ಭಾನುವಾರ, ಮಾರ್ಚ್ 20, 2022

ಭಾವಾನುವಾದ- ಅಧ್ಯಾಯ ೦೫

 

ಭಾವಾನುವಾದ- ಅಧ್ಯಾಯ ೦೫

̐

ಬಾಲಾಗ್ರಶತಭಾಗಸ್ಯ ಶತಧಾ ಕಲ್ಪಿತಸ್ಯ ಚ

ಭಾಗೋ ಜೀವಃ ಸ ವಿಜ್ಞೇಯಃ ಸ ಚಾನನ್ತ್ಯಾಯಕಲ್ಪತೇ ೦೫.೦೯

 

ಜೀವ ಅಣು ಎನ್ನುತ್ತದೆ ಬ್ರಹ್ಮಸೂತ್ರ [ಓಂ ಅಣವಶ್ಚ ಓಂ(೨.೪.೮), ಓಂ ಅಣುಶ್ಚ ಓಂ(೨.೪.೧೪)]. ಸರ್ವವ್ಯಾಪಿಯಾಗಿರುವ ವಸ್ತು ಅಣುವೂ ಆಗಬಲ್ಲದು, ಆದರೆ ಅಣುವೇ ಆಗಿರುವ ವಸ್ತು ಸರ್ವವ್ಯಾಪ್ತ ಆಗಲು ಸಾಧ್ಯವಿಲ್ಲ. ಸರ್ವಗತನಾದ ಭಗವಂತ ಅತ್ಯಂತ ಸೂಕ್ಷ್ಮದ ಒಳಗೂ ಇರಬೇಕಲ್ಲವೇ? ಅದನ್ನೇ ಈ ಶ್ಲೋಕ ವಿವರಿಸುತ್ತದೆ.  ಯದಧೀನಾಯಸ್ಯ ಸತ್ತಾತತ್ತದಿತ್ಯೇವ ಭಣ್ಯತೇ’ ಎನ್ನುವ ನ್ಯಾಯದಿಂದ ನೋಡಿದಾಗ, ಒಂದು ವಸ್ತುವಿನ ಒಳಗೆ ಯಾರಿದ್ದಾನೋ ಅವನಿಗೇ ಆ ಹೆಸರು. [‘ಯತ್ರಯತ್ರ ಸ್ಥಿತೋ ವಿಷ್ಣುಃ ತತ್ರನಾಮ ವಿದ್ಯತೇ’ ] ಹೀಗಾಗಿ ಮೇಲಿನ ಶ್ಲೋಕದಲ್ಲಿ ಜೀವಃ[1] ಎಂದರೆ ಜೀವನೊಳಗೆ ಅಂತರ್ಯಾಮಿಯಾಗಿರುವ ಭಗವಂತ. ಅವನ ಗಾತ್ರ ಜೀವನಿಗಿಂತ ಚಿಕ್ಕದು. ಆದರೆ ಈ ಹಿಂದೆ(೩.೨೦) ಹೇಳಿದಂತೆ ‘ಅಣೋರಣೀಯಾನ್ ಮಹತೋ ಮಹೀಯಾನಾತ್ಮಾ ಗುಹಾಯಾಂ ನಿಹಿತೋಽಸ್ಯ ಜನ್ತೋಃ’  ಅಣುವಿನ ಒಳಗೆ ಅಣುವಾಗಿರುವ ಭಗವಂತನೇ ಇಡೀ ವಿಶ್ವದಲ್ಲಿ ತುಂಬಿದ್ದಾನೆ.

 ಇಲ್ಲಿ ಜೀವನ ಅಂತರ್ಯಾಮಿಯಾಗಿರುವ ಭಗವಂತನ ಗಾತ್ರವನ್ನು ವಿವರಿಸುತ್ತಾ ಶ್ವೇತಾಶ್ವತರ ಮುನಿ ಹೇಳುತ್ತಾನೆ: ‘ಒಂದು ಕುದುರೆಯ ಬಾಲದ ಎಳೆಯನ್ನು ನೂರು ಸೀಳನ್ನಾಗಿ ಮಾಡಿ, ಅದರಲ್ಲಿ ಒಂದು ಸೀಳನ್ನು ಮತ್ತೆ ನೂರು ಸೀಳನ್ನಾಗಿ ಮಾಡಿದರೆ(ಹತ್ತುಸಾವಿರದ ಒಂದು ಭಾಗ) ಆ ಸೀಳಾದ ಭಾಗ ಎಷ್ಟು ಸೂಕ್ಷ್ಮ ಇರಬಹುದೋ, ಅಷ್ಟು ಸೂಕ್ಷ್ಮನಾಗಿ  ಜಗತ್ತಿನಲ್ಲಿ ತುಂಬಿರುವ ಭಗವಂತನೇ ಜೀವನಲ್ಲಿ ತುಂಬಿದ್ದಾನೆ’ ಎಂದು.

 

ನೈವ ಸ್ತ್ರೀ ನ ಪುಮಾನೇಷ ನ ಚೈವಾಯಂ ನಪುಂಸಕಃ

ಯದ್ಯಚ್ಛರೀರಮಾದತ್ತೇ ತೇನೇತೇನೇ ಸ ಯುಜ್ಯತೇ ೦೫.೧೦

 

ಭಗವಂತ ತನ್ನ ಅವತಾರಗಳಲ್ಲಿ ಪುರುಷರೂಪದಿಂದ ಕಾಣಿಸಿಕೊಳ್ಳುತ್ತಾನೆ. ಮೋಹಿನಿ, ಗಾಯತ್ರೀ, ಇತ್ಯಾದಿ ಭಗವಂತನ  ಸ್ತ್ರೀರೂಪ.  ಹಯಗ್ರೀವ ರೂಪದಲ್ಲೂ ಸ್ತ್ರೀ-ಹಯಗ್ರೀವ ರೂಪವಿದೆ. ದೇವೀಸ್ತೋತ್ರಗಳಲ್ಲಿ ಕೇವಲ ಸ್ತ್ರೀಲಿಂಗದ ಬಳಕೆಯಿದ್ದರೆ, ಪುರುಷ ದೇವತೆಗಳ ಸ್ತೋತ್ರದಲ್ಲಿ ಕೇವಲ ಪುಲ್ಲಿಂಗ ಬಳಕೆಯನ್ನು ನಾವು ಕಾಣುತ್ತೇವೆ. ಆದರೆ ವಿಷ್ಣುಸಹಸ್ರನಾಮ ನಪುಂಸಕ[2] ಲಿಂಗದಿಂದ ಪ್ರಾರಂಭವಾಗುತ್ತದೆ(ವಿಶ್ವಮ್). ನಂತರ ಪುಲ್ಲಿಂಗ(ವಿಷ್ಣುಃ) ಕಾಣಸಿಗುತ್ತದೆ. ಅಷ್ಟೇ ಅಲ್ಲದೆ ಸ್ತ್ರೀಲಿಂಗದ ನಾಮವೂ ಅಲ್ಲಿದೆ(ನಿಷ್ಠಾ). ಹಾಗಿದ್ದರೆ ದೇವರು ಯಾವ ಲಿಂಗ?  ಇದು ಒಬ್ಬ ಸಾಮಾನ್ಯ ಮನುಷ್ಯನಿಗೂ ಬರುವ ಪ್ರಶ್ನೆ. ಈ ಪ್ರಶ್ನೆಗೆ ಶ್ವೇತಾಶ್ವತರ ಮುನಿ ಉತ್ತರಿಸಿರುವುದನ್ನು ಮೇಲಿನ ಶ್ಲೋಕದಲ್ಲಿ ಕಾಣುತ್ತೇವೆ.

ಭಗವಂತ[3] ಹೆಣ್ಣು   ಅಲ್ಲ, ಅವನು ಗಂಡು ಅಲ್ಲ. ಹಾಗಿದ್ದರೆ ನಪುಂಸಕನೋ ಎಂದರೆ- ಅದೂ ಅಲ್ಲ. ಏಕೆಂದರೆ ಭಗವಂತ ಕೇವಲ ಹೆಣ್ಣಲ್ಲ ಆದರೆ ಹೆಣ್ಣೂ ಹೌದು. ಅವನು ಕೇವಲ ಗಂಡಲ್ಲ, ಆದರೆ ಗಂಡೂ ಹೌದು. ಆದ್ದರಿಂದ ಅವನು ನಪುಂಸಕನಲ್ಲ. ಸ್ತ್ರೀಯರಲ್ಲಿ ಸ್ತ್ರೀರೂಪದಲ್ಲಿ, ಪುರುಷರಲ್ಲಿ ಪುರುಷರೂಪದಲ್ಲಿ  ವ್ಯಕ್ತನಾಗುವ ಭಗವಂತ ಎರಡೂ ಹೌದು. ನಾವು ತಿಳಿದ ಪಂಚಭೌತಿಕ ಪರಿಕಲ್ಪನೆಯ ಲಿಂಗ ಅವನದಲ್ಲ. ಯಾವ ಲಿಂಗದ ದೋಷವೂ ಇಲ್ಲದ ಅವನು ಹೆಣ್ಣಿನಲ್ಲಿ ಹೆಣ್ಣಾಗಿ, ಗಂಡಿನಲ್ಲಿ ಗಂಡಾಗಿ ತುಂಬಿದ್ದಾನೆ. ಹೀಗಾಗಿ ಭಗವಂತ ಸರ್ವಲಿಂಗ ಆದರೆ ಲಿಂಗಾತೀತ.

ಭಗವಂತನ ವಿಶೇಷ್ಯ ಶಬ್ದ ಯಾವ ಲಿಂಗವೋ ಅದರ ವಿಶೇಷಣವೂ ಅದೇ ಲಿಂಗದಲ್ಲಿ ಬರುತ್ತದೆ. ಉದಾಹರಣೆಗೆ ಭಗವಂತನನ್ನು ಪರಬ್ರಹ್ಮ ಎಂದಾಗ ಅದು ನಪುಂಸಕ ಲಿಂಗ, ಪರದೇವತಾ ಎಂದಾಗ ಸ್ತ್ರೀಲಿಂಗ, ಪರಮಾತ್ಮ ಎಂದಾಗ ಪುಲ್ಲಿಂಗ. ಹೀಗೆ ಭಗವಂತನ ವಾಚಕವಾದ ವಿಶೇಷ್ಯವನ್ನು ಯಾವ ಲಿಂಗದಲ್ಲಿ ಬಳಸುತ್ತೇವೋ ಅದಕ್ಕೆ ತಕ್ಕಂತೆ ಅವನ ವಿಶೇಷಣವಾಗಿ ಬರುವ ನಾಮಗಳೂ ಅದೇ ಲಿಂಗದಲ್ಲಿರುತ್ತವೆ. ಹೀಗೆ ಭಗವಂತ ಯಾವ ಲಿಂಗವೂ ಅಲ್ಲ ಆದರೆ ಅವನು ಎಲ್ಲಾ ಲಿಂಗವೂ ಹೌದು. ಅವನು ಎಲ್ಲದರ ಒಳಗಿರುವ ಶಕ್ತಿ. 

 

******************

 

 

 

 




[1] ಸಂಸ್ಕೃತ ಭಾಷೆ ಅನೇಕ ಅರ್ಥಗಳಲ್ಲಿ ತೆರೆದುಕೊಳ್ಳುವ ಭಾಷೆ. ಅಲ್ಲಿ ಒಂದೇ ಪದಕ್ಕೆ ಅನೇಕ ಅರ್ಥಗಳನ್ನು ಕಾಣಲು ಸಾಧ್ಯ. ಹೀಗಾಗಿ ಬೇರೆಬೇರೆ ಮತದವರು ಒಂದೇ ಮಂತ್ರವನ್ನು ಬೇರೆಬೇರೆ ಅರ್ಥದಲ್ಲಿ ಕಾಣುವಂತಾಗುತ್ತದೆ. ಈ ಮಂತ್ರದಲ್ಲಿ ಬಂದಿರುವ ಜೀವಃ ಪದಕ್ಕೆ ಆಚಾರ್ಯ ಶಂಕರರು ‘ಜೀವಭಾವ ಹೊಂದಿದ ಭಗವಂತ’ ಎನ್ನುವ  ವಿವರಣೆ ನೀಡುತ್ತಾ,  ‘ಸರ್ವವ್ಯಾಪ್ತನಾಗಿರುವ ಭಗವಂತನ ಔಪಾಧಿಕವಾದ ಭಾಗವೇ ಜೀವಃ’ ಎನ್ನುತ್ತಾರೆ. ಉದಾಹರಣೆಗೆ ಎಲ್ಲಾ ಕಡೆ ತುಂಬಿರುವ ಆಕಾಶ ಒಂದು ಕೋಣೆಯಲ್ಲೂ ತುಂಬಿದೆ. ಅಲ್ಲಿರುವ ಗೋಡೆಗಳನ್ನೆಲ್ಲವನ್ನೂ ತೆಗೆದಾಗ, ಕೋಣೆಯಲ್ಲಿರುವ ಆಕಾಶವೇ ಅನಂತ ಆಕಾಶವಾಗುತ್ತದೆ. ಹೀಗಾಗಿ ಅನಂತನಾದ ಆತ್ಮನಿಗೆ ಮೂಲತಃ ಗಾತ್ರವಿಲ್ಲ, ಆದರೆ ಅವನಿಗೆ ಔಪಾಧಿಕವಾದ ಗಾತ್ರ ಬರುತ್ತದೆ ಎನ್ನುವುದು ಅವರ ವಿವರಣೆ. ಇನ್ನು ರಾಮಾನುಜ ಪರಂಪರೆಯವರು ಜೀವನೇ  ಅನಂತ ಎನ್ನುವ ಮಾತನ್ನು ಒಪ್ಪುವುದಿಲ್ಲ. ‘ಜೀವ ಒಂದು ಅಣು, ಭಗವಂತ ಅನಂತ. ಇವು ಎರಡೂ ಒಂದೇ ಆಗಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಹೇಳಿರುವುದು ಜೀವದ ಗಾತ್ರವನ್ನೇ ಹೊರತು ಭಗವಂತನನ್ನಲ್ಲ. ಇಂತಹ ಜೀವ ದೇಹಬಂಧನದಿಂದ ಕಳಚಿಕೊಂಡಾಗ ಭೌದ್ಧಿಕವಾಗಿ ವಿಶ್ವವನ್ನು ವ್ಯಾಪಿಸಬಲ್ಲ’ ಎನ್ನುವ ವಿವರಣೆಯನ್ನು ಅವರು ನೀಡುತ್ತಾರೆ. ಮಾಧ್ವ ಪರಂಪರೆಯವರ ಪ್ರಕಾರ ಇಲ್ಲಿ ಜೀವಃ ಎಂದರೆ ಅಣುವಾಗಿರುವ ಜೀವದ  ಅಂತರ್ಯಾಮಿ ಪರಮಾತ್ಮ ಮತ್ತು ಈ ಮಂತ್ರ ಹಿಂದೆ ಹೇಳಿದ ಅಣೋರಣೀಯಾನ್ ಮಹತೋ ಮಹೀಯಾನಾತ್ಮಾ...ಎನ್ನುವ ಶ್ಲೋಕದ ವಿವರಣೆಯನ್ನು ನೀಡುವ ಮಂತ್ರ.          

[2] ನಪುಂಸಕ ಎನ್ನುವುದು ಒಂದು ಲಿಂಗವಲ್ಲ. ಯಾವ ಶರೀರದಲ್ಲಿ ಸ್ತ್ರೀತ್ವವಾಗಲೀ  ಅಥವಾ ಪುರುಷತ್ವವಾಗಲೀ  ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗಲಿಲ್ಲವೋ ಅದು ನಪುಂಸಕ.

[3] ಶಂಕರ ಹಾಗೂ ಮಾಧ್ವ ಪರಂಪರೆಯವರು ಈ ಶ್ಲೋಕವನ್ನು ಭಗವಂತನ ಪರವಾಗಿ ನೋಡಿದರೆ, ರಾಮಾನುಜ ಪರಂಪರೆಯವರು ಈ ಮಂತ್ರವನ್ನು ‘ಜೀವದ’ ಪರವಾಗಿ ನೋಡುತ್ತಾರೆ. ಮೂಲತಃ ಜೀವಸ್ವರೂಪಕ್ಕೆ ಲಿಂಗವಿಲ್ಲ, ಲಿಂಗ ಎನ್ನುವುದು ಶರೀರದ ಆಕಾರದಿಂದ ಬರುವಂತಹದ್ದು, ಸ್ತ್ರೀತ್ವಕ್ಕೆ ವ್ಯಂಜಕವಾಗಿರುವ ಶರೀರವಿದ್ದರೆ ಅದು ಹೆಣ್ಣು, ಪುರುಷತ್ವಕ್ಕೆ ವ್ಯಂಜಕವಾಗಿರುವ ಶರೀರವಿದ್ದರೆ ಅದು ಗಂಡು ಎನ್ನುವುದು ರಾಮಾನುಜ ಪರಂಪರೆಯವರ ವಿವರಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ