ಮುಖನನ್ನು ‘ಪದ್ಮಜ’ ಎಂದೂ ಕರೆಯುತ್ತಾರೆ. ಈ ಸೃಷ್ಟಿ ನಿರ್ಮಾಣಕ್ಕೆ ಮೊದಲು ಎಲ್ಲವೂ ಭಗವಂತನ ಉದರದಲ್ಲಿತ್ತು. ನಂತರ ಭಗವಂತನ ನಾಭಿಕಮಲದಿಂದ ಪ್ರಪಂಚ ಸೃಷ್ಟಿಯಾಯಿತು. ಮುಂದೆ ಮಹಾಪ್ರಳಯದಲ್ಲಿ ಈ ವಿಶ್ವ ನಾಶವಾಗುತ್ತದೆ. ಪ್ರಳಯಕಾಲದ ನಂತರ ಭಗವಂತನಿಂದ ಈ ಸೃಷ್ಟಿ ಮರಳಿ ನಿರ್ಮಾಣವಾಗುತ್ತದೆ. ಹೀಗೆ ಅನಂತಕೋಟಿ ಕಾಲದಲ್ಲಿ ಅನಂತಕೋಟಿ ಬ್ರಹ್ಮಾಂಡ ಸೃಷ್ಟಿಯಾಗಿ ನಾಶವಾಗುತ್ತಿರುತ್ತದೆ. ಇದೊಂದು ನಿರಂತರ ಪ್ರವಾಹ.

ಇಲ್ಲಿ ತಾನು ಧ್ಯಾನದಲ್ಲಿ ಕಂಡ ಪರಮಾತ್ಮನಲ್ಲಿ ಶ್ವೇತಾಶ್ವತರ    ಮುನಿ    ‘ಮಾಂಗಲಿಕವಾದ ಬುದ್ಧಿಯನ್ನು ಕೊಟ್ಟು ನಮ್ಮನ್ನು ಆ ಭಗವಂತ ರಕ್ಷಿಸಲಿ’ ಎಂದು  ಪ್ರಾರ್ಥಿಸುವುದನ್ನು ಕಾಣುತ್ತೇವೆ.    ಆನಂದಮಯವಾದದ್ದು  ಯಾವ ಬುದ್ಧಿಗೆ ಹೊಳೆಯುತ್ತದೋ  ಅದು ‘ಶುಭ’.  ನಮ್ಮ ಬುದ್ಧಿ ಯಾವಾಗಲೂ ಆನಂದಮಯವಾಗಿರಬೇಕು. ಆನಂದಮಯವಾದುದ್ದನ್ನೇ  ನಮ್ಮ ಚಿತ್ತದಲ್ಲಿ  ಬೆಳಗಿಸುವ ಪ್ರತಿಭೆ ಏನಿದೆ, ಅಂತಹ ಬುದ್ಧಿಯನ್ನು ಭಗವಂತ ನಮಗೆ ಕೊಡಲಿ ಎನ್ನುವ ಪ್ರಾರ್ಥನೆ ಇದಾಗಿದೆ. ಹೀಗೆ  ‘ಆನಂದಮಯನಾದ ನಿನ್ನ ಅರಿವು ಮೂಡತಕ್ಕಂತಹ  ಬುದ್ಧಿಯನ್ನು ನಮಗೆ ಕೊಡು’ ಎಂದು ಶೇತಾಶ್ವತರ ಮುನಿ ತಾನು ಧ್ಯಾನದಲ್ಲಿ ಕಂಡ ಭಗವಂತನಲ್ಲಿ ಪ್ರಾರ್ಥಿಸಿದ್ದಾನೆ.

 

ವೇದಾಹಮೇತಂ ಪುರುಷಂ ಮಹಾನ್ತಮಾದಿತ್ಯವರ್ಣ್ಣಂ ತಮಸಃ ಪರಸ್ತಾತ್

ತಮೇವ ವಿದಿತ್ವಾಽತಿಮೃತ್ಯುಮೇತಿ ನಾನ್ಯಃ ಪನ್ಥಾ ವಿದ್ಯತೇಽಯನಾಯ ೦೩.೦೮

 

ಈ ಮಂತ್ರವನ್ನು ನಾವು ಯಜುರ್ವೇದೀಯ ಪುರುಷಸೂಕ್ತದಲ್ಲೂ ಕಾಣಬಹುದು. ಅಲ್ಲಿ ‘ವೇದಾಹಮೇತಂ ಪುರುಷಂ ಮಹಾನ್ತಮ್ ।  ಆದಿತ್ಯವರ್ಣ್ಣಂ ತಮಸಸ್ತು ಪಾರೇ(೧೬) ಎಂದೂ ಮತ್ತು   ‘ತಮೇವಂ ವಿದ್ವಾನಮೃತ ಇಹ ಭವತಿ  । ನಾನ್ಯಃ  ಪಂಥಾ ಅಯನಾಯ  ವಿದ್ಯತೇ’ (೧೭) ಎಂದು ಹೇಳಿದ್ದಾರೆ. ಇಲ್ಲಿ ಅದೇ ಶಬ್ದಗಳು ಸ್ವಲ್ಪ ವ್ಯತ್ಯಾಸದಿಂದ ಮೂಡಿಬಂದಿದೆ. ಈರೀತಿಯ ವ್ಯತ್ಯಾಸ ಮಾಡಿರುವುದರಿಂದ ಇಲ್ಲಿ ಅರ್ಥವಿಶೇಷ ಬಂದಿರುವುದನ್ನೂ ಕೂಡಾ ನಾವು ಗಮನಿಸಬಹುದು. ಉದಾಹರಣೆಗೆ ಪುರುಷಸೂಕ್ತದಲ್ಲಿ ‘ತಮೇವಂ’ ಎನ್ನುವ ಪದ ಬಳಸಿ- ‘ಭಗವಂತನನ್ನು ಹೀಗೆ ತಿಳಿದರೆ ಮುಕ್ತಿಯನ್ನು ಪಡೆಯಬಹುದು’  ಎಂದು ಹೇಳಿದ್ದಾರೆ. ಇಲ್ಲಿ ಶ್ವೇತಾಶ್ವತರ ಮುನಿ ‘ತಮೇವ’ ಎನ್ನುವ ಪದ ಬಳಸಿ ‘ಭಗವಂತನನ್ನು ಹೀಗೆ ತಿಳಿದರೆ ‘ಮಾತ್ರ’ ಮುಕ್ತಿಯನ್ನು ಪಡೆಯಬಹುದು-ಬೇರೆ ಮಾರ್ಗವಿಲ್ಲ’ ಎಂದು ಒತ್ತಿ ಹೇಳಿದ್ದಾನೆ.  ‘ಏವಂ’ ನಿಂದ ಒಂದು ಬಿಂದುವನ್ನು ತೆಗೆದು ‘ಏವ’ ಮಾಡಿದ್ದರಿಂದ ಅವಧಾರಣೆಯಾಗಿ ಮಾತಿಗೆ ಒತ್ತು ಬಂತು.  ಹೀಗೆ ಸ್ವಲ್ಪ ವ್ಯತ್ಯಾಸದ ಜೊತೆಗೆ ಹೊಸ ಆಯಾಮವನ್ನು ತುಂಬಿರುವುದನ್ನು ನಾವಿಲ್ಲಿ ಕಾಣಬಹುದು.

   ಧ್ಯಾನದಲ್ಲಿ ಭಗವಂತನನ್ನು ಕಂಡ ಶ್ವೇತಾಶ್ವತರ ಮುನಿ  ಹೇಳುತ್ತಾನೆ: ’ಸರ್ವಜ್ಞನಾದ ಪರಮಪುರುಷನನ್ನು ನಾನು ಅರಿತಿದ್ದೇನೆ. ಅವನು ಅವಿದ್ಯೆಯ ಕತ್ತಲು ಹರಿದಾಗ ಆದಿತ್ಯವರ್ಣನಾಗಿ ಗೋಚರಿಸುತ್ತಾನೆ. ಭಗವಂತನ ಹಿರಿಮೆಯನ್ನು ತಿಳಿಯುವ ಜ್ಞಾನಿ ಮಾತ್ರ ಸಾವನ್ನು ಗೆದ್ದು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಮೋಕ್ಷವನ್ನು ಹೊಂದಬಲ್ಲ. ಭಗವಂತನನ್ನು ಪಡೆಯಲು ಜ್ಞಾನಮಾರ್ಗವಲ್ಲದೆ ಬೇರೆ ಮಾರ್ಗವೇ ಇಲ್ಲ’ ಎಂದು.

ಈ ಮಂತ್ರದಲ್ಲಿ ಭಗವದ್ ವಾಚಕವಾದ ‘ಪುರುಷಃ’ ಎನ್ನುವ ಪದಪ್ರಯೋಗವಾಗಿದೆ. ಇದು ಅನೇಕ ಅರ್ಥ ವಿಶೇಷಗಳನ್ನು ಹೊಂದಿರುವ ಭಗವಂತನ ನಾಮವಾಗಿದೆ.   ಪೂರ್ಣನಾಗಿರುವವನು- ‘ಪುರು ಸಃ’. ಈ ವಿಶ್ವ ಸೃಷ್ಟಿಯಾಗುವ ಮೊದಲೇ ಇದ್ದವನು – ‘ಪೂರ್ಣಮೇವ ಆಸ ಇತಿ ಪುರುಷಃ’.  ಎಲ್ಲೆಡೆ ತುಂಬಿರುವವನು ಹಾಗೂ ಎಲ್ಲವನ್ನೂ ಬಲ್ಲವನು - ‘ಪುರು ಸರತಿ’. ಬ್ರಹ್ಮಾಂಡವೆಂಬ, ಪಿಂಡಾಂಡವೆಂಬ ಪುರದೊಳಗೆ ತುಂಬಿದವನು – ‘ಪುರಿ ಶೇತೇ’. ದೇಹದೊಳಗೆ ಅಂತರ್ಯಾಮಿಯಾಗಿ ನಿಂತು ಬೆಳಗಿಸುವವನು ‘ಪುರಃ  ಓಷತಿ’. ಹೀಗೆ ಪುರುಷಃ ಎನ್ನುವ ಭಗವಂತನ ನಾಮ ಅನೇಕ ರೀತಿಯಲ್ಲಿ ಭಗವಂತನ ಗುಣಾನುಸಂಧಾನ ಮಾಡುವ ನಾಮವಾಗಿದೆ. ‘ಪುರುಷೋ ಹ ವೈ ನಾರಾಯಣಃ.... ಎನ್ನುತ್ತದೆ ನಾರಾಯಣೋಪನಿಷತ್. ಪರಮಪುರುಷ, ಉತ್ತಮಪುರುಷ, ಮಹಾಪುರುಷ, ಪುರುಷೋತ್ತಮ, ಇವೆಲ್ಲವೂ  ಆ ಭಗವಂತನನ್ನೇ ಹೇಳುವ ವಿಶೇಷ ನಾಮಗಳಾಗಿವೆ. ‘ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ’ (ಭಗವದ್ಗೀತೆ ೧೫.೧೭) ಕ್ಷರ ಮತ್ತು ಅಕ್ಷರವನ್ನು ಮೀರಿ ನಿಂತಿರುವ ಪರಮಪುರುಷ ಆ ಭಗವಂತ. ಅವನನ್ನೇ ‘ಪರಮಾತ್ಮ’ ಎಂದು ಕರೆಯುತ್ತಾರೆ.

ಇಲ್ಲಿ ಶ್ವೇತಾಶ್ವತರ ಮುನಿ ತಾನು ಧ್ಯಾನದಲ್ಲಿ ಕಂಡ ಭಗವಂತನ ವರ್ಣನೆ ಮಾಡುತ್ತಾ ಅವನ ಬಣ್ಣವನ್ನು ‘ಆದಿತ್ಯವರ್ಣ’ ಎಂದು ಹೇಳಿರುವುದನ್ನು ಕಾಣುತ್ತೇವೆ.  ಹೆಚ್ಚಿನ ಮಂತ್ರಗಳ ಧ್ಯಾನ ಶ್ಲೋಕ ನೋಡಿದರೆ ಅಲ್ಲಿ ಇದೇ ರೀತಿ ಹೇಳುವುದನ್ನು ನಾವು ಕಾಣುತ್ತೇವೆ. ಉದಾಹರಣೆಗೆ ಬ್ರಹ್ಮ-ಗಾಯತ್ರಿ ಧ್ಯಾನಮಂತ್ರದಲ್ಲಿ ‘..ಪ್ರೋದ್ಯದಾದಿತ್ಯ ವರ್ಣಾಭಃ ಸೂರ್ಯಮಂಡಲಮಧ್ಯಗಃ’ ಎಂದಿದೆ.  ವಿಶ್ವಾಮಿತ್ರ ಗಾಯತ್ರಿ ಧ್ಯಾನಮಂತ್ರದಲ್ಲಿ ‘ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಷ್ಟಃ’ ಎಂದರೆ, ನಾರಾಯಣಾಷ್ಟಾಕ್ಷರ ಧ್ಯಾನ ಮಂತ್ರ ‘ಉದ್ಯದ್ ಭಾಸ್ವತ್ ಸಮಾಭಾಸಃ...’ ಎಂದು ಆರಂಭವಾಗುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಸೂರ್ಯನಂತೆ ಪ್ರಕಾಶಮಾನವಾದ ರೂಪ ಅಥವಾ ಸೂರ್ಯಮಂಡಲ ಮಧ್ಯದಲ್ಲಿರತಕ್ಕ ಭಗವದ್ರೂಪ ಧ್ಯಾನದಲ್ಲಿ ಗೋಚರವಾಗುತ್ತದೆ. ಸೂರ್ಯನ ವರ್ಣ ಎಂದರೆ ಹಿರಣ್ಯವರ್ಣ. ಸೂರ್ಯೋದಯ ಕಾಲದಲ್ಲಿ ಕಾಣುವ ಪುತ್ಥಳಿ ಚಿನ್ನದ ಬಣ್ಣ.

ಸಾಮಾನ್ಯವಾಗಿ ನಾವು ಬರೀ ಸೂರ್ಯಮಂಡಲವನ್ನು ಕಾಣುತ್ತೇವೆ. ಶಾಸ್ತ್ರಕಾರರು ಹೇಳುತ್ತಾರೆ:  ‘ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ...’ ಎಂದು. ಬಂಗಾರದ ತಳಿಗೆಯಿಂದ ಸತ್ಯದ ಮೋರೆಯನ್ನು ಮುಚ್ಚಲಾಗಿದೆ. ಆದ್ದರಿಂದ ನಾವು ಸೂರ್ಯನ ಒಳಗಿರುವ  ಭಗವದ್ ಶಕ್ತಿಯನ್ನು ಕಾಣುವುದಿಲ್ಲ ಎಂದು. ಹೀಗಾಗಿ ನಾವು ಆ ಸೂರ್ಯಮಂಡಲದ ಕಣ್ಕುಕ್ಕುವ ಬೆಳಕನ್ನು ಅತ್ತಸರಿಸಿ, ಅದರೊಳಗಿರುವ ಭಗವಂತನನ್ನು ಕಾಣಬೇಕು. ಇದು ಧ್ಯಾನದಲ್ಲಿ ಸಾಧ್ಯ.  ಗೀತೆಯಲ್ಲಿ(೧೧.೧೨) ಹೇಳುವಂತೆ:   ‘ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ । ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ’  ಸಾವಿರಾರು ಸೂರ್ಯರು ಆಕಾಶದಲ್ಲಿ ಒಮ್ಮೆಗೇ ಉದಿಸಿದರೆ ಎಷ್ಟು ಪ್ರಕಾಶಮಾನವಾಗಿರುತ್ತದೋ ಅಂತಹ ಬೆಳಕು ಭಗವಂತನದು ಎಂದು. ಆದರೆ ಅಷ್ಟು  ಪ್ರಕಾಶಮಾನನಾಗಿದ್ದರೂ ಕೂಡಾ ಅದು ಸುಡುವ ಬೆಂಕಿಯಲ್ಲ. ‘ಅಮೃತ ಸಮುದ್ರಾವಗಾಹೀವ ಪರಮ ಆಹ್ಲಾದಮಾಪ್ನೋತೀಮ್’ ಅಮೃತದ ಸಮುದ್ರದಲ್ಲಿ ಮುಳುಗಿದಂತಹ ತಂಪಾದ ಅನುಭವದೊಂದಿಗೆ  ಅಹ್ಲಾದಮಯ ಆ  ಭಗವಂತ.

  ಆದಿತ್ಯವರ್ಣನಾದ ಭಗವಂತ ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲ. ಏಕೆಂದರೆ ನಾವು ತಮೋಗುಣವೆಂಬ ಕತ್ತಲೆಯಲ್ಲಿದ್ದೇವೆ. ಭಗವಂತನೆಂಬ ಜ್ಞಾನಾನಂದಮಯವಾದ ಬೆಳಕು(ಭರ್ಗಃ)  ತ್ರೈಗುಣ್ಯಗಳನ್ನು ದಾಟಿನಿಂತಿರುವ ಅಪ್ರಾಕೃತವಾದ ಬೆಳಕು. ಕತ್ತಲೆಯ ಪ್ರಪಂಚದಲ್ಲಿದ್ದಾಗ ಕಾಣುವ ಬಣ್ಣ ಭೌತಿಕ ಬಣ್ಣ. ಆದರೆ ಭಗವಂತನ ಬಣ್ಣ ಧ್ಯಾನಸ್ಥಿತಿಯಲ್ಲಿ ಭೌತಿಕ ಪ್ರಪಂಚದಿಂದ ಆಚೆ ಹೋದಾಗ ಮಾತ್ರ ತಿಳಿಯಬಲ್ಲ ಬಣ್ಣವಾಗಿದೆ.

 ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ      ಯೋಽಸಾವಸೌ ಪುರುಷಃ ಸೋಽಹಮಸ್ಮಿ’  (ಈಶಾವಾಸ್ಯ-೧೬)- ಭಗವಂತನಿಗೆ ರೂಪವಿಲ್ಲ, ಆಕಾರವಿಲ್ಲ ಆದರೆ ಕಲ್ಯಾಣತಮವಾದ ರೂಪವಿದೆ, ಆಕಾರವಿದೆ ! ಈ ರೀತಿಯ ವಿರುದ್ಧವಾದ ಗುಣಗಳು ಎಲ್ಲಿ ಸಮನ್ವಯವಾಗುತ್ತದೋ ಅದು ಭಗವಂತ ಎನ್ನುತ್ತದೆ ಭಾಗವತ. ‘ಯಸ್ಮಿನ್ವಿರುದ್ಧಗತಯೋ ಹ್ಯನಿಶಂ ಪತಂತಿ’(೦೪.೦೯.೧೬)

ನಾವು ಸಾವನ್ನು ಗೆದ್ದು ಮೋಕ್ಷವನ್ನು ಹೊಂದಬೇಕಾದರೆ ಇಂತಹ ಅಪ್ರಾಕೃತ ಬೆಳಕನ್ನು ಅರಿಯಬೇಕು. ಭಗವಂತನ ಬಳಿಗೆ ಸಾಗುವುದಕ್ಕೆ ಜ್ಞಾನ ಒಂದೇ ಸಾಧನ. ಅರಿವಿಲ್ಲದೇ ಭಗವಂತನನ್ನು ಪಡೆಯುವುದು ಸಾಧ್ಯವಿಲ್ಲ. ‘ಕರ್ಮಣಾ ಜ್ಞಾನಮಾತನೋತಿ ಜ್ಞಾನೇನ ಅಮೃತೀಭವತಿ’ ನಾವು ಮಾಡುವ ಸಮಸ್ತ  ಅನುಷ್ಠಾನ  ಕರ್ಮಮಾರ್ಗವಾಗಿದ್ದು, ಅದು ಜ್ಞಾನಕ್ಕೆ ಪೂರಕವಾಗಿರಬೇಕು. ಜ್ಞಾನವಿಲ್ಲದೇ ಕೇವಲ ಮಂತ್ರ ಹೇಳುವುದರಿಂದ, ಯಜ್ಞ-ಯಾಗಾದಿಗಳನ್ನು ಮಾಡುವುದರಿಂದ ಮೋಕ್ಷಪ್ರಾಪ್ತಿ ಸಾಧ್ಯ ಎನ್ನುವ ಮಾತನ್ನು ಭಾಗವತ(೧೧.೨೧.೨೭) ತೀಕ್ಷ್ಣವಾಗಿ ಖಂಡಿಸುತ್ತದೆ. ‘ಅಗ್ನಿಮುಗ್ಧಾ ಧೂಮತಾಂತಾಃ ಸ್ವಂ ಲೋಕಂ ನ ವಿದಂತಿ ತೇ’ ಜ್ಞಾನವಿಲ್ಲದೇ ನಿರಂತರ ಯಜ್ಞ ಮಾಡುವವರು ಹೊಗೆ ತಿಂದು ಸಾಯುತ್ತಾರೆ ಎನ್ನುವ ಮಾತು ಇದಾಗಿದೆ. ಮಂತ್ರದ ಮುಖೇನ ಅಗ್ನಿಯಲ್ಲಿ ಆರಾಧನೆ ಮಾಡುವವರು ತನಗೆ ಆಶ್ರಯನಾದ, ಆ ಮಂತ್ರದ ಪ್ರತಿಪಾದ್ಯನಾದ  ಭಗವಂತನ ಕುರಿತಾದ ಯಾವುದೇ ಜ್ಞಾನವಿಲ್ಲದೇ ಕರ್ಮ ಮಾಡಿದರೆ, ಅದರಿಂದ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಯಾಸ್ಕ ಮಹರ್ಷಿಗಳು ನಿರುಕ್ತದಲ್ಲಿ ಹೀಗೆ ಹೇಳುತ್ತಾರೆ:   ‘ಸ್ಥಾಣುರಯಂ ಭಾರಹಾರಃ ಕಿಲಾಭೂತ ಅಧೀತ್ಯ ವೇದಂ ನ ವಿಜಾನಾತಿ ಯೋರ್ಥಂ | ಯೋರ್ಥಜ್ಞ ಇತಿ ಸಕಲಂ ಭದ್ರಮಶ್ನುತೇ ನಾಕಮೇತಿ ಜ್ಞಾನವಿಧೂತ ಪಾಪ್ಮಾ’ - ವೇದಾಧ್ಯಯನಮಾಡಿ ಅರ್ಥವನ್ನು ತಿಳಿಯದೇ ಇರುವವನು ಫಲಪುಷ್ಪಗಳನ್ನು ಹೊತ್ತು ನಿಂತಿರುವ ಮರಕ್ಕೆ ಸಮ ಎಂದು. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿ ಶ್ವೇತಾಶ್ವತರ ಮುನಿ ‘ಮೋಕ್ಷಕ್ಕೆ ಜ್ಞಾನವೊಂದೇ ಮೂಲ ಸಾಧನ’ ಎಂದು ಒತ್ತಿ ಹೇಳಿರುವುದು. ಆದರೆ ದುಃಖದ ಸಂಗತಿ ಏನೆಂದರೆ, ಇಂದಿಗೂ ವೇದಾಧ್ಯಯನ ಮಾಡುವ ಬಹಳ ಮಂದಿ ವೇದದ ಅರ್ಥವನ್ನು ತಿಳಿಯುವ ಪ್ರಯತ್ನವನ್ನು ಬಿಟ್ಟು ಕೇವಲ  ಬಾಯಿಪಾಠ ಮಾಡುತ್ತಾರೆ. ವಾಸ್ತವಿಕವಾಗಿ ವೇದವಿರುವುದೇ ಅರ್ಥ(ಭಗವಂತನನ್ನು) ತಿಳಿಯಲು. ಆ ಅಪೂರ್ವ ಅರ್ಥ ತಿಳಿದು ಜ್ಞಾನ ಮಾರ್ಗದಲ್ಲಿ ಮುಂದುವರಿದಾಗ ಸಾವನ್ನು ಮೀರಿನಿಲ್ಲುವ ಮೋಕ್ಷಪ್ರಾಪ್ತಿ ಸಾಧ್ಯ.

 

ಯಸ್ಮಾತ್ ಪರಂ ನಾಪರಮಸ್ತಿ ಕಿಂಚಿದ್ಯಸ್ಮಾನ್ನಣೀಯೋ ನ ಜ್ಯಾಯೋಽಸ್ತಿ ಕಶ್ಚಿತ್

ವೃಕ್ಷ ಇವ ಸ್ತಬ್ಧೋ ದಿವಿ ತಿಷ್ಠತ್ಯೇಕಸ್ತೇನೇದಂ ಪೂರ್ಣಂ ಪುರುಷೇಣ ಸರ್ವಮ್ ೦೩.೦೯

 

ಈ ಶ್ಲೋಕದಲ್ಲಿನ   ‘ಯಸ್ಮಾತ್ ಪರಂ ನಾಪರಮಸ್ತಿ ಕಿಂಚಿತ್’  ಎನ್ನುವ ಮಾತನ್ನು ನೇರ ಅನುವಾದ ಮಾಡಿ ನೋಡಿದರೆ ‘ಅವನಿಗಿಂತ ಉತ್ತಮನೂ ಇಲ್ಲಾ, ಅವನಿಗಿಂತ ಕೆಳಗಿನವನೂ ಇಲ್ಲ’ ಎಂದು ಹೇಳಿದಂತೆ ಕಾಣುತ್ತದೆ. ಅಂದರೆ ‘ಅವನೊಬ್ಬನೇ ಇರುವುದು’ ಎಂದಂತಾಗುತ್ತದೆ. ಆದರೆ ಹೀಗೆ ಅರ್ಥ ಮಾಡಿದರೆ ಅದು ಹಿಂದೆ ಹೇಳಿದ ಮಾತಿಗೆ ಹಾಗೂ ಮುಂದೆ ಹೇಳುವ ಮಾತುಗಳಿಗೂ  ಕೂಡುವುದಿಲ್ಲ. ಅಷ್ಟೇ ಅಲ್ಲಾ, ಇದೇ ಶ್ಲೋಕದ ಉತ್ತರಾರ್ಧದಲ್ಲಿ ಹೇಳಿರುವ ‘ತನೇದಂ ಪೂರ್ಣಂ ಪುರುಷೇಣ ಸರ್ವಮ್- ಅವನು ಎಲ್ಲವುದರಲ್ಲೂ ತುಂಬಿದ್ದಾನೆ   ಎನ್ನುವ ಮಾತಿಗೂ ಕೂಡುವುದಿಲ್ಲ. ಎಲ್ಲವೂ ಇಲ್ಲದೇ ಇದ್ದರೆ ಎಲ್ಲವುದರಲ್ಲೂ ತುಂಬುವುದು ಹೇಗೆ? ಹೀಗಾಗಿ ಇಲ್ಲಿ ಋಷಿ ಸಂದರ್ಭೋಚಿತವಾಗಿ ಏನನ್ನು ಹೇಳಲು ಹೊರಟಿದ್ದಾನೆ ಎನ್ನುವುದನ್ನು ನಾವು ತಿಳಿಯಬೇಕಾಗುತ್ತದೆ.  ಸೂಕ್ಷ್ಮವಾಗಿ ಈ ಶ್ಲೋಕವನ್ನು ಗಮನಿಸಿದರೆ   ‘ಯಸ್ಮಾತ್ ಪರಂ ನಾಪರಮಸ್ತಿ ಕಿಂಚಿತ್’   ಎನ್ನುವಲ್ಲಿ ಕೇವಲ ಒಂದು ‘ನ-ಕಾರ’ದ ಪ್ರಯೋಗವಿದೆ.  ಮುಂದೆ  ‘ಯಸ್ಮಾನ್ನಣೀಯೋ ನ ಜ್ಯಾಯೋಽಸ್ತಿ’  ಎನ್ನುವಲ್ಲಿ  ಎರಡು ‘ನ-ಕಾರ’ ಪ್ರಯೋಗವಾಗಿರುವುದು ಕಾಣುತ್ತದೆ. ಹೀಗಾಗಿ  ‘ಯಸ್ಮಾತ್ ಪರಂ ನಾಪರಮಸ್ತಿ ಕಿಂಚಿತ್’    ಎನ್ನುವಲ್ಲಿ ಕೇವಲ ಒಂದನ್ನು ನಿಷೇಧ ಮಾಡಿ ‘ಯಸ್ಮಾತ್ ಪರಂ ನಾಸ್ತಿ’  ಎಂದು ಋಷಿ ಹೇಳಿದ್ದಾನೆ ಎನ್ನುವುದು ತಿಳಿಯುತ್ತದೆ.  ಅಂದರೆ, ಅವನಿಗಿಂತ ಉತ್ತಮವಾದುದ್ದು ಇನ್ನೊಂದಿಲ್ಲ.  ಏಕೆಂದರೆ ಅವನೇ ಪರಮಪುರುಷ.  ಆದರೆ ‘ಯಸ್ಮಿನ್ ಅಪರಂ  ಅಸ್ತಿ’  ಅವನ ಮುಂದೆ ಇತರ ಎಲ್ಲಾ ವಸ್ತುಗಳೂ ನಗಣ್ಯ. ಇಂತಹ ಭಗವಂತ ‘ಯಸ್ಮಿನ್ ನ-ಣೀಯಃ  ನ-ಜ್ಯಾಯೋಽಸ್ತಿ’ - ಅಣೋರಣೀಯಾನ್ ಮಹತೋ- ಮಹೀಯಾನ್.  ಅವನಿಗಿಂತ ಚಿಕ್ಕದಾದದ್ದು ಇನ್ನೊಂದಿಲ್ಲ ಮತ್ತು ಅವನಿಗಿಂತ ದೊಡ್ಡ ವಸ್ತುವೂ ಇನ್ನೊಂದಿಲ್ಲ.

ಇಂತಹ ಭಗವಂತನನ್ನು ಇಲ್ಲಿ ಶ್ವೇತಾಶ್ವತರ ಮುನಿ ‘ಕಶ್ಚಿತ್ - ಅದೊಂದು ಸಂಗತಿ’ ಎಂದಷ್ಟೇ ಹೇಳಿರುವುದು ವಿಶೇಷ. ಏಕೆ ಹೀಗೆ ಹೇಳಿದ್ದಾನೆ ಎಂದರೆ,  ಇದು ಭಗವಂತನನ್ನು ಕಂಡವರ ಕಷ್ಟ! ಒಂದು ವಸ್ತುವಿನ ಪರಿಚಯವೇ ಇಲ್ಲದ ವ್ಯಕ್ತಿಗೆ, ಆ ವಸ್ತುವಿನ ಪರಿಚಯವನ್ನು ಶಬ್ದದ  ಮೂಲಕ ಅಥವಾ ಭಾಷೆಯ ಮೂಲಕ ವಿವರಿಸಿ ಅರ್ಥ ಮಾಡಿಸುವುದು ಅಸಾಧ್ಯ. ಉದಾಹರಣೆಗೆ  ಮೊಸರನ್ನು  ತಿಂದವನೊಬ್ಬ   ಜೀವಮಾನದಲ್ಲೇ  ಮೊಸರನ್ನು ತಿನ್ನದ ವ್ಯಕ್ತಿಗೆ, ಆ ಮೊಸರಿನ ರುಚಿಯನ್ನು ಶಬ್ದಗಳ ಮೂಲಕ ವಿವರಿಸಿ ಹೇಳುವುದು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಆ ರುಚಿಯನ್ನು ಮೊಸರು ತಿಂದೇ ತಿಳಿದುಕೊಳ್ಳಬೇಕು. ನಾವು ನಿತ್ಯ ಬಳಸುವ ವಸ್ತುವಿನ ರುಚಿಯನ್ನೇ ಇನ್ನೊಬ್ಬರಿಗೆ  ಶಬ್ದಗಳ ಮೂಲಕ ವಿವರಿಸಿ ಹೇಳಲು ಸಾಧ್ಯವಿಲ್ಲವೆಂದಮೇಲೆ,  ಭಗವಂತನ ಕುರಿತು ಶಬ್ದಗಳಿಂದ ವಿವರಿಸುವುದು ಹೇಗೆ? ಹೀಗಾಗಿ ಭಗವಂತ ಹೀಗೇ ಇದ್ದಾನೆ ಎಂದು ಉಪನ್ಯಾಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ಶಬ್ದದಿಂದ ತಿಳಿಯುವುದು ನಮಗೆ ಪರಿಚಿತವಾಗಿರುವ ವಸ್ತು ಮಾತ್ರ. ಅಪರಿಚಿತವಾದ ವಸ್ತುವನ್ನು ಶಬ್ದದಿಂದ ಹೇಳಿದರೆ ನಮಗೆ ಅರ್ಥವಾಗುವುದಿಲ್ಲ. ಹೀಗಾಗಿ ಭಗವಂತನನ್ನು ನಾವು ಕಾಣಬೇಕು, ಕಂಡು   ಅನುಭವವಾಗಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ ‘ನೇತಿ ನೇತಿ ಆತ್ಮಾ ಅಗ್ರಹ್ಯಃ ನ ಹಿ ಗ್ರಹ್ಯತೆ’- ಭಗವಂತನನ್ನು ಮೊದಲು ತಿಳಿಯುವುದೇನೆಂದರೆ ‘ಭಗವಂತ ಪೂರ್ಣವಾಗಿ ತಿಳಿಯಲಿಕ್ಕಾಗುವ ವಸ್ತುವಲ್ಲ’ ಎಂದು!  ಅವನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ ಎಂದು ತಿಳಿಯುವುದೇ ಮೊದಲು ನಾವು ಭಗವಂತನ ಬಗ್ಗೆ ತಿಳಿಯಬೇಕಾದ ವಿಷಯ. ಇದನ್ನು ಪ್ರಥಮ ಅಧ್ಯಾಯದ ಓಂಕಾರದ ವಿವರಣೆಯಲ್ಲಿ  ಈಗಾಗಲೇ ನಾವು ನೋಡಿದ್ದೇವೆ. ಈ ರೀತಿ ಹೇಳಿದಾಗ ನಾವು ನಿರಾಶರಾಗುವುದು ಬೇಡ. ಶಬ್ದದಿಂದ ಹೇಳಲು ಅಸಾಧ್ಯವಾದ ಭಗವಂತನನ್ನು ಶಬ್ದದಿಂದಲೇ ಹೇಳುವ ಪ್ರಯತ್ನವನ್ನು ವೇದ ಮಾಡುತ್ತದೆ. ‘ಅವನು ನಮಗೆ ತಿಳಿದಿರುವ ಎಲ್ಲವುದಕ್ಕಿಂತ ಎತ್ತರ ಹಾಗೂ ಭಿನ್ನ’ ಎಂದು ಹೇಳುತ್ತಾ, ವೇದ ನಮಗೆ ಭಗವಂತನ ಕುರಿತಾದ ಜ್ಞಾನವನ್ನು ನೀಡುತ್ತದೆ.  ಹೀಗಾಗಿ ಇಲ್ಲಿ ಶ್ವೇತಾಶ್ವತರ ಮುನಿ ‘ಕಶ್ಚಿತ್-ವಿವರಿಸಲು ಬಾರದ ಸಂಗತಿ’ ಎಂದು ಹೇಳಿರುವುದು.

 

ವಿವರಿಸಲು ಅಸಾಧ್ಯವಾದ ಭಗವಂತನ ಕುರಿತು ಶ್ವೇತಾಶ್ವತರ  ಮುನಿ ಶ್ಲೋಕದ ಉತ್ತರಾರ್ಧದಲ್ಲಿ    ಈ ರೀತಿ ಹೇಳುತ್ತಾನೆ:  ‘ಅದೊಂದು  ದೊಡ್ಡ ಆಲದ ಮರವಿದ್ದಂತೆ. ಎಲೆಲ್ಲೂ ಆ ಮರದ ವ್ಯಾಪ್ತಿ ಪಸರಿಸಿದೆ. ಅದರ ಮುಂದೆ ನಾವೆಲ್ಲರೂ ತೃಣವಿದ್ದಂತೆ’ ಎಂದು. ಇಲ್ಲಿ ಬಳಸಿರುವ ‘ವೃಕ್ಷ’ ಎನ್ನುವ ಪದದ ಶಬ್ದನಿಷ್ಪತ್ತಿಯನ್ನು ನೋಡಿದರೆ ‘ವೃಶ್ಚತೀತಿ ವೃಕ್ಷಃ’ ಅಂದರೆ ಸಂಸಾರವನ್ನು ಛೇಧಿಸಿ(ವೃಶ್ಚ) ನಮಗೆ  ಸಾವಿಲ್ಲದ ಮೋಕ್ಷವನ್ನು ನೀಡುವ ಶಕ್ತಿ  ಆ ಭಗವಂತ. ಇಂತಹ ಭಗವಂತ  ‘ಸ್ತಬ್ಧಃ’ – ಯಾರ ಮುಂದೆಯೂ     ತಲೆ ತಗ್ಗಿಸದ ಸರ್ವಸಮರ್ಥ ಶಕ್ತಿ. 

ದಿವಿ ತಿಷ್ಠತಿ ಏಕಃ’- ಈ ಪ್ರಪಂಚದಲ್ಲಿರುವ ಸಮಸ್ತ ವಸ್ತುಗಳನ್ನೂ ಸೃಷ್ಟಿ ಮಾಡಿರುವುದು ಈ ಭಗವಂತ. ಇಂತಹ ಸರ್ವಕರ್ತನಾದ ಭಗವಂತನಿಗೆ ಅವನ ಮಹಿಮೆಯೇ ನೆಲೆ. ಪ್ರಕಾಶಮಾನವೂ, ಜ್ಞಾನಾನಂದಮಯವೂ ಆಗಿರುವ,  ತನ್ನ ನೆಲೆಯಲ್ಲೇ ತಾನು ನಿಂತಿರುವ, ಎಲ್ಲದರ ಒಳಗೂ ತುಂಬಿರುವ(ಪುರಿ-ಶೇತೇ ಇತಿ ಪುರುಷಃ) ಪರಿಪೂರ್ಣನಾದ ವೃಕ್ಷಃ ಈ ಭಗವಂತ.

 

ತತೋ ಯದುತ್ತರತತಂ ತದರೂಪಮನಾಮಯಮ್

ಯ ಏತದ್ವಿದುರಮೃತಾಸ್ತೇ ಭವಂತಿ ಅಥೇತರೇ ದುಃಖಮೇವಾಪಿಯನ್ತಿ ೦೩.೧೦

 

ಇಡೀ ವಿಶ್ವದಲ್ಲಿ ತುಂಬಿರುವ ಆ ಭಗವಂತ ಈ ವಿಶ್ವದಿಂದ ಅಳೆಯಲು ಅಸಾಧ್ಯವಾದಷ್ಟು ಎತ್ತರದಲ್ಲಿರುವ ವಸ್ತು. ಎತ್ತರಕ್ಕಿಂತ-ಎತ್ತರ, ಅದಕ್ಕಿಂತ ಎತ್ತರವಾದದ್ದು ಇನ್ನೊಂದಿಲ್ಲ. ಆತನಿಗೆ ಲೌಕಿಕವಾದ ಯಾವ ಆಕಾರವೂ ಇಲ್ಲಾ, ಬಣ್ಣವೂ ಇಲ್ಲ. ನಮಗೆ ಗೊತ್ತಿರುವ ಯಾವ ಪ್ರಾಕೃತ ರೂಪವೂ ಅವನಿಗೆ ಅನ್ವಯವಾಗುವುದಿಲ್ಲ. ಹೇಗೆ ಆಕಾರವಿಲ್ಲದ ನೀರು ಮಡಿಕೆಯೊಳಗೆ ತುಂಬಿದಾಗ ಮಡಿಕೆಯ ಆಕಾರವನ್ನು ಪಡೆಯುತ್ತದೋ, ಹೇಗೆ ಆಕಾರವಿಲ್ಲದ ಬೆಳಕು ಕೋಣೆಯೊಳಗೆ ತುಂಬಿ ಕೋಣೆಯ ಆಕಾರವನ್ನು ಪಡೆಯುತ್ತದೋ, ಹಾಗೇ ವಿಶ್ವದ ಎಲ್ಲಾ ವಸ್ತುಗಳಲ್ಲೂ ತುಂಬಿರುವ ಆ ಭಗವಂತ ವಿಶ್ವರೂಪ. ಹೀಗಾಗಿ ಪ್ರತಿಯೊಂದು ವಸ್ತುವಿನ ಆಕಾರವೂ ಅವನ ಆಕಾರ. ಇನ್ನು ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಒಂದಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ. ಆದರೆ ಭಗವಂತ ಪೂರ್ಣ. ಉದಾಹರಣೆಗೆ ಬೆಳಕು. ಬೆಳಕಿನ ಕೊರತೆ ನೆರಳು. ಆದರೆ ಭಗವಂತ ನೆರಳಿಲ್ಲದ ಬೆಳಕು. ಇಂತಹ ಭಗವಂತನನ್ನು ಶಬ್ದದಿಂದ ಹೀಗೇ ಎಂದು ವರ್ಣಿಸುವುದು ಅಸಾಧ್ಯ.

ಭಗವಂತನಿಗೆ ಭೌತಿಕ ರೂಪವಿಲ್ಲ, ಆದರೆ ಅವನ ಅಪ್ರಾಕೃತ ರೂಪವನ್ನು ಧ್ಯಾನದಲ್ಲಿ ಕಾಣಲು ಸಾಧ್ಯ. ಈ ರೀತಿ ಯಾವ ಕೊರತೆಯೂ ಇಲ್ಲದ, ಪರಿಪೂರ್ಣನಾದ ಭಗವಂತನ ಕುರಿತು ತಿಳಿದಾಗ, ಸಾವನ್ನು ಗೆದ್ದು ಮೋಕ್ಷವನ್ನು ಸೇರಲು ಸಾಧ್ಯ. ಹೀಗಾಗಿ ಮೋಕ್ಷದ ದಾರಿ ಕೇವಲ ಜ್ಞಾನಮಾರ್ಗ. ಈ ಮಾರ್ಗದಲ್ಲಿ ನಡೆದವನು ಮೋಕ್ಷವನ್ನು ಸೇರಿದರೆ, ಇದನ್ನು ಅರಿಯದವನು ಸಾವಿನ ಚಕ್ರದಲ್ಲಿ ಸುತ್ತುತ್ತಿರುತ್ತಾನೆ.

 

ಅಙ್ಗುಷ್ಠಮಾತ್ರಃ ಪುರುಷೋಽನ್ತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಠಃ

ಹೃದಾ ಮನೀಷಾ ಮನಸಾಭಿಕ್ಲೃಪ್ತೋ ಯ ಏತದ್ ವಿದುರಮೃತಾಸ್ತೇ ಭವಂತಿ ೦೩.೧೩

 

ಧ್ಯಾನದಲ್ಲಿ ತಾನು ಕಂಡ, ಶಬ್ದಗಳಿಂದ ವರ್ಣಿಸಲಸಾಧ್ಯವಾದ ಭಗವಂತನ ಕುರಿತು ಶ್ವೇತಾಶ್ವತರ ಮುನಿ ಇಲ್ಲಿ ವಿವರಿಸುವುದನ್ನು ಕಾಣುತ್ತೇವೆ. ಈ ಶ್ಲೋಕ ಕಠೋಪನಿಷತ್ತಿನಲ್ಲೂ(೦೨.೦೩) ಬಂದಿರುವುದನ್ನು ನಾವು ಕಾಣಬಹುದು. ಜೀವ ಎನ್ನುವುದು ಅತಿಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ,  ಜೀವ  ಅತಿಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಲ್ಲೇ ಭಗವಂತ ಮತ್ತು ಪ್ರಾಣ ಜೀವನನ್ನು ಧರಿಸಿ ನೆಲೆಸಿರುತ್ತಾರೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ: ಪದ್ಮಕೋಶ-ಪ್ರತೀಕಾಶಙ್ಗಂ ಹೃದಯಂಚಾಪ್ಯಧೋಮುಖಮ್”  ಕೆಳಮುಖವಾಗಿರುವ ಕೆಂದಾವರೆಯ ಮೊಗ್ಗಿನಂತಿರುವ ಶಕ್ತಿ ಕೇಂದ್ರದಲ್ಲಿರುವ, ಅತ್ಯಂತ ಸೂಕ್ಷ್ಮವಾದ, ಮೇಲ್ಮುಕವಾಗಿರುವ ಕಮಲಾಕಾರದ ನೆಲೆಮನೆಯಲ್ಲಿ ಜೀವನನ್ನು ಪ್ರಾಣಾಂತರ್ಗತ ಭಗವಂತ ಧರಿಸಿ ನಿಂತಿದ್ದಾನೆ. ದೇಹದ ಸಮಸ್ತ ಚಟುವಟಿಕೆಗಳು ನಡೆಯುವುದು ಈ ಶಕ್ತಿ ಕೇಂದ್ರದಿಂದ. ಧ್ಯಾನದಲ್ಲಿ ನಮಗೆ ನಮ್ಮ ಅಂಗುಷ್ಠ ಗಾತ್ರದಲ್ಲಿ ಭಗವಂತನ ದರ್ಶನವಾಗುತ್ತದೆ. ಶಾಸ್ತ್ರಕಾರರು ಹೇಳುವಂತೆ ಇನ್ನೂ ಗಾಢವಾದ ಧ್ಯಾನ(ಉನ್ಮನೀ ಭಾವ) ಸ್ಥಿತಿಯಲ್ಲಿ ಹೃತ್ಕಮಲ ಮಧ್ಯ ನಿವಾಸಿ ಭಗವಂತನ ದರ್ಶನ ನಮಗಾಗುತ್ತದೆ. ಆದರೆ ಇದನ್ನು ನಾವು ಗ್ರಹಿಸುವುದು ಬಹಳ ಕಷ್ಟ. ಏಕೆಂದರೆ ನಮ್ಮ ಜೀವಸ್ವರೂಪವೇ ಒಂದು ಅಣುವಿನ ಗಾತ್ರದ್ದು. ಅದರ ಹೆಬ್ಬೆರಳಿನ ಗಾತ್ರದಲ್ಲಿ ಅಂತರ್ಯಾಮಿಯಾಗಿ, ಅಣೋರಣೀಯನಾಗಿ, ಪ್ರತಿಯೊಬ್ಬ ಜೀವರ ಹೃದಯದಲ್ಲಿ  ಭಗವಂತ ನೆಲೆಸಿದ್ದಾನೆ.

ಭಗವಂತನನ್ನು ನಾವು ನಮ್ಮ ಶುದ್ಧವಾದ ಮನಸ್ಸಿನಿಂದ ನಮ್ಮೊಳಗೇ ಕಾಣಬೇಕು. ಈ ರೀತಿ ಆತನನ್ನು ಕಾಣಬೇಕಾದರೆ ನಮಗೆ ಶುದ್ಧ, ಸಾತ್ವಿಕವಾದ, ನಿರಂತರ ಭಗವಂತನನ್ನು ಪ್ರೀತಿಸುವ, ಭಕ್ತಿಯಿಂದ ತುಂಬಿರುವ  ಮನಸ್ಸಿರಬೇಕು. ಇಂತಹ ಶುದ್ಧ ಮನಸ್ಸಿನಿಂದ ಭಗವಂತನ ಬಗೆಗೆ ನಿರಂತರ ಅಂತರಂಗ ಮಥನ ಮಾಡಬೇಕು. ಆಗ ಭಗವಂತನ ನಿಶ್ಚಿತವಾದ ಅನುಭೂತಿ ಬರುತ್ತದೆ.

[‘ಭಗವಂತ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರನಾಗುವುದಿಲ್ಲ. ಆತನನ್ನು ಕಾಣಬೇಕೆಂದರೆ ನಾವು ನಮ್ಮ ಒಳಗಣ್ಣಿನಿಂದ ಕಾಣಬೇಕು’  ಎಂದಾಗ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ಅವತಾರ ರೂಪಿ ಭಗವಂತನನ್ನು ಆ ಕಾಲದಲ್ಲಿ ಎಲ್ಲರೂ ಕಂಡಿದ್ದರು. ಆದರೆ ಶಾಸ್ತ್ರ ಆತ ಹೊರಗಣ್ಣಿಗೆ ಅಗೋಚರ ಎನ್ನುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು. ನಿಜ, ಅವತಾರ ರೂಪಿ ಭಗವಂತನನ್ನು ಎಲ್ಲರೂ ಕಾಣುತ್ತಿದ್ದರು. ಕೇವಲ ಸಾತ್ವಿಕರಷ್ಟೇ ಅಲ್ಲ, ರಾಕ್ಷಸರೂ ಕೂಡಾ! ಆದರೆ ಅದು ಭಗವಂತನ ಸಾಕ್ಷಾತ್ಕಾರವಲ್ಲ. ಭಗವಂತನ ಸಾಕ್ಷಾತ್ಕಾರ ಕೇವಲ ಜ್ಞಾನದೃಷ್ಟಿಯಲ್ಲಿ ಮಾತ್ರ ಸಾಧ್ಯ. ಜ್ಞಾನದೃಷ್ಟಿ ಇಲ್ಲದೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ].

 

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್

ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಶಾಙ್ಗುಲಮ್ ೦೩.೧೪

 

ಪುರುಷಸೂಕ್ತದಲ್ಲಿ ಬಂದಿರುವ ಈ ಮಂತ್ರ ಅಂತರಂಗವನ್ನು ತೆರೆದು ತೋರಿಸುವಂತಹ ಮಂತ್ರವಾಗಿದೆ. ಈ ಮಂತ್ರದಲ್ಲಿ ಒಂದು ವಿಶಿಷ್ಟವಾದ ಉಪಾಸನೆ ಇದೆ.  ಇಲ್ಲಿ ಭಗವಂತನನ್ನು ‘ಸಹಸ್ರಶೀರ್ಷಾ ಪುರುಷಃ’ ಎಂದು ಸಂಬೋಧಿಸಿದ್ದಾರೆ.  ಭಾಗವತದಲ್ಲಿ ಭಗವಂತನ ‘ಪುರುಷ’ ರೂಪದ ಕುರಿತಾದ ವಿವರಣೆಯನ್ನು ಕಾಣುತ್ತೇವೆ.  ‘ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ   । ಭೂತಂ ಷೋಡಶಕಲಮಾದೌ ಲೋಕಸಿಸೃಕ್ಷಯಾ’ (೧.೩.೧.). ಜಗತ್ತಿನ ಸೃಷ್ಟಿಗಾಗಿ ಭಗವಂತ ವಿಶೇಷ ರೂಪದಲ್ಲಿ ಆವಿರ್ಭಾವಗೊಂಡ ರೂಪವೇ ಆತನ ‘ಪುರುಷಃ’ ನಾಮಕ ರೂಪ. ಇದು ಎಲ್ಲಕ್ಕಿಂತ ಮೊದಲ ಅವತಾರರೂಪ. ಭಗವಂತನ ಈ ರೂಪಕ್ಕೆ ಇನ್ನೊಂದು ಹೆಸರು ‘ಪದ್ಮನಾಭ’. ಜಗತ್ತನ್ನು ಸೃಷ್ಟಿಮಾಡುವ ಮೊದಲು ತಾನೊಂದು ರೂಪಧರಿಸಿ, ತನ್ನ ನಾಭಿಯಿಂದ ಚತುರ್ಮುಖನನ್ನು ಸೃಷ್ಟಿಮಾಡಿ, ಬ್ರಹ್ಮಾಂಡವನ್ನು ಸೃಷ್ಟಿಮಾಡಿದ ರೂಪವೇ ಈ ಪದ್ಮನಾಭ ರೂಪ. ಶಾಸ್ತ್ರಕಾರರು ಸೃಷ್ಟಿಗೆ ಕಾರಣವಾಗಿರುವ ಮೂರು ಪುರುಷರೂಪಗಳನ್ನು ಉಲ್ಲೇಖಿಸುತ್ತಾರೆ. ೧. ನಾಭಿಕಮಲದಿಂದ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಮಾಡಿದ ರೂಪ. ೨. ಚತುರ್ಮುಖನ ಮುಖೇನ ಸೃಷ್ಟಿಯಾದ ಬ್ರಹ್ಮಾಂಡದೊಳಗೆ ತುಂಬಿದ ರೂಪ. ೩. ಬ್ರಹ್ಮಾಂಡದೊಳಗೆ ಅನಂತಾನಂತ ಪಿಂಡಾಂಡಗಳನ್ನು ಸೃಷ್ಟಿಮಾಡಿ, ಆ ಪಿಂಡಾಂಡದೊಳಗೆ ತುಂಬಿದ ಪುರುಷರೂಪ.

ಸೃಷ್ಟಿಯ ಆದಿಯಲ್ಲಿ ಭಗವಂತ ತೊಟ್ಟ ರೂಪಕ್ಕೆ ಸಹಸ್ರಾರು ಶಿರಗಳು, ಸಹಸ್ರಾರು ಕಣ್ಣುಗಳು, ಕಾಲುಗಳು. ಹೀಗೆ ಭಗವಂತ ಸೃಷ್ಟಿಯ ನಿರ್ಮಾಣಕ್ಕಾಗಿ ಒಂದು ವಿಶ್ವರೂಪವನ್ನು ಧಾರಣೆ ಮಾಡಿದ. ಇಲ್ಲಿ ‘ಶೀರ್ಷ’ ಎನ್ನುವುದು ಎಲ್ಲಾ ಅವಯವಗಳಿಗೆ ಉಪಲಕ್ಷಣ. ಅವನ ಅನಂತ ಗುಣಗಳೇ ಅವನ ಅನಂತ ರೂಪಗಳು, ಅನಂತ ಅವಯವಗಳು.  ಅವನು ಬೇರೆ ಅಲ್ಲ, ಅವನ ಅಂಗಾಂಗಗಳು ಬೇರೆ ಅಲ್ಲ. ಅವನೂ ಜ್ಞಾನಾನಂದಮಾಯ ಅವನ ಶರೀರಾವಯವಗಳೂ ಜ್ಞಾನಾನಂದಮಯ. ಇಲ್ಲಿ ಕಣ್ಣುಗಳು ಎಲ್ಲಾ  ಜ್ಞಾನೇಂದ್ರಿಯಗಳಿಗೆ,  ಕಾಲುಗಳು ಕರ್ಮೇಂದ್ರಿಯಗಳಿಗೆ ಉಪಲಕ್ಷಣ.

ಸ ಭೂಮಿಮ್’ ಎನ್ನುವಲ್ಲಿ ‘ಭೂಮಿ’ ಎಂದರೆ ಬರಿಯ ಪೃಧಿವಿಯಷ್ಟೇ ಅಲ್ಲ. ೧. ಪ್ರಕೃತಿ ನಿರ್ಮಿತವಾದ ಇಡೀ ವಿಶ್ವ/ಬ್ರಹ್ಮಾಂಡ- ಭೂಮಿ, . ೨. ಮಣ್ಣಿನಿಂದ ಪ್ರಚುರವಾಗಿ ನಿರ್ಮಾಣವಾಗಿರುವ ಭೌಮಶರೀರ-ಭೂಮಿ.  ಭಗವಂತ ಈ ಬ್ರಹ್ಮಾಂಡವನ್ನು ತುಂಬಿ ಅದರಿಂದಾಚೆಯೂ ಅನಂತವಾಗಿ ವ್ಯಾಪಿಸಿದ್ದಾನೆ. ಬ್ರಹ್ಮಾಂಡವನ್ನು ತೆಗೆದುಕೊಂಡಾಗ ಇಲ್ಲಿ ದಶಾಂಗುಲ ಎಂದರೆ  ಹತ್ತು ಅಂಗುಲ ಎಂದರ್ಥವಲ್ಲ.  ಹಿಂದೆ ಹೇಳಿದ ಸಹಸ್ರ ಶಬ್ದ ಹಾಗೂ ಇಲ್ಲಿ ಹೇಳಿರುವ ದಶ ಶಬ್ದ ಎರಡೂ ಅನಂತವಾಚಕ. ಭಗವಂತ ಬ್ರಹ್ಮಾಂಡ ಹಾಗೂ ಬ್ರಹ್ಮಾಂಡದಿಂದ ಆಚೆ ಅನಂತವಾಗಿ ವ್ಯಾಪಿಸಿದ್ದಾನೆ. ಇನ್ನು ಪಿಂಡಾಂಡವನ್ನು ತೆಗೆದುಕೊಂಡಾಗ ನಾಭಿಯಿಂದ ಹತ್ತು ಅಂಗುಲ ಮೇಲೆ ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ. ಅಷ್ಟೇ ಅಲ್ಲ, ತಲೆಯಿಂದ ಮೇಲ್ಭಾಗದ ಸಹಸ್ರಾರವೆಂಬ ಶಕ್ತಿಕೇಂದ್ರದಲ್ಲಿ ಭಗವಂತ ನೆಲೆಸಿದ್ದಾನೆ. ಸಹಸ್ರಾರದಲ್ಲಿರುವ ಸಾವಿರ ಹೆಡೆಯ ಹಾವಿನ ಮೇಲೆ ಭಗವಂತ ಕುಣಿಯುವುದೇ ಸಹಸ್ರಾರದಲ್ಲಿ ಭಗವಂತನ ದರ್ಶನ. ಹೀಗೆ ಬ್ರಹ್ಮಾಂಡದಲ್ಲಿ ನಮಗೆ ಅಳೆಯಲು ಅಸಾಧ್ಯವಾದ ಎತ್ತರದಲ್ಲಿರುವ ಭಗವಂತನನ್ನು, ನಮ್ಮ ದೇಹದಲ್ಲಿರುವ ಅಂತಃಶಕ್ತಿ ಪೂರ್ಣಪ್ರಮಾಣದಲ್ಲಿ ಜಾಗೃತವಾದಾಗ  ಸಹಸ್ರಾರದಲ್ಲಿ ಕಾಣಬಹುದು.       

 

ಪುರುಷ ಏವೇದ ಸರ್ವಮ್ ಯದ್ಭೂತಂ ಯಚ್ಚ ಭವ್ಯಮ್

ಉತಾಮೃತತ್ವಸ್ಯೇಶಾನಃ ಯದನ್ನೇನಾತಿರೋಹತಿ ೦೩.೧೫

 

ಈ ಮಂತ್ರವೂ ಕೂಡಾ ಪುರುಷಸೂಕ್ತದ ಮಂತ್ರವಾಗಿದೆ  ‘ಪುರುಷ ಏವ ಇದಂ ಸರ್ವಮ್’ ಎನ್ನುವುದು ಋಗ್ವೇದದ ಪಾಠ. ಇದನ್ನು ಯಜುರ್ವೇದದಲ್ಲಿಪುರುಷ ಏವೇದ ಸರ್ವಮ್’ ಎನ್ನುತ್ತಾರೆ. ಇದನ್ನು ಉಚ್ಛರಿಸುವಾಗ ಕೆಲವರು ‘ಎವೇದ-ಗುಮ್’ ಎಂದು  ಉಚ್ಛರಿಸುತ್ತಾರೆ. ಆದರೆ ಅದು ಸರಿಯಾದ ಉಚ್ಛಾರವಲ್ಲ. ‘ಗುಮ್’ ಎಂದು ಬಾಯಿಯಿಂದ ಹೇಳದೇ,  ಗ-ಕಾರವನ್ನು ಅನುನಾಸಿಕ ಉಚ್ಛಾರವಾಗಿ ಮೂಗಿನಿಂದ ಹೇಳಬೇಕು.

ಈ ಮಂತ್ರಕ್ಕೆ ಒಂದು ವಿಶಿಷ್ಟವಾದ ವ್ಯಾಖ್ಯಾನವನ್ನು ನಾವು ಶೌನಕಮುನಿಗಳ ಪುರುಷಸೂಕ್ತ ವ್ಯಾಖ್ಯಾನದಲ್ಲಿ ಕಾಣುತ್ತೇವೆ. ‘ಇರುವುದೆಲ್ಲ ಪುರುಷನೇ, ಹಿಂದೆ ಇದ್ದದ್ದೆಲ್ಲಾ ಪುರುಷನೇ, ಮುಂದೆ ಬರುವುದೆಲ್ಲಾ ಪುರುಷನೇ, ಪುರುಷನನ್ನು ಬಿಟ್ಟು ಏನೂ ಇಲ್ಲ’ ಎನ್ನುವ ಮಾತನ್ನು ಅವರು ಅಲ್ಲಿ ಹೇಳುವುದನ್ನು ನಾವು ಕಾಣುತ್ತೇವೆ. ಇದು ಭಗವಂತನ ಅನಂತತ್ವವನ್ನು ಹೇಳುವ ಮಾತಾಗಿದೆ. ಇದಕ್ಕೆ ಪೂರಕವಾಗಿ ಶೌನಕರು ‘ಈಶಾನಃ’ ಪದದೊಂದಿಗೆ ಅನ್ವಯಮಾಡಿ ‘ಯದಿದಂ ಸರ್ವಂ ತಸ್ಯಪುರುಷ ಇವಾ ಈಶಾನಃ’- ಈ ಎಲ್ಲವುದಕ್ಕೂ ಪರಮಪುರುಷನೇ ಒಡೆಯ ಎಂದು  ವಿವರಿಸುವುದನ್ನು ಕಾಣುತ್ತೇವೆ. ಅಂದರೆ ಈಗ ಈ ಪ್ರಪಂಚದಲ್ಲಿ ಏನಿದೆ, ಹಿಂದೆ ಏನಿತ್ತು, ಮುಂದೆ ಏನೆಲ್ಲಾ ಆಗುತ್ತದೆ, ಅದೆಲ್ಲವುದಕ್ಕೂ ಅವನು ಈಶಾನಃ. ಕೇವಲ ಇಲ್ಲಿ ಮಾತ್ರವಲ್ಲ, ‘ಅಮೃತತ್ವಸ್ಯಾಪಿ ಈಶಾನಃ’  ಅಂದರೆ ‘ಮುಕ್ತಾನಾಂ ಪರಮಾಗತಿಃ’. ಸಂಸಾರದಿಂದ ಕಳಚಿಕೊಂಡು ಮುಕ್ತಿಗೆ ಹೋದವರಿಗೂ ಕೂಡಾ ಅವನೇ ಒಡೆಯ.

‘ಪುರುಷ ಏವ’ ಎನ್ನುವುದನ್ನು ‘ಪುರುಷೇ ಏವ’- ಈ ಎಲ್ಲವೂ ಪರಮಪುರುಷನಲ್ಲಿ ಆಶ್ರಿತವಾಗಿದೆ  ಎಂದು ವಿಭಾಗಿಸಿ ಅರ್ಥ ಮಾಡಿದವರೂ  ಇದ್ದಾರೆ. ಇಲ್ಲಿ ಅರ್ಥ ತಪ್ಪಾಗಿಲ್ಲವಾದರೂ ಕೂಡಾ ಒಂದು ಪದ ಪಾಠಾಂತರ ಮಾಡಿ ಹೇಳಿದಂತಾಗುತ್ತದೆ. ‘ಪುರುಷ ಏವ’ ಎನ್ನುವುದು ಭಾಷೆಯ ಸಹಜ ನಡೆ. ಉದಾಹರಣೆಗೆ ಕನ್ನಡದಲ್ಲಿ  ‘ಎಲ್ಲಾ ನೀವೇ’ ಎಂದು ಹೇಳುತ್ತವೆ. ಅಂದರೆ ಅವರನ್ನು ಬಿಟ್ಟು ಇಲ್ಲಿ ಏನೂ ನಡೆಯದು ಎಂದೇ ಅರ್ಥ ಹೊರತು, ಅವರನ್ನು ಬಿಟ್ಟು ಅಲ್ಲಿ ಏನೂ ಇಲ್ಲಾ ಎಂದಲ್ಲ.  

ಅಮೃತತ್ವ ಎಂದರೆ ದೇವತೆಗಳ ಸಮುದಾಯ ಎಂದು ಕೆಲವರು ಅರ್ಥ ಮಾಡುತ್ತಾರೆ.  ಆದರೆ ಪೂರ್ವಾರ್ದದಲ್ಲಿ ಸಮಸ್ತ ವಿಶ್ವವೂ ಭಗವಂತನ ಅಧೀನವಾಗಿದೆ ಎಂದು ಹೇಳಿದಾಗ, ವಿಶ್ವದಲ್ಲೇ ಇರುವ ದೇವತೆಗಳೂ ಅಲ್ಲಿ ಸೇರಿಹೋದರು. ಆದ್ದರಿಂದ ‘ಅಮೃತ’ ಎಂದರೆ ‘ಮುಕ್ತರು’ ಎನ್ನುವುದೇ ಹೆಚ್ಚು ಸಮಂಜಸವಾದ ಅರ್ಥ. ಅಷ್ಟೇ ಅಲ್ಲ, ಅಮೃತ ಎನ್ನುವ ಶಬ್ದ ದೇವತೆಗಳು ಎನ್ನುವುದಕ್ಕಿಂತ  ಮುಕ್ತರು ಎನ್ನುವ ಅರ್ಥದಲ್ಲೇ ಹೆಚ್ಚು ಪ್ರಸಿದ್ಧ. 

‘ಯದನ್ನೇನಾತಿರೋಹತಿ’ - ಇಲ್ಲಿ ಅನ್ನ ಎಂದರೆ ಸಾಂಸಾರಿಕವಾದ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳತಕ್ಕಂತಹ ನಶ್ವರವಾದ ಪ್ರಪಂಚ ಎಂದರ್ಥ. ಆದರೆ ಭಗವಂತ  ‘ಅನ್ನಂ ಅತಿರೋಹತಿ’ –ಈ ಮರ್ತ್ಯ ಪ್ರಪಂಚದಿಂದ ಆಚೆಗೆ ಇರುವವನಾಗಿದ್ದಾನೆ. ಇದನ್ನೇ ಭಾಗವತದಲ್ಲಿ(೦೨.೦೬.೧೭) ‘ಮರ್ತ್ಯಮನ್ನಂ  ಯದತ್ಯಗಾತ್’  ಎಂದು ವಿವರಿಸಿರುವುದನ್ನು ನಾವು ಕಾಣಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಅವನು ಮುಕ್ತಾಮುಕ್ತರ ಒಡೆಯ. ಅವನು ಮುಕ್ತರ ನಿಯಾಮಕನಲ್ಲದಿದ್ದರೆ ತನ್ನ ಅಧೀನದಲ್ಲಿರುವ ಸಂಸಾರಿಗಳನ್ನು ಎಂದೂ ಬಿಡುಗಡೆಯ ಭಾಗ್ಯವಿರುತ್ತಿರಲಿಲ್ಲ.

[ಹೀಗೆ ಇಲ್ಲಿ ಶೇತಾಶ್ವತರ ಮುನಿ ಪುರುಷಸೂಕ್ತದ ಎರಡು ಮಂತ್ರಗಳೊಂದಿಗೆ ಭಗವಂತನ ವರ್ಣನೆ ಮಾಡಿದ್ದಾನೆ. ಪುರುಷಸೂಕ್ತ ಕೇವಲ ಋಗ್ವೇದದಲ್ಲಷ್ಟೇ ಅಲ್ಲ, ಅದು ಎಲ್ಲಾ ವೇದಗಳಲ್ಲೂ ಬರುತ್ತದೆ. ಋಗ್ವೇದದಲ್ಲಿ ೧೬ ಮಂತ್ರಗಳಿದ್ದರೆ, ಯಜುರ್ವೇದದಲ್ಲಿ ೧೮ ಮಂತ್ರಗಳಿವೆ(ಕಿಲ ಭಾಗವನ್ನು ಸೇರಿಸಿದರೆ ಇನ್ನೂ ಹೆಚ್ಚು ಮಂತ್ರಗಳಿವೆ). ಸಾಮವೇದ, ಅಥರ್ವವೇದದಲ್ಲೂ ಕೆಲವು ಮಂತ್ರಗಳಿವೆ.  ತೈತ್ತಿರೀಯ ಆರಣ್ಯಕದಲ್ಲೂ ಪುರುಷಸೂಕ್ತದ ಮಂತ್ರಗಳನ್ನು ಕಾಣುತ್ತೇವೆ. ಹೀಗೆ ಸಮಸ್ತ ವೇದಕ್ಕೂ ಮೂಲಮಂತ್ರ ಪುರುಷಸೂಕ್ತ. ಅಂತಹ ಪುರುಷಸೂಕ್ತದ ಮೊದಲ ಎರಡು ಮಂತ್ರಗಳನ್ನು ಇಲ್ಲಿ ಹೇಳಿದ್ದಾರೆ]. 

 

ಅಣೋರಣೀಯಾನ್ ಮಹತೋ ಮಹೀಯಾನಾತ್ಮಾ ಗುಹಾಯಾಂ ನಿಹಿತೋಽಸ್ಯ ಜನ್ತೋಃ

ತಮಕ್ರತುಃ ಪಶ್ಯತಿ ವೀತಶೋಕೋ ಧಾತುಃ ಪ್ರಸಾದಾನ್ಮಹಿಮಾನಮೀಶಮ್ ೦೩.೨೦

 

ಈ ಮಂತ್ರ ಕಠ ಉಪನಿಷತ್ತಿನಲ್ಲೂ (೧.೨.೨೦) ಬಂದಿದ್ದು, ಇಲ್ಲಿ ಸ್ವಲ್ಪ ಪಾಠ ವ್ಯತ್ಯಾಸದೊಂದಿಗೆ ಪ್ರಸ್ತುತಪಡಿಸಲಾಗಿದೆ. ‘ಅಣೋರಣೀಯಾನ್ ಮಹತೋ ಮಹೀಯಾನಾತ್ಮಾಽಸ್ಯ ಜಂತೋರ್ನ್ನಿಹಿತೋ ಗುಹಾಯಾಮ್ । ತಮಕ್ರತುಃ ಪಶ್ಯತಿ ವೀತಶೋಕೋ  ಧಾತುಃ ಪ್ರಸಾದಾನ್ಮಹಿಮಾನಮಾತ್ಮನಃ’ ಎನ್ನುವುದು ಕಠೋಪನಿಷತ್ತಿನ ಪಾಠವಾಗಿದೆ.

ಈ ಹಿಂದೆ ನಾವು ವಿಶ್ಲೇಷಿಸಿರುವ ‘ಪುರುಷ’ ಶಬ್ದದ ವಿವರಣೆಯನ್ನು ಈ ಮಂತ್ರದಲ್ಲಿ ನಾವು ಕಾಣುತ್ತೇವೆ. ಯಾವುದು ಅತ್ಯಂತ ಸೂಕ್ಷ್ಮವೋ ಅದಕ್ಕಿಂತ ಸೂಕ್ಷ್ಮ, ಯಾವುದು ಅತ್ಯಂತ ಮಹತ್ತಾದದ್ದೋ ಅದಕ್ಕಿಂತಲೂ ಮಹತ್ತಾದವನು ಆ ಭಗವಂತ. ಜೀವ ಇರತಕ್ಕದ್ದು ಅಥವಾ ಜನನ ಉಳ್ಳದ್ದು ಜನ್ತುಃ. ಹೀಗಾಗಿ ನಾವೆಲ್ಲರೂ ಜನ್ತುಗಳೇ. ಮಹತೋಮಯನಾದ ಭಗವಂತ ಅಣೋರಣೀಯನಾಗಿ ಜೀವ ಸ್ವರೂಪದ ಹೃದಯಗುಹೆಯಲ್ಲಿ ನೆಲೆಸಿದ್ದಾನೆ. ಯಾರು ಇಂತಹ ಭಗವಂತನನ್ನು ತನ್ನ ಅಂತರಾತ್ಮದಲ್ಲಿ ಕಾಣುತ್ತಾನೋ, ಅವನು ತನ್ನ ಬದುಕಿನ ಎಲ್ಲಾ ದುಃಖಗಳಿಂದ ದೂರವಾಗುತ್ತಾನೆ.  ಹೀಗಾಗಿ ದೈಹಿಕವಾಗಿ ಪದೇ ಪದೇ ಹುಟ್ಟಿ ಸಾಯುವ ಜೀವ ಸಾವನ್ನು ಗೆಲ್ಲಬೇಕಾದರೆ, ಮೊದಲು ತನ್ನ ಅಂತರಾತ್ಮದಲ್ಲಿರುವ ಆ ಪರಮಾತ್ಮನನ್ನು ಕಾಣಬೇಕು. ಯಾರ ಮನಸ್ಸು ನಿಶ್ಚಯವಾಗಿ ಅ-ಕಾರವಾಚ್ಯನಾದ ಭಗವಂತನಲ್ಲಿ ನೆಲೆಗೊಳ್ಳುತ್ತದೋ ಅವನು ಎಲ್ಲಾ ಶೋಕಗಳಿಂದಲೂ ಮುಕ್ತನಾಗುತ್ತಾನೆ. ಹೀಗಾಗಿ ನಾವು ಪ್ರಾಪಂಚಿಕ ವಿಷಯದಲ್ಲಿ ಮನಸ್ಸನ್ನು ನೆಟ್ಟು ದುಃಖಿಸುವುದಕ್ಕಿಂತ, ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಚಿಂತೆಯಿಂದ ಪಾರಾಗಬಹುದು ಎನ್ನುವ ಸತ್ಯವನ್ನು ತಿಳಿಯಬೇಕು.

ಭಗವಂತ ‘ಧಾತುಃ ಪ್ರಸಾದ’.  ಅಂದರೆ  ಭಗವಂತನನ್ನು ನೋಡಬೇಕೆಂದು ಹಂಬಲಿಸುವುದೊಂದೇ ನಮ್ಮ ಕೆಲಸ, ಆದರೆ ಅವನ ದರ್ಶನವಾಗಬೇಕಾದರೆ ನಮ್ಮೊಳಗಿದ್ದು ನಮ್ಮನ್ನು ಧಾರಣೆ ಮಾಡಿರುವ ಅವನು ಅನುಗ್ರಹಿಸಬೇಕು. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:  ‘ನಾಯಮಾತ್ಮಾ ಪ್ರವಚನೇನ ಲಭ್ಯಃ ನ ಮೇಧಯಾ ನ ಬಹುನಾ ಶ್ರುತೇನ ಯಮೇವೈಷ ವೃಣುತೇ ತೇನ ಲಭ್ಯಃ’ ಜಗದ್ದಾರಕನಾದ ಭಗವಂತನ ಅನುಗ್ರಹದಿಂದಲೇ ನಮಗೆ ಅವನ ದರ್ಶನವಾಗಬೇಕೇ ವಿನಃ ನಮ್ಮ ಪಾಂಡಿತ್ಯ ಅಥವಾ ಸಾಧನೆಯ ಒತ್ತಡದಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ‘ಭಗವಂತನ ಮಹಿಮೆ ಅನಂತ. ಅವನು ಸರ್ವವ್ಯಾಪಿ. ಅವನನ್ನು ಕಾಣಲು ಅವನ ಅನುಗ್ರಹಬೇಕು’ ಎನ್ನುವುದನ್ನು ಶ್ವೇತಾಶ್ವತರ ಮುನಿ ಒತ್ತಿ ಹೇಳಿರುವುದನ್ನು ನಾವಿಲ್ಲಿ ಕಾಣುತ್ತೇವೆ.