ಭಾನುವಾರ, ಮಾರ್ಚ್ 20, 2022

ಭಾವಾನುವಾದ- ಅಧ್ಯಾಯ ೦೪

 

ಭಾವಾನುವಾದ- ಅಧ್ಯಾಯ ೦೪

̐

ಅಜಾಮೇಕಾಂ ಲೋಹಿತಶುಕ್ಲಕೃಷ್ಣಾಂ ಬಹ್ವೀಃ ಪ್ರಜಾಃ ಸೃಜಮಾನಾಂ ಸರೂಪಾಃ

ಅಜೋ ಹ್ಯೇಕೋ ಜುಷಮಾಣೋಽನುಶೇತೇ ಜಹಾತ್ಯೇನಾಂ ಭುಕ್ತಭೋಗಾಮಜೋಽನ್ಯಃ ೦೪.೦೫

 

‘ಒಂದು  ಹೆಣ್ಣು ಆಡು, ಅದಕ್ಕೆ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣ. ಅದು ನಿರಂತರವಾಗಿ ಮರಿ ಹಾಕುತ್ತಿದೆ. ಮರಿಗಳಿಗೂ ಕೂಡಾ ಮೂರು ಬಣ್ಣಗಳು. ಇನ್ನೊಂದು ಗಂಡು ಆಡು, ಅದು ಈ ಹೆಣ್ಣಾಡಿನ ಹಿಂದೆಯೇ ಹೋಗುತ್ತಿದೆ ಮತ್ತು ಅದನ್ನು ನಿರಂತರ ಪ್ರೀತಿಸುತ್ತಿದೆ. ಮತ್ತೊಂದು ಗಂಡಾಡಿದೆ, ಅದು ಇದೆಲ್ಲದರಿಂದ ದೂರವಿದೆ’  ಇದು ಈ ಮಂತ್ರದ ಯಥಾವತ್ತಾಗಿ ಕನ್ನಡ ಅನುವಾದ. ಈ ಅರ್ಥವನ್ನು ನೋಡಿದಾಗಲೇ ನಮಗೆ ಇಲ್ಲಿ ಉಪನಿಷತ್ಕಾರರು ಹೇಳುತ್ತಿರುವುದು ಆಡಿನ ಕಥೆಯನ್ನಲ್ಲ ಎನ್ನುವುದು ತಿಳಿಯುತ್ತದೆ.  ಹೌದು, ಇಲ್ಲಿ ‘ಅಜ’ ಎಂದರೆ ‘ಹುಟ್ಟದ್ದು’ ಎಂದರ್ಥ. ‘ಲೋಹಿತಶುಕ್ಲಕೃಷ್ಣಾಂ’ ಎನ್ನುವ ಮೂರು ಬಣ್ಣಗಳು ಸತ್ವ-ರಜಸ್ಸು-ತಮಸ್ಸುಗಳೆಂಬ ತ್ರಿಗುಣಗಳು.   ಎಂದೆಂದೂ ಹುಟ್ಟದ ತ್ರಿಗುಣಾತ್ಮಕವಾದ ಪ್ರಕೃತಿಯೇ ಈ ಹೆಣ್ಣಾಡು. ಈ ಪ್ರಕೃತಿ ತ್ರೈಗುಣ್ಯದಿಂದ ತುಂಬಿರತಕ್ಕ ಈ ಪ್ರಪಂಚದ ಸಂತಾನವನ್ನು ಸೃಷ್ಟಿ ಮಾಡುತ್ತಿದೆ.

ಇನ್ನು ಸಾಧಕರ ಎರಡು ವರ್ಗಗಳಿವೆ. ಪ್ರವೃತ್ತಿ ಮಾರ್ಗದಲ್ಲಿರುವ ಒಂದು ವರ್ಗ ಹಾಗೂ ನಿವೃತ್ತಿ ಮಾರ್ಗದಲ್ಲಿರುವ ಇನ್ನೊಂದು ವರ್ಗ. ಒಂದು ವರ್ಗ ಈ ಮುದಿ ಆಡಿನ ಬೆನ್ನು ಹತ್ತಿದರೆ, ಇನ್ನೊಂದು ವರ್ಗ ಪ್ರಕೃತಿ ಅತೀತನಾದ ಅಪ್ರಾಕೃತನಾದ ಭಗವಂತನ ಕಡೆಗೆ ತಿರುಗಿದ ವರ್ಗ.

ನಾವು ಈ ಆಡನ್ನು ಪಕ್ಕಕ್ಕೆ ಸರಿಸಿ ಆಚೆಗೆ ಹೋಗಬೇಕು. ಆಡಿನ ಜೊತೆಗೆ ಆಡುವುದನ್ನು ಬಿಟ್ಟು, ಹುಟ್ಟಿಲ್ಲದ ‘ಅಜಃ’ನ ಕಡೆಗೆ ತಿರುಗು. ಹೀಗೆ ಹುಟ್ಟಿಲ್ಲದ ಭಗವಂತನ ಕಡೆಗೆ ತಿರುಗುವುದರಿಂದ ನೀನೂ ಕೂಡಾ ಹುಟ್ಟು-ಸಾವುಗಳನ್ನು ದಾಟಬಹುದು ಎನ್ನುವ ಸಂದೇಶವನ್ನು ಶ್ವೇತಾಶ್ವತರ ಮುನಿ ಈ ಮಂತ್ರದಮೂಲಕ ನೀಡಿದ್ದಾನೆ.

[ಋಗ್ವೇದದಲ್ಲಿ(೧-೧೬೪-೨೦) ಬಂದಿರುವ, ಮುಂಡಕ ಉಪನಿಷತ್ತಿನಲ್ಲಿ(೩.೧-೧,೨) ಕಾಣಸಿಗುವ, ಒಗಟಿನ ರೂಪದಲ್ಲಿರುವ, ಬಹಳ ಪ್ರಸಿದ್ಧವಾದ ಎರಡು ಶ್ಲೋಕಗಳನ್ನು ಶ್ವೇತಾಶ್ವತರ ಮುನಿ ಈ ಅಧ್ಯಾಯದ ಮುಂದಿನ ಭಾಗದಲ್ಲಿ ಉಲ್ಲೇಖಿಸುವುದನ್ನು ನಾವಿಲ್ಲಿ ಕಾಣುತ್ತೇವೆ: ]   

 

 

ದ್ವಾ ಸುಪರ್ಣ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ

ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ ೦೪.೦೬

 

 ‘ಸ್ನೇಹಿತರಾಗಿ ಸದಾ ಜೊತೆಯಲ್ಲಿರುವ ಎರಡು ಹಕ್ಕಿಗಳು ಒಂದೇ ಮರದ ಪೊಟರೆಯಲ್ಲಿ ನೆಲೆಸಿವೆ. ಒಂದು ಹಕ್ಕಿ ಮರದ ಹಣ್ಣನ್ನು ಸವಿದು-ಸವಿದು ತಿನ್ನುತ್ತಿದೆ, ಇನ್ನೊಂದು ಏನನ್ನೂ ತಿನ್ನದೇ, ಆನಂದವಾಗಿ, ಪ್ರಕಾಶಮಾನವಾಗಿದೆ’. ಇದು ಈ ಮಂತ್ರವನ್ನು ತದ್ವತ್ತಾಗಿ ಅನುವಾದ ಮಾಡಿದಾಗ ನಮಗೆ  ಕಾಣುವ ಅರ್ಥ.  ಈ ಮಂತ್ರ ಸಾಂಕೇತಿಕ ಅರ್ಥವನ್ನು ಹೇಳುತ್ತಿದೆ ಎನ್ನುವುದು ಈ ಮಂತ್ರದ ಧ್ವನಿಯಿಂದಲೇ[1] ನಮಗೆ ತಿಳಿಯುತ್ತದೆ. ಕೇವಲ ಧ್ವನಿಯಷ್ಟೇ ಅಲ್ಲ, ಆ ಧ್ವನಿಗೆ ಬೇಕಾದ ನಿರ್ವಚನವನ್ನೂ ಕೂಡಾ ಶಬ್ದಗಳಲ್ಲಿ ತುಂಬಿರುವುದನ್ನು ನಾವಿಲ್ಲಿ ಕಾಣಬಹುದು.

ಇಲ್ಲಿ ‘ವೃಕ್ಷ’ ಎನ್ನುವ ಪದ ಬಳಕೆಯಾಗಿದೆ. ವೃಕ್ಷ= ವೃಶ್ಚು-ಛೇಧನೆ. ಅಂದರೆ ಒಂದು ದಿನ ಕಡಿದು ಉರುಳಿಸುವಂಥದ್ದು ಅಥವಾ ನಾಶವಾಗಿ ಹೋಗುವಂಥದ್ದು.  ಹೀಗಾಗಿ ವೃಕ್ಷ ಎಂದರೆ ಮರವೂ ಹೌದು, ಒಂದು ದಿನ ಬಿದ್ದು ಹೋಗುವ ದೇಹವೂ(ಪಿಂಡಾಂಡವೂ) ಹೌದು. ಕಠೋಪನಿಷತ್ತಿನಲ್ಲಿ [‘ಏಷೋಽಶ್ವತ್ಥಃ ಸನಾತನಃ’ (೩.೧)] ಹಾಗೂ ಗೀತೆಯಲ್ಲಿ [‘ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ (೧೫.೧)’] ಎಂದು ಪಿಂಡಾಂಡ ಹಾಗೂ ಬ್ರಹ್ಮಾಂಡ ಎನ್ನುವ ಅರ್ಥದಲ್ಲಿ ‘ಅಶ್ವತ್ಥ’ ಪದ ಬಳಕೆಯಾಗಿರುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿ ವೃಕ್ಷ ಎನ್ನುವ ಪದವನ್ನು  ಕೇವಲ  ಪಿಂಡಾಂಡ(ದೇಹ) ಎನ್ನುವ ಅರ್ಥದಲ್ಲಿ ಬಳಸಲಾಗಿದೆ.

ದೇಹ ಎನ್ನುವ ವೃಕ್ಷದಲ್ಲಿ ಎರಡು ಸುಪರ್ಣಗಳಿವೆ ಎನ್ನುವ ಮಾತನ್ನು ಇಲ್ಲಿ ಹೇಳಲಾಗಿದೆ. ‘ಸುಪರ್ಣಾ  ಪದದ ನಿರ್ವಚನವನ್ನು ನೋಡಿದರೆ : ೧.  ದುಃಖದ ಸ್ಪರ್ಶವೇ ಇಲ್ಲದ ಪೂರ್ಣವಾದ ಆನಂದವುಳ್ಳದ್ದು ಸುಪರ್ಣಾ. ಅಂದರೆ ಪರಮಾತ್ಮ. ೨.  ಸರ್ವೋತ್ತಮವಾದ ಶಕ್ತಿಯಿಂದ ಯಾರು ಆನಂದವನ್ನು ಪಡೆಯುತ್ತಾನೋ ಅವನೂ ಸುಪರ್ಣಾ. ಅಂದರೆ ಜೀವಾತ್ಮ. ಹೀಗೆ ಇಲ್ಲಿ ಸುಪರ್ಣಾ ಎನ್ನುವ ಪದ ಜೀವಾತ್ಮ ಹಾಗೂ ಪರಮಾತ್ಮನನ್ನು ಹೇಳುವ ವಿಶಿಷ್ಟ ಪದವಾಗಿದೆ.

ಸಂಸ್ಕೃತ ಭಾಷೆಯಲ್ಲಿ ಏಕವಚನ ಮತ್ತು ಬಹುವಚನದ ಜೊತೆಗೆ ದ್ವಿವಚನ ಬಳಕೆಯಲ್ಲಿದೆ. ಉದಾಹರಣೆಗೆ ‘ಸುಪರ್ಣೌ’ ಎಂದರೆ ಎರಡು ಹಕ್ಕಿಗಳು ಎಂದರ್ಥ. ಹೀಗಾಗಿ ಸಾಮಾನ್ಯವಾಗಿ ಇಲ್ಲಿ ‘ದ್ವಿ’ ಶಬ್ದದ ಬಳಕೆಯ ಉದ್ದೇಶ ಏನು ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಪ್ರಾಚೀನರು ‘ದ್ವಿ’ ಎನ್ನುವ ಪದಕ್ಕೆ ವಿಶೇಷ ಅರ್ಥವನ್ನು ಹೇಳಿರುವುದನ್ನು ನಾವು ಕಾಣುತ್ತೇವೆ. ‘ದ್ವಿ-ಶಬ್ದಃ ದ್ವಿತ್ವ ಸಂಖ್ಯಾಂ ಭೇದೇಚಾಪಿ ಪ್ರಯುಚ್ಯತೇ’ ಎಂದು ಕೋಶಕಾರನೊಬ್ಬ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ‘ದ್ವಾ ಸುಪರ್ಣಾ’ ಎಂದರೆ  ಎರಡು ಭಿನ್ನ ಸ್ವಭಾವದ ಹಕ್ಕಿಗಳು. ಒಂದು ಹಕ್ಕಿ ತಿನ್ನುತ್ತಿದೆ, ಆದರೂ ದುಃಖವನ್ನು ಅನುಭವಿಸುತ್ತಿದೆ. ಆದರೆ ಇನ್ನೊಂದು ಏನನ್ನೂ ತಿನ್ನುತ್ತಿಲ್ಲ, ಆದರೆ ಆನಂದವಾಗಿದೆ. ಇವನು ಅಜ್ಞಾನಿ-ಅವನು ಜ್ಞಾನಿ, ಇವನು ಪರತಂತ್ರ-ಅವನು ಸ್ವತಂತ್ರ, ಇತ್ಯಾದಿ  ವೈಲಕ್ಷಣವನ್ನು ‘ದ್ವಿ’ ಶಬ್ದ ಸೂಚಿಸುತ್ತದೆ.

ದ್ವಾ ಸುಪರ್ಣಾ ಸಯುಜಾ ಸಖಾಯಾ’ - ಎರಡು ಭಿನ್ನ ಸ್ವಭಾವದ ಹಕ್ಕಿಗಳು ಆದರೆ ಅವೆರಡೂ ಅಚ್ಚುಮೆಚ್ಚಿನ ಗೆಳೆಯರು! ಭಾಗವತದಲ್ಲಿ ಈ ಕುರಿತು ಒಂದು ವಿನೋದದ ಮಾತಿದೆ: ‘ತಸ್ಯಾವಿಜ್ಞಾತನಾಮಾಸೀತ್ಸಖಾವಿಜ್ಞಾತಚೇಷ್ಟಿತಃ’ (೦೪.೨೫.೧೦). ‘ದೇಹದಲ್ಲಿ ಜೀವನಿಗೆ ಒಬ್ಬ ಆತ್ಮೀಯ ಗೆಳೆಯನಿದ್ದಾನೆ. ಆದರೆ ಆ ಗೆಳೆಯನ ಹೆಸರಾಗಲೀ, ಅವನು ಏನು ಮಾಡುತ್ತಿದ್ದಾನೆ ಎನ್ನುವ ಜ್ಞಾನವಾಗಲೀ ಜೀವನಿಗಿಲ್ಲ’. ಅಪರಿಚಿತನಾದರೂ, ಸದಾ ಜೀವನ ಹಿತವನ್ನು ಬಯಸುವ ಆತ್ಮೀಯ ಸಖ,  ದೇಹದ ಹೃದಯ ಗುಹೆಯಲ್ಲಿ ಜೀವನ ಜೊತೆಗೇ ನೆಲೆಸಿದ್ದಾನೆ. ಯಾವ ರೀತಿ ಕೋಣೆಯಲ್ಲಿರಿಸಿದ ಪುಟ್ಟ ದೀಪಶಿಖೆ ಇಡೀ ಕೋಣೆಯನ್ನು ಬೆಳಗಿಸುವುದೋ ಹಾಗೇ, ಹೃದಯಗುಹೆಯಲ್ಲಿ ಪರಮಾತ್ಮನೊಂದಿಗಿರುವ ಜೀವಜ್ಯೋತಿ ಇಡೀ ಶರೀರವನ್ನು ಬೆಳಗಿಸುತ್ತದೆ. ಇದನ್ನೇ ನಾರಾಯಣಸೂಕ್ತದಲ್ಲಿ ‘ನೀಲತೋಯದಮಧ್ಯಸ್ಥದ್ವಿದ್ಯುಲ್ಲೇಖೇವ ಭಾಸ್ವರಾ ........... ತಸ್ಯಾಃ ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ’ ಎಂದು ವರ್ಣಿಸಿದ್ದಾರೆ.

‘ಒಂದು ಹಕ್ಕಿ ರುಚಿ ಇಲ್ಲದ ಅಶ್ವತ್ಥದ ಹಣ್ಣನ್ನು(ಪಿಪ್ಪಲಂ) ರುಚಿ ಎನ್ನುವ ಭ್ರಮೆಯಲ್ಲಿ ತಿನ್ನುತ್ತಿದೆ’ ಎಂದಿದ್ದಾನೆ ಶ್ವೇತಾಶ್ವತರ ಮುನಿ. ಇಲ್ಲಿ ಕರ್ಮಫಲವನ್ನು   ‘ಅಶ್ವತ್ಥದ ಹಣ್ಣಿಗೆ ಹೋಲಿಸಿ ವಿವರಿಸಿರುವುದನ್ನು ಕಾಣುತ್ತೇವೆ. ನಾವು ನೀರಸವಾದ ಕರ್ಮಫಲವನ್ನು ಮೀರಿ ಬದುಕುವುದನ್ನು ಕಲಿಯಬೇಕು ಎನ್ನುವ ಸಂದೇಶ ಈ ಮಾತಿನ ಹಿಂದಿದೆ. ಶ್ರೀಕೃಷ್ಣ ಗೀತೆಯಲ್ಲಿ ಇದೇ ಮಾತನ್ನು ‘ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ’ (೨-೪೭) ಎಂದು ವಿವರಿಸಿರುವುದನ್ನು ನಾವು ಕಾಣುತ್ತೇವೆ. ಜೀವ ಕರ್ಮಫಲವೇ ಅತ್ಯಂತ ರುಚಿ, ಅದಕ್ಕಿಂತ ಸವಿಯಾದ ಹಣ್ಣು ಬೇರೊಂದಿಲ್ಲ ಎಂದು ಅದನ್ನೇ ತಿನ್ನುತ್ತಾ, ಮತ್ತೆ ಹಸಿದು, ಪುನಃ ತಿನ್ನುತ್ತಾ, ಒಂದು ದಿನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆದರೆ ಭಗವಂತ ಕರ್ಮಾತೀತ. ಅವನು ಕರ್ಮಗಳಿಗೆ ಸ್ವಾಮಿಯಾಗಿ, ಕರ್ಮದ ಲೇಪವೇ ಇಲ್ಲದೆ  ನಮ್ಮೊಳಗಿದ್ದಾನೆ. ಜೀವದ ನಡೆಗೆ ಏನೇನು ಆಗಬೇಕೋ ಅದಕ್ಕೆ ಸಾಕ್ಷಿಯಾಗಿ ಅವನಿದ್ದಾನೆ. ಅವನು ಯಾವ ಕರ್ಮಫಲವನ್ನೂ ಕೂಡಾ ಅಂಟಿಸಿಕೊಂಡಿಲ್ಲ. ಹೀಗೆ ಈ ಶ್ಲೋಕ ದೇಹದಲ್ಲಿ ಜೀವ ಮತ್ತು ಪರಮಾತ್ಮನ ಅಸ್ತಿತ್ವವನ್ನು ಒಗಟಿನ ರೂಪದಲ್ಲಿ ನಮ್ಮ ಮುಂದಿಡುತ್ತದೆ. ಒಗಟನ್ನು ಬಿಡಿಸಿದಾಗ ನಮ್ಮ ಬದುಕಿನಲ್ಲಿ ನಾವು ಪಡುವ ಪಾಡು, ಅದಕ್ಕೆ ಸಾಕ್ಷಿಯಾಗಿ ಒಳಗೆ ನಿಂತಿರುವ ಭಗವಂತನ ಅಸ್ತಿತ್ವ, ಇದರ ರೋಚಕವಾದ ಚಿತ್ರ ಈ ಮಂತ್ರದಲ್ಲಿ ಕಾಣಸಿಗುತ್ತದೆ. ಈ ಅಂಶವನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕ ವಿವರಿಸುತ್ತದೆ.

ಸಮಾನೇ ವೃಕ್ಷೇ ಪುರುಷೋ ನಿಮಗ್ನೋಽನೀಶಯಾ ಶೋಚತಿ ಮುಹ್ಯಮಾನಃ

ಜುಷ್ಟಂ ಯದಾ ಪಶ್ಯತ್ಯನ್ಯಮೀಶಮಸ್ಯ ಮಹಿಮಾನಮಿತಿ ವೀತಶೋಕಃ ೦೪.೦೭

 

ಇಬ್ಬರೂ ಇರುವುದು ಒಂದೇ ವೃಕ್ಷದಲ್ಲಿ. ಆದರೆ ಒಬ್ಬ(ಜೀವಾತ್ಮ) ದೇಹದಿಂದ ಸಿಗುವ ಸುಖವೇ ಸುಖ, ಅದರಿಂದಾಚೆಗೆ ಏನೂ ಇಲ್ಲಾ ಎಂದು ಆ ಮರದಲ್ಲೇ ಮುಳುಗಿಬಿಟ್ಟಿದ್ದಾನೆ. ಇನ್ನೊಬ್ಬ(ಪರಮಾತ್ಮ) ಮರದಿಂದ ನಿರ್ಲಿಪ್ತನಾಗಿ ಮರದಲ್ಲೇ ನಿಂತಿದ್ದಾನೆ. [ಹಿಂದಿನ ಶ್ಲೋಕದಲ್ಲಿ ಸುಪರ್ಣಾ ಎಂದು ಹೇಳಿದರೆ, ಅದನ್ನೇ ಇಲ್ಲಿ ಪುರುಷ(ಪುರದಲ್ಲಿ ಇರುವವನು) ಎಂದು ಹೇಳಿರುವುದನ್ನು ಓದುಗರು ಗಮನಿಸಬೇಕು]. ಜೀವಾತ್ಮ ಮೊದಲು ಮೋಹಕ್ಕೊಳಗಾಗಿ, ಅದರಿಂದಾಗಿ ಶೋಕಕ್ಕೊಳಗಾಗುತ್ತಾನೆ. ದುಃಖಕ್ಕೆ ಮೂಲ ಕಾರಣ ನಾನು-ನನ್ನದು ಎನ್ನುವ ಅಭಿಮಾನ. ಯಾವಾಗ ನಾವು ಈ ಅಭಿಮಾನದಿಂದ ಕಳಚಿಕೊಳ್ಳುತ್ತೇವೋ, ಆಗ ದುಃಖದಿಂದ ಬಿಡುಗಡೆಯನ್ನು ಹೊಂದುತ್ತೇವೆ.

ಪ್ರತಿಯೊಬ್ಬರೂ ಜೀವನದಲ್ಲಿ ಪ್ರಯತ್ನಪಡುವುದು ದುಃಖದಿಂದ ಪಾರಾಗಲು. ಇಲ್ಲಿ ಹೇಳಿರುವಂತೆ ನಾನು-ನನ್ನದು ಎನ್ನುವ ಅಭಿಮಾನ ತೊರೆದರೆ ದುಃಖದಿಂದ ಪಾರಾಗಬಹುದು. ಹಾಗಿದ್ದರೆ ಅಭಿಮಾನ ತ್ಯಾಗ ಮಾಡಬಹುದಲ್ಲಾ ಎಂದರೆ, ಇಲ್ಲಿ ಹೇಳುತ್ತಾರೆ –ಆ ತಾಕತ್ತು ನಿನಗಿಲ್ಲಾ(ಅನೀಶಯಾ) ಎಂದು! ಏಕೆಂದರೆ ಜೀವ ಪ್ರಕೃತಿ ಬಂಧದಲ್ಲಿ ಬದುಕುತ್ತಿದ್ದು, ಅದನ್ನು ಮೀರುವ ಶಕ್ತಿ ಜೀವನಿಗಿಲ್ಲ. ಆದರೆ ಈ ಪ್ರಕೃತಿ ಭಗವಂತನ ಅಧೀನ. ಅಂತಹ ಭಗವಂತನನ್ನು ಗಾಢವಾಗಿ ಪ್ರೀತಿಸಿದಾಗ ಅವನು ದರ್ಶನ ನೀಡುತ್ತಾನೆ. ಭಗವಂತ ದರ್ಶನ ಕೊಟ್ಟಾಗ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ಮೋಹ-ದುಃಖದಿಂದ ಪಾರಾಗಲು ಇರುವ ಏಕಮಾತ್ರ ಪರಿಹಾರ ಭಗವದ್ ಭಕ್ತಿ. ಭಗವಂತನ ಹಿರಿಮೆಯನ್ನು ತಿಳಿದು, ಅವನನ್ನು ಪ್ರೀತಿಸಿ, ಆರಾಧಿಸಿ ಅವನ ದರ್ಶನ ಪಡೆದಾಗ, ಸಮಸ್ತ ದುಃಖದಿಂದ ಪಾರಾಗಲು ಸಾಧ್ಯ.

[ನಾವೂ ಭಗವಂತನ ಕುರಿತಾಗಿ ತಿಳಿದು ಅವನನ್ನು ಆರಾಧಿಸಿ ದುಃಖದಿಂದ ಪಾರಾಗಬೇಕು.  ಅಂದರೆ ಯಾವ ಮೂಲದಿಂದ ಅವನನ್ನು ಅರಿತುಕೊಳ್ಳಬೇಕು? ಇದು ಈ ಹಂತದಲ್ಲಿ ನಮ್ಮ-ನಿಮ್ಮೆಲ್ಲರ ಪ್ರಶ್ನೆ. ಈ ಪ್ರಶ್ನೆಗೆ ಶ್ವೇತಾಶ್ವತರ ಮುನಿ ಋಗ್ವೇದದ ಮಂತ್ರದ(೧.೧೬೪.೩೯)  ಮುಖೇನ  ಉತ್ತರಿಸುವುದನ್ನು ಮುಂದಿನ ಮಂತ್ರದಲ್ಲಿ ಕಾಣಬಹುದು ]

 

ಋಚೋ ಅಕ್ಷರೇ ಪರಮೇ ವ್ಯೋಮನ್ ಯಸ್ಮಿನ್ದೇವಾ ಅಧಿ ವಿಶ್ವೇ ನಿಷೇದುಃ

ಯಸ್ತಂ ನ ವೇದ ಕಿಮೃಚಾ ಕರಿಷ್ಯತಿ ಯ ಇತ್ತದ್ವಿದುಸ್ತ ಇಮೇ ಸಮಾಸತೇ ೦೪.೦೮

ಸಮಸ್ತ ವೇದಗಳೂ ಕೂಡಾ ನಮ್ಮ ಹೃದಯಾಕಾಶದಲ್ಲಿ ನೆಲೆಸಿರುವ ಅಕ್ಷರನಾದ ಭಗವಂತನ ಕುರಿತಾಗಿ ಹೇಳುತ್ತವೆ. ಕಠೋಪನಿಷತ್ತಿನಲ್ಲಿ(೧.೨.೧೫) ಹೇಳುವಂತೆ:  ಸರ್ವೇ ವೇದಾ ಯತ್ಪದಮಾಮನಂತಿ  ತಪಾ̐ಸಿ ಸರ್ವಾಣಿ ಯದ್ವದಂತಿ’ - ಸರ್ವ ವೇದಗಳೂ ಅಂತತಃ ಹೇಳುವುದು ಸರ್ವೋತ್ತಮನಾದ ಭಗವಂತನನ್ನಲ್ಲದೇ ಇನ್ನೇನನ್ನೂ ಅಲ್ಲ. ವೇದದಲ್ಲಿ ಬರುವ ಅಗ್ನಿ, ವರುಣ, ಮಿತ್ರ, ವಾಯು, ಇತ್ಯಾದಿ ನಾಮಗಳು ಮೂಲತಃ ಸಮಸ್ತ ದೇವತೆಗಳಿಗೆ ಆಶ್ರಯನಾದ ಭಗವಂತನ ನಾಮಗಳು. ಇದನ್ನು ನಮಗೆ ತಿಳಿಸುವುದಕ್ಕೋಸ್ಕರವೇ ವೇದವ್ಯಾಸರು ಸಹಸ್ರನಾಮ ಗ್ರಂಥ ರಚನೆ ಮಾಡಿದರು. ದೇವರ ಕುರಿತು ಅನ್ವೇಷಣೆಗೆ ಹೊರಟ ಎಲ್ಲಾ ಭಾಷೆಯ, ಎಲ್ಲಾ ಜಾತಿಯ, ಎಲ್ಲಾ ಗ್ರಂಥಗಳೂ ಕೂಡಾ, ಒಬ್ಬನೇ  ಒಬ್ಬ ದೇವರನ್ನು ಹೇಳುತ್ತವೆ. ಇದನ್ನೇ ಹರಿವಂಶದಲ್ಲಿ ಹೀಗೆ ಹೇಳಿದ್ದಾರೆ: ‘ವೇದೇ ರಾಮಾಯಣೇ ಚೈವ ಪುರಾಣೇ ಭಾರತೇ ತಥಾ ಆದಾವಂತೇ ಚ ಮಧೈ ಚ ವಿಷ್ಣುಃ ಸರ್ವತ್ರ ಗೀಯತೆ’. ಎಲ್ಲಾ ಕಥೆಗಳ ಕೊನೆಯ ಗುರಿ ಭಗವಂತನ ಮಹಿಮೆಯನ್ನು ಹೇಳುವುದೇ ಆಗಿದೆ. ‘ವಾಸುದೇವಸ್ಯ ಮಹಿಮಾ ಭಾರತೇ ನಿರ್ಣ್ಣಯೋದಿತಃ (ಹರಿವಂಶ- ಭವಿಷ್ಯತ್ ಪರ್ವ). ಅಳಿವಿರದ ಭಗವಂತನಲ್ಲಿ ಎಲ್ಲಾ ವೇದಗಳೂ ನೆಲೆಸಿವೆ.  

ಹೃದಯ ಗುಹೆಯಲ್ಲಿರುವ ಜೀವಾತ್ಮನ ಅತ್ಯಂತ ಆತ್ಮೀಯ ಮಿತ್ರನಾದ ಭಗವಂತನನ್ನು ಇಲ್ಲಿ ‘ಅಕ್ಷರಃ’ ಎಂದು ಸಂಬೋಧಿಸಿದ್ದಾರೆ. ‘ಅಕ್ಷರ’ ಎನ್ನುವುದು ಒಂದು ವಿಶಿಷ್ಟವಾದ ಪದ. ಈ ಪದವನ್ನು ಯಾವ ರೀತಿ  ಛೇದಿಸಿ ನೋಡಿದರೂ ಕೂಡಾ ಅದು ನೇರವಾಗಿ ಭಗವಂತನನ್ನೇ ಹೇಳುತ್ತದೆ. ಮೂಲಭೂತವಾಗಿ ‘ಅಕ್ಷರ’ ಅಂದರೆ ನಾಶವಿಲ್ಲದ್ದು. ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು, ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಶಾಶ್ವತವಾಗಿ ಧ್ವನಿಮುದ್ರಿತವಾಗಿರುತ್ತದೆ. ‘ಅಷ್ಣುತೇ ಇತಿ ಅಕ್ಷರಮ್’. ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ. 'ಕ್ಷರ' ಎಂದರೆ ನಾಶ; ನಾಶವಿಲ್ಲದ್ದು ಅ-ಕ್ಷರ. 'ಕ್ಷರಣ' ಅಂದರೆ ಸುರಿಸುವವನು, ಯುಗ-ಯುಗಾಂತರದಲ್ಲಿ ನಮ್ಮ ಮೇಲೆ ಕರುಣೆಯ ಮಳೆ ಸುರಿಸುವ ಭಗವಂತ ‘ಅಧಿಕಂ-ಕ್ಷರತಿ’ ಅಕ್ಷರಃ. ಇನ್ನು ಅಕ್ಷ+ರ-ಅಕ್ಷರ. ಇಲ್ಲಿ 'ಅಕ್ಷ' ಎಂದರೆ ಇಂದ್ರಿಯ, '' ಎಂದರೆ ರಮಣ ಅಥವಾ ರಮಿಸುವವನು. ಆದ್ದರಿಂದ ಅಕ್ಷರ ಎಂದರೆ ಆನಂದಮಯನಾಗಿ ಇಂದ್ರಿಯಗಳಲ್ಲಿ ನೆಲೆಸಿರುವವನು ಎಂದರ್ಥ. ಇನ್ನು ಅ+ಕ್ಷ+ರ=ಅಕ್ಷರ.   '' ಎಂದರೆ ಅಲ್ಲ ಅಥವಾ ಇಲ್ಲ. ಭಗವಂತ ಅಲ್ಲ, ಭಗವಂತ ಇಲ್ಲ! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ, ಅವನಲ್ಲಿ ಯಾವುದೇ ದೋಷವಿಲ್ಲ. ಇಂತಹ ಭಗವಂತ ಎಲ್ಲರೊಳಗೆ ನೆಲೆಸಿ(ಕ್ಷ), ಆನಂದಮಯನಾಗಿರುವ(ರ) ಸರ್ವಶಬ್ದವಾಚ್ಯ. ‘ಅ’ ದಿಂದ ‘ಕ್ಷ’ ತನಕ ಇರುವ ಸಮಸ್ತ ವರ್ಣಮಾಲೆ[2] ಅಂತತಃ ಭಗವಂತನನ್ನೇ ಹೇಳುತ್ತವೆ.

ಯಸ್ತಂ ನ ವೇದ ಕಿಮೃಚಾ ಕರಿಷ್ಯತಿ’ ಭಗವಂತನ ಮಹಿಮೆಯನ್ನು ತಿಳಿಸುವುದಕ್ಕಾಗಿಯೇ ವೇದಗಳಿರುವುದು. ಹೀಗಾಗಿ ವೇದವನ್ನು ಓದಿ ಭಗವಂತನ ಅರಿವು ಬಾರದೇ ಇದ್ದರೆ, ವೇದ ಮಂತ್ರದ ಅರಿವು ತಿಳಿಯದೇ ಇದ್ದರೆ ಜೀವನ ವ್ಯರ್ಥ. ವೇದದ ಅರ್ಥವನ್ನು ತಿಳಿದು, ವೇದದಲ್ಲಿ ಅರ್ಥಭೂತನಾಗಿರುವ ಭಗವಂತನ ಅರಿವನ್ನು ಪಡೆದಾಗ ಬದುಕು ಸಾರ್ಥಕ, ಆನಂದಮಯ.

 

ಮಾಯಾಂ ತು ಪ್ರಕೃತಿಂ ವಿದ್ಯಾನ್ಮಾಯಿನಂ ತು ಮಹೇಶ್ವರಮ್

ತಸ್ಯಾವಯವಭೂತೈಸ್ತು ವ್ಯಾಪ್ತಂ ಸರ್ವಮಿದಂ ಜಗತ್ ೦೪.೧೦

 

ಈ ಶ್ಲೋಕದ ಅರ್ಥ ವಿಶ್ಲೇಷಣೆ ಮಾಡುವ ಮೊದಲು ‘ಮಾಯೆ’  ಎನ್ನುವ ಪದದ ಮೂಲಾರ್ಥ ಏನು ಎನ್ನುವುದನ್ನು ತಿಳಿಯಬೇಕಾಗುತ್ತದೆ. ಮಾಯಾ ಎನ್ನುವ ಪದ ಭಗವಂತನ ಪರವಾಗಿ ವೇದದಲ್ಲಿ ವಿಶೇಷವಾಗಿ ಮೂರು ಅರ್ಥಗಳಲ್ಲಿ ಬಳಕೆಯಲ್ಲಿದೆ:

೧. ವೇದವ್ಯಾಸರು ಸ್ಕಾಂದಪುರಾಣದಲ್ಲಿ  ಮಾಯಾ ಪದದ ಅರ್ಥವನ್ನು ಈ ರೀತಿ ವಿವರಿಸುತ್ತಾರೆ: ‘ಮಹಾಮಾಯೇತೆ ಅವಿದ್ಯೇತಿ ನಿಯತಿರ್ ಮೋಹಿನೀತಿ ಚ ಪ್ರಕೃತಿರ್ ವಾಸನಾಯಿತ್ಯೇವಂ ತವೇಚ್ಛಾನಂತ ಕತ್ಯತೇ’ .  ಮಾಯಾ ಅಂದರೆ ‘ಇಚ್ಛೆ’. ಉದಾಹರಣೆಗೆ ನಾವು ‘ಎಲ್ಲವೂ ದೇವರ ಮಾಯೆ’ ಎಂದು ಹೇಳುತ್ತೇವೆ.  ಎಲ್ಲವೂ ನಡೆಯುವುದು ಭಗವಂತನ ಇಚ್ಛೆಯಂತೆ ಎನ್ನುವ ಅರ್ಥದಲ್ಲಿ ಇಲ್ಲಿ ಮಾಯೆ ಪದ ಬಳಕೆಯಾಗಿದೆ. ಇನ್ನು ವೇದದ ಉದಾಹರಣೆಯನ್ನು ನೋಡುವುದಾದರೆ- ‘ಇಂದ್ರೋ ಮಾಯಾಭಿಃ ಪುರುರೂಪ ಈಯತೇ’ (ಋಗ್ವೇದ  ೬.೦೪೭.೧೮)- ಭಗವಂತ ತನ್ನ ಇಚ್ಛೆಯಂತೆ ಅನೇಕ ರೂಪಗಳನ್ನು ಧರಿಸುತ್ತಾನೆ ಎನ್ನುವ ಅರ್ಥದಲ್ಲಿ ಇಲ್ಲಿ ಮಾಯಾ ಪದ ಬಳಕೆಯಾಗಿದೆ.

೨. ವೈದಿಕ ನಿಘಂಟಿನಲ್ಲಿ ‘ಮಾಯಾ ವೈವ್ಣಂ ಜ್ಞಾನಮ್   ಎಂದು ಹೇಳಿದ್ದು, ಇಲ್ಲಿ ಮಾಯಾ ಎಂದರೆ ಜ್ಞಾನ ಎನ್ನುವ ಅರ್ಥದಲ್ಲಿ ಹೇಳಿರುವುದು ಕಾಣಸಿಗುತ್ತದೆ. ನಮಗೆ ತಿಳಿಯಲು ಸಾಧ್ಯವಾಗದ, ಕೇವಲ ಭಗವಂತನ ಅರಿವಿಗೆ ಗೋಚರವಾಗುವ ಸಂಗತಿಯನ್ನು ಮಾಯಾ ಎಂದು ಹೇಳುತ್ತಾರೆ.

೩. ‘ಮಾಯೇತಿ ಮಹಿಮಾ ಪ್ರೋಕ್ತಾ’ ಎನ್ನುವ ಬಳಕೆಯನ್ನು ನಾವು ಪುರಾಣಗಳಲ್ಲಿ ಕಾಣುತ್ತೇವೆ. ಇಲ್ಲಿ ಮಾಯಾ ಎಂದರೆ ಮಹಿಮೆ ಎಂದರ್ಥ.

ಈ ಮೇಲಿನ ಅರ್ಥವಲ್ಲದೇ ಇನ್ನೂ ಎರಡು ಪ್ರಾಚೀನ ಅರ್ಥಗಳನ್ನು ನಾವು ಕಾಣಬಹುದು. ೧. ಮಾಯಾ ಅಂದರೆ ಜಗತ್ತಿನ ಸೃಷ್ಟಿಗೆ ಕಾರಣವಾಗಿರುವ ಮೂಲಶಕ್ತಿ. ಅದು ನಮ್ಮನ್ನು ಅಜ್ಞಾನದಿಂದ ಆವರಿಸಿಬಿಡುತ್ತದೆ.   ಅದನ್ನು ‘ಮೋಹಿನೀಶಕ್ತಿ’ ಎನ್ನುತ್ತಾರೆ. ೨. ಮೋಹಿನೀಶಕ್ತಿಯನ್ನು  ನಿಯಂತ್ರಿಸುವ ತಾಯಿ – ಚಿತ್-ಪ್ರಕೃತಿ. ಅವಳಿಗೂ ಮಾಯಾ ಎಂದು ಹೆಸರು.

ಮೇಲಿನ ಐದು ವೇದಕಾಲದ ಪ್ರಯೋಗವಾದರೆ, ತದನಂತರ ವ್ಯಾಕರಣದವರು ‘ಮಯ’ ಶಬ್ದದಿಂದ ಮಾಯಾ ಶಬ್ದ ಬಂದಿರುವುದು ಎಂದು ವಿವರಿಸುವುದನ್ನು ನಾವು ಕಾಣುತ್ತೇವೆ.  ಮಯಂ ಪ್ರಧಾನ ಉದ್ವಿಷ್ಠಃ’ –ಎಲ್ಲಕ್ಕಿಂತ ಹಿರಿದಾದ ತತ್ತ್ವಕ್ಕೆ ಸಂಬಂಧಪಟ್ಟ ಇಚ್ಛೆ, ಜ್ಞಾನ, ಮಹಿಮೆ, ಇವೆಲ್ಲವೂ ಮಾಯಾ. ಅಷ್ಟೇ ಅಲ್ಲಾ,  ಹಿರಿಯ ತತ್ತ್ವಕ್ಕೆ ಸಂಬಂಧಿಸಿದ ಚಿತ್-ಪ್ರಕೃತಿ ಮತ್ತು ಆ ಚಿತ್-ಪ್ರಕೃತಿ ನಿಯಂತ್ರಿಸುವ ಮೋಹಿನೀ ಶಕ್ತಿಯೂ ಮಾಯಾ ಎಂದು ವ್ಯಾಕರಣಕಾರರು ವಿವರಿಸುತ್ತಾರೆ.

ಕಾಲಾನಂತರದಲ್ಲಿ ಮಯಾಸುರನಿಗೆ ಸಂಬಂಧಿಸಿ ಮತ್ತೊಂದು ಅರ್ಥದಲ್ಲಿ ಮಾಯಾ ಪದದ ಬಳಕೆ ಮಾಡಿರುವುದನ್ನು ನಾವು ಕಾಣುತ್ತೇವೆ. ಮಯ ದೈತ್ಯ-ಶಿಲ್ಪಿ.  ಮಹಾಭಾರತದಲ್ಲಿ ಈತನ ಕುರಿತಾಗಿ ಹೇಳುವುದನ್ನು ನಾವು ಕಾಣಬಹುದು. ಪಾಂಡವರ ಇಂದ್ರಪ್ರಸ್ಥ ಅರಮನೆಯ ರಾಜಸಭೆಯನ್ನು  ಈತನೇ ವಿನ್ಯಾಸ ಮಾಡಿರುವುದು. ನೀರು-ನೆಲವಾಗಿ, ನೆಲ-ನೀರಾಗಿ, ಗೋಡೆ-ಬಾಗಿಲಾಗಿ, ಬಾಗಿಲು- ಗೋಡೆಯಾಗಿ, ಹೀಗೆ ಒಂದು ವಸ್ತು ಇನ್ನೊಂದು ವಸ್ತುವಿನಂತೆ ಭಾಸವಾಗುವ ಶಿಲ್ಪಕಲೆ ಅವನದಾಗಿತ್ತು. ಇದು ಮಯನ ಮಾಯೆ. ನಮ್ಮನ್ನು ಮೋಸಗೊಳಿಸತಕ್ಕ ಚಮತ್ಕಾರ. ಈ ಹಿನ್ನೆಲೆಯಲ್ಲಿ ‘ಕಣ್ಕಟ್ಟು’ ಅಥವಾ ‘ಇಂದ್ರಜಾಲ’ ಎನ್ನುವ ಅರ್ಥದಲ್ಲಿ ಮಾಯಾ ಪದ ಬಳಕೆಗೆ ಬಂತು.

 ಹೀಗೆ ೧. ದೇವರ ಇಚ್ಛೆ, ೨. ದೇವರ ಜ್ಞಾನ, ೩.ದೇವರ ಮಹಿಮೆ, ೪.ದೇವರ ಅಧೀನವಾಗಿರುವ ಚಿತ್-ಪ್ರಕೃತಿ, ೫. ಚಿತ್-ಪ್ರಕೃತಿಯಿಂದ ನಡೆಯುತ್ತಿರುವ ಈ ಜಗತ್ತಿನ ಮೋಹಕ ವ್ಯಾಪಾರ(ಜಗತ್ತಿಗೆ ಆವರಣವಾಗಿರುವ ಮೋಹಿನೀಶಕ್ತಿ), ೬. ಕಣ್ಕಟ್ಟು.  ಈ ಆರು ಅರ್ಥಗಳಲ್ಲಿ ಮಾಯಾ ಶಬ್ದ ಸಂಸ್ಕೃತದಲ್ಲಿ ಬಳಕೆಯಾಗಿದೆ.

‘ಪ್ರಕೃತಿಯೇ ಮಾಯೆ, ಅಂತಹ ಪ್ರಕೃತಿಯ ಒಡೆಯ ಭಗವಂತ’  ಎನ್ನುವುದು ಈ ಮಂತ್ರದ ಪೂರ್ವಾರ್ಧದ ಮೇಲ್ನೋಟದ ಅರ್ಥ.  ಆದರೆ ‘ಪ್ರಕೃತಿರ್ ವಾಸನಾಯಿತ್ಯೇವಂ ತವ ಇಚ್ಛಾ’ –ಭಗವಂತನ ಇಚ್ಛೆಯನ್ನೂ ಕೂಡಾ ‘ಪ್ರಕೃತಿ’ ಎಂದು ಹೇಳುತ್ತಾರೆ ಎನ್ನುವುದು ವೇದವ್ಯಾಸರ ಮಾತು. ಈ ಪ್ರಪಂಚದ ಸೃಷ್ಟಿಗೆ ಮೂಲಕಾರಣ ಭಗವಂತನ ಇಚ್ಛೆ. ಅವನು ಇಚ್ಛಿಸಿದ- ಸೃಷ್ಟಿ ವಿಸ್ತಾರವಾಯಿತು. ಭಗವಂತನ ಇಚ್ಛೆಯೇ ಜ್ಞಾನ, ಭಗವಂತನ ಜ್ಞಾನವೇ ಇಚ್ಛೆ, ಅದೇ ಅವನ ಮಹಿಮೆ.  ಹೀಗಾಗಿ ಮೂಲತಃ ಮಾಯಾ ಮತ್ತು ಪ್ರಕೃತಿ ಎನ್ನುವುದು ಭಗವಂತನ ಮಹಿಮೆಯನ್ನು, ಅವನ ಜ್ಞಾನದ ಗರಿಮೆಯನ್ನೂ ಹೇಳುತ್ತವೆ. ಮಾಯಾ ಎಂದರೆ ಜಗತ್ತಿನ ಮೋಹಕಶಕ್ತಿಯಾಗಿರುವ ತ್ರಿಗುಣಾತ್ಮಕ ಪ್ರಕೃತಿ. ನಾವೆಲ್ಲರೂ ಈ ತ್ರಿಗುಣಾತ್ಮಕವಾದ ಮಾಯೆಗೆ ಒಳಗಾದವರು. ಭಗವಂತ ಮಾಯೆಯ ಒಡೆಯ. ಅವನು ತ್ರಿಗುಣಗಳ ಮೂಲಕ ಜಗತ್ತನ್ನು ಸೃಷ್ಟಿ ಮಾಡುತ್ತಾನೆ, ಆದರೆ ಗುಣಗಳ ಪ್ರಭಾವಕ್ಕೆ ಒಳಗಾಗುವುದಿಲ್ಲ. ಅವನು ಬ್ರಹ್ಮಾದಿ ಸಮಸ್ತ ದೇವತಾ ಶಕ್ತಿಗಳನ್ನೂ ಮೀರಿದ ಪರಶಕ್ತಿ(ಮಹೇಶ್ವರ).

ತಸ್ಯವಯವಭೂತೈಸ್ತು’ ಎನ್ನುವಲ್ಲಿ  ತಸ್ಯ-ಅವಯವಭೂತೈಃ ಎನ್ನುವುದು ಸಹಜವಾದ ಪದಚ್ಛೇದವಾದರೆ,  ತಸ್ಯಾಃ - ಅವಯವಭೂತೈಃ ಎನ್ನುವುದು ಇನ್ನೊಂದು ರೀತಿಯ ಪದಚ್ಛೇದ. ಆದರೆ   ತಸ್ಯಾಃ - ಅವಯವಭೂತೈಃ ಎನ್ನುವುದು  ತಸ್ಯವಯವಭೂತೈಃ’ ಹೇಗಾಗುತ್ತದೆ ಎನ್ನುವುದು ವ್ಯಾಕರಣ ಓದಿದವರಿಗೆ ಸ್ವಲ್ಪ ಗೊಂದಲವನ್ನುಂಟು ಮಾಡುವ ವಿಷಯ. ಇದಕ್ಕೆ ಉತ್ತರ ಸಾರಸ್ವತ ವ್ಯಾಕರಣದಲ್ಲಿದ್ದು, ಇದನ್ನು ಸಂಧಿ-ಗರ್ಭ-ಸಂಧಿ ಎಂದು ಅಲ್ಲಿ ವಿವರಿಸಿದ್ದಾರೆ. ಇಲ್ಲಿ ಮೊದಲು ವಿಸರ್ಗ ಲೋಪವಾಗಿ ತಸ್ಯಾ- ಅವಯವಭೂತೈಃ ಎಂದಾಗಿ,  ನಂತರ ತಸ್ಯವಯವಭೂತೈಃ ಎಂದು ಸಂಧಿಯಾಗುತ್ತದೆ. ಈ ವಿವರಣೆ ಪಾಣಿನಿಯ ವ್ಯಾಕರಣದಲ್ಲಿ ಕಾಣಸಿಗುವುದಿಲ್ಲವಾದರೂ  ಕೂಡಾ, ಇಂಥಹ ಪ್ರಯೋಗ ನಮಗೆ ಅನೇಕ ಕಡೆ ಕಾಣಸಿಗುತ್ತದೆ. ಉದಾಹರಣೆಗೆ ‘ನಮೋಸ್ತು ಅನಂತಾಯ ಸಹಸ್ರಮೂರ್ತಯೇ  ಸಹಸ್ರ ಪಾದೋಕ್ಷಿ ಶಿರೋರು ಬಾಹವೇ...ಇಲ್ಲಿ ಶಿರಃ-ಊರು ಎಂಬಲ್ಲಿ ಮೊದಲು ವಿಸರ್ಗಲೋಪವಾಗಿ  ಶಿರ-ಊರು ಆಗಿ ಮತ್ತೆ ಸಂಧಿಯಾಗಿ ಶಿರೋರು ಎಂದಾಗಿರುವುದು ನಮಗೆ ಕಾಣಸಿಗುತ್ತದೆ.

‘ತಸ್ಯವಯವಭೂತೈ’ – ಪ್ರಕೃತಿಯ ವಿಕಾರಗಳಾಗಿರುವಂತಹ  ಪಂಚಭೂತಗಳಿಂದ  ಇಡೀ ಪ್ರಪಂಚ ನಿರ್ಮಾಣವಾಯಿತು. ತ್ರಿಗುಣಾತ್ಮಕವಾದ ಪ್ರಕೃತಿಯಿಂದ ಮೊದಲು ಮಹತತ್ವ ಸೃಷ್ಟಿಯಾಯಿತು.  ಮಹತತ್ವದಿಂದ ಅಹಂಕಾರತತ್ವದ ಸೃಷ್ಟಿ. ಅಹಂಕಾರತತ್ವದಿಂದ ಪಂಚಭೂತಗಳ ಸೃಷ್ಟಿ. ಪಂಚಭೂತಗಳಿಂದ ಇಡೀ ಪ್ರಪಂಚದ ಸೃಷ್ಟಿ. ಹೀಗೆ ಸೃಷ್ಟಿ ವಿಸ್ತಾರವಾಯಿತು. (ಈ ಕುರಿತಾದ ವಿಸ್ತೃತ ವಿವರಣೆಯನ್ನು ಭಾಗವತದ ಮೂರನೇ ಸ್ಕಂಧದ ಆರನೇ ಅಧ್ಯಾಯದಲ್ಲಿ ಕಾಣಬಹುದು).

ಕೇವಲ ಪ್ರಕೃತಿಯ ಅವಯವಭೂತವಾಗಿರತಕ್ಕಂತಹ ಪಂಚಭೂತಗಳಿಂದಷ್ಟೇ ಈ ಜಗತ್ತು  ತುಂಬಿರುವುದಲ್ಲ, ಭಗವಂತನ ಅವಯವಗಳಿಂದಲೂ ಈ ಜಗತ್ತು ತುಂಬಿದೆ ಎಂದಿದ್ದಾನೆ ಶ್ವೇತಾಶ್ವತರ ಮುನಿ.  ಭಗವಂತನ ವಿಶ್ವರೂಪ ಚಿಂತನೆಯಲ್ಲೂ ಇದೇ ಅನುಸಂಧಾನವನ್ನು  ನಾವು  ಕಾಣುತ್ತೇವೆ. ಅಲ್ಲಿ ಭಗವಂತನ ಅವಯವಗಳ ಚಿಂತನೆ ಮಾಡುತ್ತಾ, ಭೂಮಿಯಲ್ಲಿ ಭಗವಂತನ ಪಾದ, ಆಕಾಶದಲ್ಲಿ ಹೃದಯ, ಸ್ವರ್ಗದಲ್ಲಿ ತಲೆ-ಈ ರೀತಿ ವಿಶ್ವದಲ್ಲಿ ತುಂಬಿರುವ ಭಗವಂತನ ವಿಭೂತಿ ಚಿಂತನೆ ಮಾಡುತ್ತಾರೆ.  ಭಗವಂತನ ಅವಯವಭೂತವಾದ ವ್ಯೂಹರೂಪದ ಚಿಂತನೆಯನ್ನು ಪಂಚರಾತ್ರ ವಿವರಿಸುತ್ತದೆ. ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧ, ಮಧ್ಯದಲ್ಲಿ ನಾರಾಯಣ-ಹೀಗೆ ಭಗವಂತ ತನ್ನ ಈ ಪಂಚರೂಪಗಳಿಂದ ಪ್ರಪಂಚದಲ್ಲಿ ತುಂಬಿದ್ದಾನೆ. ಬೃಹದಾರಣ್ಯಕ ಉಪನಿಷತ್ತಿನಲ್ಲೂ(೫.೫.೩) ಭಗವಂತನ ಅವಯವದ ಚಿಂತನೆಯ ಕುರಿತು ವಿವರಿಸುವುದನ್ನು ನಾವು ಕಾಣುತ್ತೇವೆ : ‘ತಸ್ಯ ಭೂರಿತಿ ಶಿರಃ ಏಕಂ ಶಿರಃ  ಏಕಮೇತದಕ್ಷರಮ್ ಭುವ ಇತಿ ಬಾಹೋ ದೈ ಬಾಹೂ . ದ್ವೇ ಏತೇ ಅಕ್ಷರೇ ಸುವರಿತಿ ಪ್ರತಿಷ್ಠಾ ದ್ವೇಪ್ರತಿಷ್ಠೇ   ದ್ವೇ ಏತೇ ಅಕ್ಷರೇ’. ಒಟ್ಟಿನಲ್ಲಿ ಹೇಳಬೇಕೆಂದರೆ ಇಡೀ ವಿಶ್ವದಲ್ಲಿ ಪಂಚರೂಪದಿಂದ, ಅವಯವಭೂತನಾದ  ಭಗವಂತ ತುಂಬಿರುವುದರಿಂದಲೇ ಈ ವಿಶ್ವಕ್ಕೆ ಪ್ರಪಂಚ ಎನ್ನುವ ಹೆಸರು ಬಂದಿದೆ.

 

ಯೋ ಯೋನಿಂಯೋನಿಮಧಿತಿಷ್ಠತ್ಯೇಕೋ ಯಸ್ಮಿನ್ನಿದಂ ಸ ಚ ವಿ ಚೈತಿ ಸರ್ವಮ್

ತಮೀಶಾನಂ ವರದಂ ದೇವಮೀಡ್ಯಂ ನಿಚಾಯ್ಯೇಮಾಂ ಶಾನ್ತಿಮತ್ಯನ್ತಮೇತಿ ೦೪.೧೧

 

ಭಗವಂತ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವುದನ್ನು ಇನ್ನಷ್ಟೂ ವಿವರವಾಗಿ ಶ್ವೇತಾಶ್ವತರ ಮುನಿ ವಿವರಿಸುತ್ತಾ ಹೇಳುತ್ತಾನೆ: ‘ಪ್ರತಿಯೊಂದು ಸೃಷ್ಟಿಯ ಮೂಲಸ್ಥಾನದಲ್ಲಿ ಭಗವಂತ ತುಂಬಿದ್ದಾನೆ’ ಎಂದು. [ಇಲ್ಲಿ ‘ಯೋನಿಂಯೋನಿಂ’[3] ಎನ್ನುವುದು ದ್ವಿರುಕ್ತಿ. ಇದು ಪ್ರತಿಯೊಂದು ಯೋನಿಯಲ್ಲೂ ಭಗವಂತ ತುಂಬಿದ್ದಾನೆ ಎಂದು ಒತ್ತಿ ಹೇಳುತ್ತದೆ]. ಭಗವಂತ ಸಮಸ್ತ ಜೀವಜಾತಗಳಿಗೂ ಸಾಕ್ಷಾತ್  ಕಾರಣ. ಇದನ್ನೇ ವೇದವ್ಯಾಸರು ‘ಯೋನಿಶ್ಚ ಹಿ ಗೀಯತೇ’ ಎಂದು  ಬ್ರಹ್ಮಸೂತ್ರದಲ್ಲಿ(೧.೪.೨೮) ಹೇಳಿದ್ದಾರೆ. ಜಗತ್ತಿಗೆ ಸಾಕ್ಷಾತ್ ಕಾರಣ ಎಂದು ಯಾವುದಿದೆ,  ಆ ಎಲ್ಲವುದರ ಒಳಗೂ ಭಗವಂತ ತುಂಬಿದ್ದಾನೆ. ಸೃಷ್ಟಿಕಾಲದಲ್ಲಿ ಇಡೀ ಪ್ರಪಂಚ ಅವನಿಂದ ಹೊರಟು, ವಿವಿಧ ಆಕಾರಗಳಿಂದ ವಿಶ್ವದಲ್ಲಿ ತುಂಬುತ್ತದೆ. ಕೊನೆಗೆ ಪ್ರಳಯಕಾಲದಲ್ಲಿ ಎಲ್ಲವೂ ಏಕಾಕಾರವಾಗಿ ಭಗವಂತನ ಉದರವನ್ನು ಸೇರುತ್ತದೆ. ‘ಇಂತಹ ಜಗತ್ತನ್ನು ನಿಯಂತ್ರಿಸುವ ಭಗವಂತನನ್ನು ನಾವು ತಿಳಿಯಬೇಕು’ ಎಂದಿದ್ದಾನೆ ಶ್ವೇತಾಶ್ವತರ ಮುನಿ. ನಾವು ಬೇಡಿದ ಬಯಕೆಯನ್ನು ಈಡೇರಿಸುವ ಶಕ್ತಿ ಇರುವುದು ಈ ಪರತತ್ತ್ವಕ್ಕೆ ಮಾತ್ರ. ಇಂತಹ ಭಗವಂತನನ್ನು ಸ್ತುತಿಸಿ ಮನನಮಾಡಿ ತಿಳಿದರೆ ಆಗ ಮನಸ್ಸಿನ ಗೊಂದಲಗಳೆಲ್ಲಾ ದೂರವಾಗಿ ಪರಿಪೂರ್ಣವಾದ ಶಾಂತಿ ದೊರೆಯುತ್ತದೆ. ಶಾಂತಿ ಎಂದರೆ ಜ್ಞಾನಾನಂದದ ಪರಾಕಾಷ್ಠೆಯಾದ ಮೋಕ್ಷ ಕೂಡಾ ಹೌದು. ಅಂತಹ ಆನಂದದ ಸ್ಥಿತಿಯನ್ನು ನಾವು ಪಡೆಯಬಹುದು.

 

ಯೋ ದೇವಾನಾಮಧಿಪೋ ಯಸ್ಮಿ ̐ಲ್ಲೋಕಾ ಅಧಿಶ್ರಿತಾಃ

ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ ೦೪.೧೩

 

ನಮ್ಮನ್ನು ನಿಯಂತ್ರಿಸುವ, ನಮ್ಮ ಇಂದ್ರಿಯಾಭಿಮಾನಿಗಳಾದ ಎಲ್ಲಾ ದೇವತೆಗಳನ್ನೂ ನಿಯಂತ್ರಿಸುವ ಪರದೇವತೆ ಆ ಭಗವಂತ. ಸಮಸ್ತ ಜಗತ್ತೂ ಅವನನ್ನು ಆಶ್ರಯಿಸಿಕೊಂಡಿದೆ. ಇಂತಹ ಭಗವಂತ ಎರಡು ಮತ್ತು ನಾಲ್ಕು ಕಾಲಿನ ಪ್ರಾಣಿಗಳನ್ನು ಸೃಷ್ಟಿಮಾಡಿ ನಿಯಂತ್ರಿಸುವ,  ದುಃಖದ ಸ್ಪರ್ಶವೇ ಇಲ್ಲದ ಆನಂದದ ಕಡಲು.

 

ಯದಾ(ಽ)ತಮಸ್ತನ್ನ  ದಿವಾ ನ ರಾತ್ರಿಃ  ನ ಸನ್ನ ಚಾಸಞ್ಛಿವಚ ಏವ ಕೇವಲಃ

ತದಕ್ಷರಂ ತತ್ ಸವಿತುರ್ವರೇಣ್ಯಂ  ಪ್ರಜ್ಞಾ ಚ ತಸ್ಮಾತ್ ಪ್ರಸೃತಾ ಪುರಾಣೀ ೦೪.೧೮

 

ಭಗವಂತ ಪುರಾತನಃ. ಅವನು ಇತರ ಯಾರ ಅಸ್ತಿತ್ವ ಇಲ್ಲದೇ ಇದ್ದಾಗ ಇದ್ದವನು. ಋಗ್ವೇದದಲ್ಲಿ (೧೦.೧೨೯.೦೩) ಹೇಳುವಂತೆ: ‘ತಮ ಆಸೀತ್ತಮಸಾ ಗೂಳ್ಹಮಗ್ರೇಽಪ್ರಕೇತಂ ಸಲಿಲಂ ಸರ್ವಮಾ ಇದಂ’. ಸೃಷ್ಟಿಗೆ ಮೊದಲು ಪ್ರಪಂಚದಲ್ಲಿ ಏನೂ ಇರಲಿಲ್ಲ. ಬರೀ ಕತ್ತಲು ತುಂಬಿತ್ತು. ಅದು ರಾತ್ರಿಯೂ ಅಲ್ಲ, ಹಗಲೂ ಅಲ್ಲ. ಏಕೆಂದರೆ ಹಗಲು-ರಾತ್ರಿ ಎನ್ನುವ ವಿಭಾಗವೇ ಆಗ ಇರಲಿಲ್ಲ. ಕಣ್ಣಿಗೆ ಕಾಣುವ ಆಕಾರವುಳ್ಳದ್ದಾಗಲೇ(ಸತ್), ಕಣ್ಣಿಗೆ ಕಾಣದ ವಸ್ತುವಾಗಲೀ(ಉದಾಹರಣೆಗೆ: ಗಾಳಿ-ಆಕಾಶ[4]) ಆಗ ಇರಲಿಲ್ಲ. ಆದರೆ ಜ್ಞಾನಾನಂದ ಸ್ವರೂಪನಾದ, ಪರಮ ಮಂಗಳನಾದ(ಶಿವಃ) ಭಗವಂತನಿದ್ದ.

ಯಾರು ಗಾಯತ್ರಿಯಿಂದ ಉಪಾಸ್ಯನೋ ಅವನೇ ಪ್ರಳಯಕಾಲದಲ್ಲಿ ಯಾರೂ ಇಲ್ಲದೇ ಇರುವಾಗಲೂ ಇರುವ ಅಕ್ಷರಃ ನಾಮಕ ಭಗವಂತ. ಯಾರು ಸೂರ್ಯ ರಶ್ಮಿಯಲ್ಲಿ ನಿಂತು ನಮಗೆ ಬದುಕನ್ನು ಕೊಡುತ್ತಾನೋ, ಆ ಹೃಷೀಕೇಶ ನಾಮಕ ಭಗವಂತ, ಪ್ರಳಯಕಾಲದಲ್ಲಿ ತಮ್ಮ ಇರವಿನ ಅರಿವೇ ಇಲ್ಲದೇ ನಿದ್ರಾವಸ್ಥೆಯಲ್ಲಿದ್ದ ಸಮಸ್ತ ಜೀವಗಳಿಗೆ, ಸೃಷ್ಟಿಕಾಲದಲ್ಲಿ ಪುರಾತನವಾದ ಪ್ರಜ್ಞೆಯನ್ನು ನೀಡುತ್ತಾನೆ(ಧೀವೃತ್ತಿಗಳನ್ನು ಪ್ರೇರೇಪಿಸುತ್ತಾನೆ).

 

ನೈನಮೂರ್ದ್ಧ್ವಂ ನ ತಿರ್ಯ್ಯಞ್ಚಂ ನ ಮದ್ಧ್ಯೇ ನ ಪರಿಜಗ್ರಭತ್

ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದ್ ಯಶಃ ೦೪.೧೯

 

ಈ ಮಂತ್ರ ಎನನ್ನು ಹೇಳುತ್ತಿದೆ ಎಂದು ತಕ್ಷಣ ತಿಳಿಯಲು ಕಷ್ಟವಿರುವ ನಿಗೂಢ ಮಂತ್ರವಾಗಿದೆ. ‘ವಿದ್ಯಾವಿನಯಸಂಪನ್ನೇ  ಬ್ರಾಹ್ಮಣೇ ಗವಿ ಹಸ್ತಿನಿ । ಶುನಿ ಚೈವ ಶ್ವಪಾಕೇ ಚ ಪಂಡಿತಾಃ  ಸಮದರ್ಶಿನಃ’ ಎನ್ನುವ ಭಗವದ್ಗೀತೆಯ  (೫.೧೮) ಶ್ಲೋಕದೊಂದಿಗೆ ಈ ಮಂತ್ರವನ್ನು ನೋಡಿದರೆ, ಇಲ್ಲಿ ನಮಗೆ ಅರ್ಥ ಛಾಯೆ ಕಾಣಿಸುತ್ತದೆ. ನಿಜವಾದ ಪಂಡಿತ - ವಿದ್ಯಾವಿನಯಸಂಪನ್ನ, ಬ್ರಾಹ್ಮಣವರ್ಣ, ಆಕಳು, ಆನೆ, ನಾಯಿ, ಹೀನ ಮಾನವನಲ್ಲಿ ಕೂಡಾ ಏಕರೂಪನಾದ ಭಗವಂತನನ್ನು ಕಾಣಬಲ್ಲ ಎಂದಿದೆ ಗೀತೆ. ಇಲ್ಲಿಯೂ ಕೂಡಾ ಇದೇ ಮಾತನ್ನು  ಹೇಳುವುದನ್ನು ನಾವು ಕಾಣುತ್ತೇವೆ.  ‘ಜ್ಞಾನದ ಎತ್ತರದಲ್ಲಿರುವ ಒಬ್ಬ ಮಹಾನ್ ಜ್ಞಾನಿ, ಕೆಳಗಿರುವ ತಿರ್ಯ ಪ್ರಾಣಿಗಳು  ಮತ್ತು ಇವೆರಡರ ನಡುವೆ ಇರುವ ಸಾಮಾನ್ಯ ಮಾನವ – ಈ ಎಲ್ಲವುದರಲ್ಲೂ ಭಗವಂತನಿದ್ದಾನೆ. ಈ ಎಲ್ಲವನ್ನೂ ಕೂಡಾ ನಾವು ಕಾಣುತ್ತೇವಾದರೂ, ಅವುಗಳ ಒಳಗಿರುವ ಭಗವಂತನನ್ನು ಮಾತ್ರ ನಾವು ಗ್ರಹಿಸುವುದಿಲ್ಲ. ಭಗವಂತನಿಗೆ ಸದೃಶವಾದ ಯಾವ ವಸ್ತುವೂ ಇಲ್ಲ. ಆದರೆ ಎಲ್ಲವೂ ಭಗವಂತನ ಪ್ರತೀಕ’.

ಸಮಸ್ತ ಜಾವಜಾತಗಳ ಅಂತರ್ಯಾಮಿಯಾಗಿರುವ ಭಗವಂತನನ್ನು ಇಲ್ಲಿ ‘ಮಹದ್ ಯಶಃ’ ಎಂದು ಸಂಬೋಧಿಸಿದ್ದಾರೆ. ಒಬ್ಬನನ್ನು ಹಾಡಿ ಹೊಗಳುವುದನ್ನು ‘ಕೀರ್ತನ’ ಎನ್ನುತ್ತಾರೆ. ಹೀಗೆ ಹಾಡಿದಾಗ ಅವನ ‘ಯಶಸ್ಸು’ ಎಲ್ಲಾ ಕಡೆ ಹಬ್ಬುತ್ತದೆ. ಎಲ್ಲಾ ಶಬ್ದಗಳೂ ಗುಣಗಾನ ಮಾಡುವ ಭಗವಂತ ‘ಮಹದ್ ಯಶಃ’. ಈ ಜಗತ್ತಿನಲ್ಲಿರುವ ಸಮಸ್ತ ಭಾಷೆಯ ಸಮಸ್ತ ಶಬ್ದಗಳು, ಪ್ರಕೃತಿಯ ನಾದ, ಪ್ರಾಣಿ ಪಕ್ಷಿಗಳ ಚಿಲಿಪಿಲಿ, ಹೀಗೆ ಎಲ್ಲವೂ ಈ ಜಗತ್ತನ್ನು ನಿಯಂತ್ರಿಸುವ ಭಗವಂತನನ್ನು ಹೇಳುತ್ತವೆ. ಎಲ್ಲದರ ಒಡೆಯನಾದ ಭಗವಂತನ ಹೆಸರಲ್ಲದ ಯಾವ ಶಬ್ದವೂ ಈ ಪ್ರಪಂಚದಲ್ಲಿಲ್ಲ. ದೋಷವನ್ನು ಹೇಳುವ ಪದಗಳೂ ಕೂಡಾ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನು ಮಾತ್ರ ಹೇಳುತ್ತವೆ. ಉದಾಹರಣೆಗೆ ‘ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ‘ದುಃಖದ ಒಡೆಯ’ ಎನ್ನುವ ಅರ್ಥವನ್ನು ಕೊಡುತ್ತದೆ.  ಹೀಗೆ ಸಮಸ್ತ ಜೀವಜಾತಗಳಲ್ಲಿ ಸಮವಾಗಿರುವ, ಸರ್ವಶಬ್ದವಾಚ್ಯನಾಗಿರುವ ‘ಮಹದ್ ಯಶಃ’ ನನ್ನು ನಾವು  ಚಿಂತಿಸಬೇಕು ಎನ್ನುವ ಅದ್ಭುತ ಚಿಂತನೆಯನ್ನು ಶ್ವೇತಾಶ್ವತರ ಮುನಿ ಈ ಮಂತ್ರದ ಮೂಲಕ ನಮಗೆ ನೀಡಿದ್ದಾನೆ.

 

ನ ಸಂದೃಶೇ ತಿಷ್ಠತಿ ರೂಪಮಸ್ಯ ನ ಚಕ್ಷುಷಾ ಪಶ್ಯತಿ ಕಶ್ಚನೈನಮ್

ಹೃದಾ ಹೃದಿಸ್ಥಂ ಮನಸಾ ಯ ಏನಮೇವಂ ವಿದುರಮೃತಾಸ್ತೇ ಭವನ್ತಿ ೦೪.೨೦

 

ಪ್ರಳಯಕಾಲದಲ್ಲಿ ಭಗವಂತನನ್ನು ಕಾಣಲು ನಮಗೆ ಯಾವುದೇ ಅಸ್ತಿತ್ವವಿರಲಿಲ್ಲ. ಆದರೆ ಸೃಷ್ಟಿಯಾದ ನಂತರ ಅಸ್ತಿತ್ವ ಬಂದು, ಕಾಣುವ ಕಣ್ಣಿದ್ದರೂ ಭಗವಂತ ಕಾಣಿಸುವುದಿಲ್ಲ! ಏಕೆಂದರೆ ಭಗವಂತ ನಮ್ಮ ಬಾಹ್ಯದೃಷ್ಟಿಗೆ ಗೋಚರನಾಗುವವನಲ್ಲ[5]. ನಮ್ಮ ಹೃದಯಗುಹೆಯಲ್ಲಿರುವ ಭಗವಂತನನ್ನು ನಾವು ಭಕ್ತಿಯಿಂದ, ನಮ್ಮ ಸ್ವರೂಪದ ಮನಸ್ಸಿನ ಒಳಗಣ್ಣಿನಿಂದ ಕಾಣಬೇಕು. ಇದನ್ನೇ ಪುರಂದರದಾಸರು ‘ಒಳಗಣ್ಣಿನ ಒಳಗಿಂದ ನೋಡೋ’ ಎಂದು ಹೇಳಿರುವುದು. ಈ ರೀತಿ ಭಗವಂತನನ್ನು ಕಂಡವರು ಮತ್ತೆ ಈ ಸಂಸಾರದ ಜಂಜಡಗಳಿಗೆ ಒಳಗಾಗಾದೇ ಅಮೃತತ್ವವನ್ನು(ಮೋಕ್ಷವನ್ನು) ಪಡೆಯುತ್ತಾರೆ.

 

ಅಜಾತ ಇತ್ಯೇವಂ ಕಶ್ಚಿದ್ಭೀರುಃ ಪ್ರಪದ್ಯತೇ

ರುದ್ರ ಯತ್  ತೇ ದಕ್ಷಿಣಂ ಮುಖಂ ತೇನ ಮಾಂ ಪಾಹಿ ನಿತ್ಯಮ್ ೦೪.೨೧

 

ಬದುಕು ಎಂದರೆ ಭಯದ ಸರಮಾಲೆಗಳು. ಸುಖದ ನಿರೀಕ್ಷೆಯಲ್ಲೇ ದುಃಖಪಡುವ ಈ ಬದುಕಿನ ಬಗ್ಗೆ ಎಲ್ಲರಿಗೂ ಭಯ.  ಯಾವ ಭಯವನ್ನು ಮೀರಿದರೂ ಸಾವಿನ ಭಯ ಇದ್ದೇ ಇರುತ್ತದೆ. ಸಾವಿನ ಭಯದಿಂದ ಪಾರಾಗಬೇಕಾದರೆ ಅಮೃತತ್ವವನ್ನು ಪಡೆಯಬೇಕು. ಹೀಗಾಗಿ, ಹುಟ್ಟು-ಸಾವಿನ ಸುಳಿಯಲ್ಲಿ ಸಿಕ್ಕು ಕಂಗಾಲಾದ ಜೀವ, ಸಂಸಾರದ ಭಯದಿಂದದಾಗಿ,  ಹುಟ್ಟು-ಸಾವಿರದ, ಜಗತ್ತಿನ ಆದಿಜೀವ ಚತುರ್ಮುಖನಿಗೂ ತಂದೆಯಾದ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವ ಪರಿಯನ್ನು ಇಲ್ಲಿ ವಿವರಿಸಿದ್ದಾರೆ: ‘ಭವರೋಗ ಪರಿಹಾರಕನಾದ(ರುದ್ರಃ) ನೀನು ನಮ್ಮ ರೋಗವನ್ನು ಪರಿಹರಿಸಲು ಸಮರ್ಥವಾದ ನಿನ್ನ ಮುಖವನ್ನು ನನ್ನೆಡೆಗೆ ತಿರುಗಿಸು(ನಿನ್ನ ಅರಳುಗಣ್ಣಿನಿಂದ ನನ್ನನ್ನು ನೋಡು). ನನ್ನನ್ನು ಉದ್ಧಾರ ಮಾಡಬಲ್ಲ ನಿನ್ನ ಪಾದದಲ್ಲಿ ನಾನಿದ್ದೇನೆ. ನೀನು ನನಗೆ ಶರಣನಾಗು(ರಕ್ಷಕನಾಗು)[6]. ಈ ಸಂಸಾರದ ರೋಗದಿಂದ ಭೀತನಾದ ನನ್ನನ್ನು ಸಮಸ್ತ ರೋಗದಿಂದ ಪಾರುಮಾಡು’.     

 

ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ

ವೀರಾನ್ ಮಾ ನೋ ರುದ್ರ ಭಾಮಿತೋವಧೀರ್ಹವಿಷ್ಮಂತಃ ಸದಮಿತ್[7] ತ್ವಾ ಹವಾಮಹೇ ೦೪.೨೨

 

ಭಗವದ್ ಶಕ್ತಿಯ ಪ್ರಾರ್ಥನೆ ಈ ಮಂತ್ರದಲ್ಲಿ ಮುಂದುವರಿದಿದೆ. ಈ ಮಂತ್ರದ ಪೂರ್ವಾರ್ಧದ ಮೇಲ್ನೋಟದ ಅರ್ಥ ಹೀಗಿದೆ:  ನನ್ನ ವಂಶವೃಕ್ಷ(ಸಂತತಿ) ನಿರಂತರ ಮುಂದುವರಿಯುವಂತೆ ಮಾಡು. ನನ್ನನ್ನು ಅಲ್ಪಾಯುಷಿಯನ್ನಾಗಿ ಮಾಡಬೇಡ-ನನಗೆ ಆಯುಸ್ಸನ್ನು ಕೊಡು. ಹಸುಗಳುಳ್ಳ, ಕುದುರೆಗಳುಳ್ಳ  ಸಮೃದ್ಧವಾದ ಬದುಕು ನನ್ನದಾಗಲಿ’. ಈ ಅರ್ಥವನ್ನು ನೋಡಿದಾಗ ನಮಗೆ ಗೊಂದಲವಾಗುತ್ತದೆ. ವೇದದ ಅರ್ಥ ಇಷ್ಟೇ ಆಗಿರಲು ಸಾಧ್ಯವಿಲ್ಲ ಎಂದೂ ತಿಳಿಯುತ್ತದೆ. ಹೌದು, ಇಷ್ಟೇ ಈ ಮಂತ್ರದ ಅರ್ಥವಲ್ಲ. ಇದಕ್ಕೊಂದು ಒಳನೋಟವಿದೆ. ಹೊರನೋಟದ ಅರ್ಥವನ್ನು ಹೇಳುತ್ತಾ, ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ, ಅಂತರಂಗದಲ್ಲಿ ಬೇರೆ ಅರ್ಥವನ್ನು ತೋರಿಸುತ್ತದೆ ಈ ಮಂತ್ರ[8]. 

ಮಾ ನಸ್ತೋಕೇ ತನಯೇ’ - ಇಲ್ಲಿ ‘ತನಯ’ ಎಂದರೆ ತನು-ವಿಸ್ತಾರೆ. ಯಾರು ಜ್ಞಾನವನ್ನು ವಿಸ್ತಾರಗೊಳಿಸುತ್ತಾರೋ  ಅಂತಹ ಶಿಷ್ಯವೃಂದ. ‘ಜ್ಞಾನ ವಿಸ್ತಾರ ಮಾಡಬಲ್ಲ ಬ್ರಹ್ಮಚಾರಿಗಳ ವೃಂದವನ್ನು ಶಿಷ್ಯರನ್ನಾಗಿ ಕೊಡು’ ಎನ್ನುವ ಪ್ರಾರ್ಥನೆ ಇದಾಗಿದೆ. ‘ಆ ಮಾ ಯಂತು ಬ್ರಹ್ಮಚಾರಿಣಃ ಸ್ವಾಹಾ’ ಎಂದು ತೈತ್ತಿರೀಯ ಉಪನಿಷತ್ತೂ ಕೂಡಾ ಈ ಮಾತನ್ನೇ ಹೇಳುತ್ತದೆ.

 ಮಾ ನ ಆಯುಷಿ’ – ನಾವು ತಿಳಿಯಬೇಕು, ತಿಳಿದಿದ್ದನ್ನು ಹಂಚಬೇಕು. ಅದಕ್ಕಾಗಿ ನೂರುಕಾಲ ಬದುಕಬೇಕು. ‘ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ’ (ಈಶಾವಾಸ್ಯ-೨). ಜ್ಞಾನವನ್ನು ಪಡೆಯಲು, ಪಡೆದ ಜ್ಞಾನವನ್ನು ಜಗತ್ತಿಗೆ ಕೊಡಲು ಆಯುರಾರೋಗ್ಯ-ಆಯಸ್ಸಿನ ಪ್ರಾರ್ಥನೆ ಇದಾಗಿದೆ.

ಮಾ ನೋ ಗೋಷು’ - ಗೋವು ಎಂದರೆ ವೇದವಿದ್ಯೆ. ಪಶು ಎನ್ನುವ ಪದಕ್ಕೂ ಇದೇ ಅರ್ಥವಿದೆ. (‘ಪಾಂತಿ ಶಂ ಸಾಧನಾಶ್ಚೇತಿ ವೇದಾಃ ಪಶವ ಈರಿತಃ’). ‘ಯಜಮಾನಸ್ಯ ಪಶೂನ್ ಪಾಹಿ’ ಎನ್ನುವ ವೇದದ ಮಾತಿನ ಹಿಂದೆ ಕೂಡಾ ಇದೇ ಅರ್ಥ ಅಡಗಿದೆ. ಇದು ಯಜಮಾನನ ವೈದಿಕ ಪರಂಪರೆ ಉಳಿಯಲಿ ಎನ್ನುವ ಪ್ರಾರ್ಥನೆ. ಹೀಗಾಗಿ ‘ಮಾ ನೋ ಗೋಷು’ ಎಂದರೆ  ‘ವೇದವಿದ್ಯೆ, ವೈದಿಕಸಾಹಿತ್ಯ ನಾಶವಾಗದಂತೆ ರಕ್ಷಿಸು’ ಎನ್ನುವ ಪ್ರಾರ್ಥನೆ.

ಅಶ್ವ’ ಎಂದರೆ  ಅತ್ಯಂತ ವೇಗವಾಗಿ ಯಥಾರ್ಥವನ್ನು ಗ್ರಹಿಸಬಲ್ಲ ಅಂತಃಪ್ರಜ್ಞೆ. ‘ವೈದಿಕ ಸಾಹಿತ್ಯ ಇರಬೇಕು, ಅದನ್ನು ಗ್ರಹಣ ಮಾಡುವ ಅಂತಃಸ್ಪುರಣದ ಜೊತೆಗೆ ಆಯುರಾರೋಗ್ಯ  ನಮ್ಮಲ್ಲಿರಬೇಕು, ಜ್ಞಾನ ಪರಂಪರೆ ಮುಂದುವರಿಯಲು ವಿದ್ಯಾರ್ಥಿವೃಂದ ಬೇಕು’. ಇದು ಈ ಮಂತ್ರದ ಪೂರ್ವಾರ್ಧದಲ್ಲಿರುವ ಪ್ರಾರ್ಥನೆ.

ಮುಂದುವರಿದು ಶ್ವೇತಾಶ್ವತರ ಮುನಿ ಹೇಳುತ್ತಾನೆ: ‘ಹೇ ರುದ್ರ (ನಮ್ಮ ಬವರೋಗವನ್ನು ಪರಿಹರಿಸುವ ಪರದೇವತೆಯೇ),  ನೀನು ನಮ್ಮ ಮೇಲೆ ಕೊಪಿಸಿಕೊಳ್ಳಬೇಡ. ನಿನ್ನ ಕೋಪದಿಂದ  ಶಕ್ತಿಶಾಲಿಯಾಗಿರುವ ಜ್ಞಾನ ಪರಂಪರೆ ಎಂದೂ ನಾಶವಾಗದಿರಲಿ. ಹೊರಗಿನ ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸುತ್ತಾ, ಮಾನಸ ಯಜ್ಞದಲ್ಲಿ ನಿನ್ನ ಗುಣಗಾನ ಮಾಡುತ್ತಾ,  ಜ್ಞಾನಿಗಳ ಸಭೆಯಲ್ಲಿ ನಿನ್ನನ್ನು ಆಹ್ವಾನಿಸುತ್ತಿದ್ದೇನೆ. ಬಾ, ನಮ್ಮೊಳಗೆ ಸನ್ನಿಹಿತನಾಗು. ನಮ್ಮನ್ನು ಉದ್ಧಾರಮಾಡು’.

ಈ ಪ್ರಾರ್ಥನೆಯೊಂದಿಗೆ ನಾಲ್ಕನೇ ಅಧ್ಯಾಯ ಕೊನೆಗೊಳ್ಳುತ್ತದೆ.

 

******************

 

 

 




[1] ಶಬ್ದವನ್ನು ಕೇಳಿದಾಗ ನಮಗೆ ಅರ್ಥ ಹೊಳೆದರೆ ಅದನ್ನು ಧ್ವನಿ ಎನ್ನುತ್ತಾರೆ. ಇಲ್ಲಿ ಶಬ್ದ ನೇರವಾಗಿ ಅರ್ಥವನ್ನು ಹೇಳುವುದಿಲ್ಲವಾದರೂ ಕೂಡಾ, ಅಲ್ಲಿರುವ ಧ್ವನಿಯಿಂದಲೇ ನಮಗೆ ಅರ್ಥ ಹೊಳೆಯುತ್ತದೆ..

[2] ವಿಶ್ವವೆಂದರೆ ಅದು ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚ. ರೂಪಾತ್ಮಕ ಪ್ರಪಂಚದಲ್ಲಿ ಒಟ್ಟು ಇಪ್ಪತ್ತೈದು ತತ್ತ್ವಗಳಿವೆ. ಅವುಗಳೆಂದರೆ: ಪುರುಷ, ಪ್ರಕೃತಿ, ಮಹತ್ತತ್ವ, ಅಹಂಕಾರತತ್ವ, ಮನಸ್ತತ್ವ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ತನ್ಮಾತ್ರೆಗಳು ಮತ್ತು ಪಂಚಭೂತಗಳು.  ಈ ಇಪ್ಪತ್ತೈದು ತತ್ತ್ವಗಳಲ್ಲಿ ಭಗವಂತನ ಇಪ್ಪತ್ತೈದು ರೂಪಗಳಿವೆ. ಇನ್ನು ನಾಮಾತ್ಮಕ ಪ್ರಪಂಚ ಎಂದರೆ ಅದು ಅಕ್ಷರ ಪ್ರಪಂಚ. ಅ-ದಿಂದ ಕ್ಷ-ದ ತನಕ ಇರುವುದು ಒಟ್ಟಿಗೆ ಐವತ್ತೊಂದು ಅಕ್ಷರಗಳು. ಎಲ್ಲಾ ಭಾಷೆಯ ಎಲ್ಲಾ ನಾಮಗಳು, ಎಲ್ಲಾ ಶಬ್ದಗಳೂ ಈ ಐವತ್ತೊಂದು ಅಕ್ಷರಗಳಲ್ಲಿವೆ. ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು. ಅವುಗಳೆಂದರೆ:

೧. ಅಜ, ೨. ಆನಂದ, ೩. ಇಂದ್ರ,  ೪. ಈಶ, ೫. ಉಗ್ರ, ೬. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭. ಟಂಕಿ, ೨೮. ಠಕಲ, ೨೯. ಡರಕ, ೩೦. ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಹರ್ಯಕ್ಷ[ನೃಸಿಂಹ].

[3] ಇಂದು ಮುದ್ರಣಗೊಂಡಿರುವ ಹೆಚ್ಚಿನ ಪುಸ್ತಕಗಳಲ್ಲಿ  ದ್ವಿರುಕ್ತಿಯನ್ನು ಎರಡು ಪದವಾಗಿ ವಿಂಗಡಿಸಿ ಬರೆದಿರುವುದನ್ನು ಕಾಣುತ್ತೇವೆ. ಆದರೆ ಅದು ಸರಿಯಾದ ಕ್ರಮವಲ್ಲ. ದ್ವಿರುಕ್ತಿ ಬಂದಾಗ ಅದನ್ನು ಸಮಷ್ಟಿಯಾಗಿ ಬರೆಯಬೇಕು. ಹಾಗಾಗಿ ಇಲ್ಲಿ  ಯೋನಿಂ ಯೋನಿಂ’ ಎಂದು ಬರೆಯದೇ ‘ಯೋನಿಂಯೋನಿಂ’ ಎಂದು ಸಮಷ್ಟಿಯಾಗಿ ಪ್ರಸ್ತುತಪಡಿಸಿರುವುದನ್ನು ಓದುಗರು ಗಮನಿಸಬೇಕು.

[4] ಇಲ್ಲಿ ಆಕಾಶವೂ ಇರಲಿಲ್ಲ ಅಂದರೆ ಏನರ್ಥ? ಆಕಾಶ ಇಲ್ಲದೇ ಇರಲು ಸಾಧ್ಯವೇ?

ಆಕಾಶ ಅಂದರೆ ಅದರಲ್ಲಿ ಎರಡು ಬಗೆ. ೧. ನಿರಪೇಕ್ಷ ೨. ಸಾಪೇಕ್ಷ.  ನಿರಪೇಕ್ಷವಾದ ಆಕಾಶ (space) ಯಾವಾಗಲೂ ಇರುವಂತಹದ್ದು. ಆದರೆ ಸಾಪೇಕ್ಷ ಆಕಾಶ ಎಂದರೆ ಅದು ಸೃಷ್ಟಿಯ ಆವರಣದ ಒಳಗೆ ವಾತಾವರಣದಲ್ಲಿರುವ, ಕಣ್ಣಿಗೆ ಕಾಣದ ಅತೀತ ನೀಲದಿಂದ(Ultraviolet rays) ತುಂಬಿರುವ ಅಂತರಿಕ್ಷ(ಆಕಾಶೋ ನೀಲಿಮೋ ದೇಹಿಃ). ಇದು ಪ್ರಳಯಕಾಲದಲ್ಲಿ ನಾಶವಾಗುವ ಆಕಾಶ.  

[5] ರಾವಣನಿಗೆ ರಾಮ, ಕಂಸನಿಗೆ ಕೃಷ್ಣ ಹೊರಗಣ್ಣಿಗೆ ಗೋಚರನಾಗಿದ್ದನಲ್ಲ ಎಂದರೆ-  ಅದು ಸಾಕ್ಷಾತ್ಕಾರವಲ್ಲ. ಅವರು ದೇವರು ಎನ್ನುವ ಅರಿವಿನಿಂದ ನೋಡಿಲ್ಲ.

[6] ಶರಣ ಎಂದರೆ ರಕ್ಷಕ. ನಾವು ಭಗವಂತನಿಗೆ ಶರಣನಾಗಲು ಸಾಧ್ಯವಿಲ್ಲ.

[7] ಸದಾಸಿತ್

[8] ಪ್ರಾಚೀನ ಅಧ್ಯಾತ್ಮ ಗ್ರಂಥಗಳನ್ನು ಏಕೆ ಒಗಟಿನ ರೂಪದಲ್ಲಿ ಬರೆದಿದ್ದಾರೆ ಎನ್ನುವ ಪ್ರಶ್ನೆ ಇಲ್ಲಿ ಸಹಜ.  ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ ಪ್ರಾಚೀನ ಶಿಕ್ಷಣ ಪದ್ದತಿಯಲ್ಲಿ ಒಂದೊಂದು ತರಗತಿಗೆ ಒಂದೊಂದು ಪಠ್ಯಪುಸ್ತಕವಿರುತ್ತಿರಲಿಲ್ಲ. ಇಲ್ಲಿ ಪುಸ್ತಕ ಒಂದೇ; ಆದರೆ ಒಂದೇ ಪುಸ್ತಕದಲ್ಲಿ ಅನೇಕ ಹಂತದ ಶಿಕ್ಷಣ ಅಡಗಿದೆ. ಈ ವೇದ ಗ್ರಂಥಗಳು ಎಂದೂ ಅಯೋಗ್ಯರಿಗೆ ದಕ್ಕದು. ಅವು ಕೇವಲ ತನ್ನನ್ನು ಅರಿಯಬಲ್ಲ, ಅರಿತು ಅದರ ಸದುಪಯೋಗ ಮಾಡಬಲ್ಲವನ  ಮುಂದೆ ಮಾತ್ರ ತೆರೆದುಕೊಳ್ಳುತ್ತವೆ. ಯೋಗ್ಯನಾದವನು ಈ ಗ್ರಂಥದ ಆಳಕ್ಕಿಳಿದಷ್ಟೂ ಹೆಚ್ಚು ಹೆಚ್ಚು ವಿಷಯ ತಿಳಿಯುತ್ತಾನೆ. ಒಂದು ಗ್ರಂಥವನ್ನು  ಅರಿಯಲು  ಅನೇಕ ಜನ್ಮಗಳ ಸಾಧನೆ  ಬೇಕು. ಈ ರೀತಿ ಒಂದೇ ವೇದಮಂತ್ರಕ್ಕೆ ಹಂತಹಂತವಾಗಿ ಅನೇಕ ಆಯಾಮದಲ್ಲಿ ಅರ್ಥವನ್ನು ತಿಳಿಯುತ್ತಾ ವಿದ್ಯಾರ್ಥಿ ಎತ್ತರಕ್ಕೇರುತ್ತಾನೆ. ಓದುವ ಪುಸ್ತಕ ಒಂದೇ ಆದರೂ ಕೂಡಾ, ಅಲ್ಲಿ ವಿವಿಧ ಹಂತದಲ್ಲಿ ಎತ್ತರದ ಜ್ಞಾನ ಅಡಗಿರುವುದನ್ನು ತಿಳಿಯುತ್ತಾ ಮುಂದೆ ಸಾಗುವುದು ವೇದಾಂತ ವಿದ್ಯೆಯ ಕ್ರಮ.

1 ಕಾಮೆಂಟ್‌: