ಭಾನುವಾರ, ಏಪ್ರಿಲ್ 25, 2021

ಭೂಮಿಕೆ

 

ಭೂಮಿಕೆ

̐

ಉಪನಿಷತ್ತಿಗೆ ಪ್ರವೇಶಿಸುವ ಮುನ್ನ ಉಪನಿಷತ್ತಿನ ಹಿನ್ನೆಲೆಯನ್ನು ತಿಳಿಯುವುದು ಬಹಳ ಮುಖ್ಯ. ಮೂಲಭೂತವಾಗಿ ಎಲ್ಲಾ ವೇದಗಳಿಗೆ ಮೂಲ ಓಂಕಾರ. ಓಂಕಾರದ ಮೂರು ಅಕ್ಷರಗಳಿಂದ ಓಂ ಭೂಃ । ಓಂ ಭುವಃ । ಓಂ ಸುವಃ ॥ ಎನ್ನುವ ಮೂರು ವ್ಯಾಹೃತಿಗಳು ಸೃಷ್ಟಿಯಾದವು. ಈ ವ್ಯಾಹೃತಿಗಳಿಂದ ಮೂರು ಪಾದದ ಗಾಯತ್ರಿ ಸೃಷ್ಟಿಯಾಯಿತು. ಮುಂದೆ ಮೂರು ಪಾದದ ಗಾಯತ್ರಿಯಿಂದ  ಮೂರು ವರ್ಗದ ಪುರುಷಸೂಕ್ತ ಸೃಷ್ಟಿಯಾಯಿತು. ಇದು ಋಗ್ವೇದದ ಹದಿನಾರು ಮಂತ್ರಗಳಿರುವ ಪುರುಷಸೂಕ್ತ. ಇಲ್ಲಿ ಮೊದಲ ಐದು, ನಂತರದ ಐದು ಹಾಗೂ ಕೊನೇಯ ಆರು ಮಂತ್ರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಹೀಗೆ ಸೃಷ್ಟಿಯಾದ ಪುರುಷಸೂಕ್ತದ ಮೊದಲ ವರ್ಗ ವಿಸ್ತಾರಗೊಂಡು ಋಗ್ವೇದ, ಎರಡನೇ ವರ್ಗ ವಿಸ್ತಾರವಾಗಿ ಯಜುರ್ವೇದ ಹಾಗೂ ಮೂರನೇ ವರ್ಗ ವಿಸ್ತಾರವಾಗಿ ಸಾಮವೇದದ ಜನನವಾಯಿತು. ಮುಂದೆ ಅಥರ್ವ ಮುನಿಯಿಂದ ಋಗ್-ಯಜುಸ್ಸುಗಳ ಮಂತ್ರಗಳನ್ನಾಯ್ದು ಸಂಕಲನಗೊಂಡ ನಾಲ್ಕನೇ ವೇದ ಆವಿರ್ಭಾವವಾಯಿತು. ಇದು ನಮ್ಮ ವೈದಿಕ ವಾಙ್ಮಯ ಬೆಳೆದುಬಂದ ಬಗೆ. ಹೀಗೆ ಓಂಕಾರ ಎನ್ನುವ ಬೀಜದಿಂದ ಮಹಾವೃಕ್ಷವಾಗಿ, ಹೆಮ್ಮರವಾಗಿ ವೈದಿಕ ಸಾಹಿತ್ಯ ಬೆಳೆದಿದೆ.

ಇಪ್ಪತ್ತೆಂಟನೆಯ ದ್ವಾಪರದ ಕೊನೆಯಲ್ಲಿ ಸ್ವಯಂ ಭಗವಂತ ವೇದವನ್ನು ೧೧೩೭ ಸಂಹಿತೆಯಾಗಿ ವಿಭಾಗಮಾಡಿ, ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಮೇಲೆ ಹೇಳಿರುವಂತೆ ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯಸಂಕಲನ-ಋಗ್ವೇದ; ಗದ್ಯಸಂಕಲನ-ಯಜುರ್ವೇದ; ಗಾನಸಂಕಲನ- ಸಾಮವೇದ ಮತ್ತು  ಅಥರ್ವಮುನಿ ಬ್ರಹ್ಮನಿಂದ ಉಪದೇಶ ಪಡೆದು ಕಂಡ ಅಥರ್ವವೇದ.

 ಮೂಲಭೂತವಾಗಿ ವೇದಗಳು ಮೂರೇ. ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಪೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಉಪಶಾಖೆಗಳಾಗಿ(ಸಂಹಿತೆಗಳನ್ನಾಗಿ) ವಿಂಗಡಿಸಿದರು. ಋಗ್ವೇದಕ್ಕೆ  ೨೪ ಉಪಶಾಖೆಗಳು ಆದರೆ ಇವುಗಳಲ್ಲಿ ಇಂದು ಲಭ್ಯವಿರುವುದು ಕೇವಲ ಮೂರು. ಶಾಕಲಸಂಹಿತೆ, ಬಾಷ್ಕಲಸಂಹಿತೆ ಮತ್ತು ಸಂಖ್ಯಾಯನಸಂಹಿತೆ. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆಗಳು. ಒಂದು ಶುಕ್ಲ ಯಜುರ್ವೇದ ಹಾಗೂ ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ ೧೫ ಹಾಗೂ ಕೃಷ್ಣ ಯಜುರ್ವೇದದಲ್ಲಿ ೮೬ ಒಟ್ಟು ೧೦೧ ಉಪಶಾಖೆಗಳಿದ್ದವು. ಇವುಗಳಲ್ಲಿ ಇಂದು ಕೃಷ್ಣಯಜುರ್ವೇದದ ಮೂರು (ತೈತ್ತಿರೀಯಸಂಹಿತೆ, ಕಠಸಂಹಿತೆ ಮತ್ತು ಮೈತ್ರಾಯಣೀಯಸಂಹಿತೆ) ದೊರಕಿದರೆ, ಶುಕ್ಲಯಜುರ್ವೇದದ ಎರಡು(ಕಾಣ್ವಸಂಹಿತೆ ಮತ್ತು ಮಾಧ್ಯಂದಿನಸಂಹಿತೆ) ಪ್ರಚಲಿತವಾಗಿವೆ.  ಸಾಮವೇದದಲ್ಲಿ ೧೦೦೦ ಉಪಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನೀಯ ಹಾಗೂ ಕೌಥಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿವೆ. ಅಥರ್ವವೇದದಲ್ಲಿ ಒಟ್ಟು ೧೨ ಶಾಖೆಗಳಿವೆ. ಇವುಗಳಲ್ಲಿ ಇಂದು ಕೇವಲ ಒಂದು ಮಾತ್ರ ಉಳಿದಿದೆ. ಹೀಗೆ ವೇದವನ್ನು ೧೧೩೭ (೨೪+೧೦೧+೧೦೦೦+೧೨) ಸಂಹಿತೆಗಳಾಗಿ ವಿಂಗಡಿಸಿ, ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ.    

ಎಲ್ಲಾ ವೇದಗಳಿಗೂ ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತು  ಎನ್ನುವ ನಾಲ್ಕು ಮುಖಗಳಿವೆ. ‘ಸಂಹಿತೆ’ ಅಂದರೆ ಮೂಲಪಾಠವಾದರೆ(Text),ಬ್ರಾಹ್ಮಣ’ ವೇದದಲ್ಲಿ ಕರ್ಮಭಾಗವನ್ನು ಮತ್ತು ಅದರ ಅನುಷ್ಠಾನದ ಬಗೆಯನ್ನು ವಿವರಿಸುವ ಭಾಗವಾಗಿದೆ. ಸಾಮಾನ್ಯವಾಗಿ ಬ್ರಹ್ಮಚಾರಿಗಳಿಗೆ ‘ಸಂಹಿತೆ’ಯ  ಅಧ್ಯಯನವಾದರೆ, ಮದುವೆಯಾದ ನಂತರ ಗ್ರಹಸ್ಥ ಜೀವನಕ್ಕೆ ಬೇಕಾದ ವಿವರಗಳನ್ನು ಕೊಡತಕ್ಕಂತಹ ವೇದದ ಭಾಗ ‘ಬ್ರಾಹ್ಮಣ’.

ಹಿಂದಿನ ಕಾಲದಲ್ಲಿ ಗ್ರಹಸ್ಥ ಜೀವನದ ನಂತರ, ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಿ ಸುಮಾರು ಐವತ್ತರಿಂದ ಅರವತ್ತರ ವಯಸ್ಸಿನಲ್ಲಿ ಎಲ್ಲವನ್ನೂ ಮಕ್ಕಳ ಸ್ವಾಧೀನಕ್ಕೆ ಬಿಟ್ಟು ಕಾಡಿಗೆ ಹೋಗಿ ವಾಸಮಾಡುತ್ತಿದ್ದರು. ಅದನ್ನೇ ವಾನಪ್ರಸ್ಥ ಎನ್ನುತ್ತಾರೆ. ಸಾಂಸಾರಿಕ ಜೀವನದ ಬಹುಭಾಗವನ್ನು ಕಳಚಿಕೊಂಡು ಕಾಡಿನಲ್ಲಿ ವಾಸವಾಗಿರುವಾಗ ಹೆಚ್ಚು ಉಪಯೋಗಕ್ಕೆ ಬರುವ ವೇದದ ಭಾಗ ‘ಅರಣ್ಯಕ’ವಾದರೆ, ಸಮಗ್ರವನ್ನೂ ತ್ಯಜಿಸಿರುವ ಸಂನ್ಯಾಸಿಗಳಿಗೆ ನಿರಂತರ ಭಗವಂತನ ಚಿಂತನೆ ಮಾಡಲು ಬೇಕಾಗಿರುವ ವೇದದ ಭಾಗವೇ ‘ಉಪನಿಷತ್ತು’. ಒಟ್ಟಿನಲ್ಲಿ ಹೇಳಬೇಕೆಂದರೆ ಸಂಹಿತೆ- ಬ್ರಹ್ಮಚಾರಿಗಳಿಗೆ, ಬ್ರಾಹ್ಮಣ-ಗ್ರಹಸ್ಥರಿಗೆ, ಆರಣ್ಯಕ-ವಾನಪ್ರಸ್ಥರಿಗೆ ಮತ್ತು ಉಪನಿಷತ್ತು-ಸಂನ್ಯಾಸಿಗಳಿಗೆ. ಇದರರ್ಥ ಗ್ರಹಸ್ಥರು ಉಪನಿಷತ್ತನ್ನು ಓದಬಾರದು ಎಂದರ್ಥವಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಆದರೆ ವಿಶೇಷ ಒತ್ತುಕೊಟ್ಟು ಮೇಲಿನ ವಿಭಾಗವಿದೆ ಅಷ್ಟೇ.

ಸಂಹಿತೆಯ ಸಾರ ಬ್ರಾಹ್ಮಣ, ಬ್ರಾಹ್ಮಣದ ಸಾರ ಆರಣ್ಯಕ, ಆರಣ್ಯಕದ ಸಾರ ಉಪನಿಷತ್ತು. ಹೀಗಾಗಿ ಇಡೀ ವೈದಿಕ ಸಾಹಿತ್ಯದ  ತಿರುಳು(essence) ಈ ಉಪನಿಷತ್ತು. ಉಪನಿಷತ್ತು ಎಂದರೆ ಉಪರಿ-ನಿಷಾದಯತಿ. ‘ಉಪ’ ಎನ್ನುವುದಕ್ಕೆ ‘ಹತ್ತಿರ ಎನ್ನುವ ಅರ್ಥವನ್ನು ಹೇಳುತ್ತಾರೆ. ಆದರೆ ಮೂಲಭೂತವಾಗಿ ‘ಉಪರಿ ಎಂದರೆ ಎತ್ತರ. ಈ ಮೂಲಸಂಸ್ಕೃತ ಪದವೇ  ಆಂಗ್ಲಭಾಷೆಯಲ್ಲಿ upper ಆಗಿಯೂ, ಜರ್ಮನ್ ಭಾಷೆಯಲ್ಲಿ uber ಆಗಿಯೂ, ಹಿಂದಿಯಲ್ಲಿ ऊपर ಆಗಿಯೂ ಬಳಕೆಯಲ್ಲಿದೆ. ಹೀಗಾಗಿ ಇಲ್ಲಿ ಉಪನಿಷತ್ ಎಂದರೆ ಮಾನಸಿಕವಾಗಿ ನಮ್ಮನ್ನು ಅಧ್ಯಾತ್ಮ ಚಿಂತನೆಯ ಔನ್ನತ್ಯಕ್ಕೆ ಕೊಂಡೊಯ್ಯುವ ಗ್ರಂಥ ಎಂದರ್ಥ. ನಾವು ಅಧ್ಯಾತ್ಮ ಚಿಂತನೆಯಲ್ಲಿ ಎತ್ತರಕ್ಕೇರಿದಷ್ಟೂ ಭಗವಂತನಿಗೆ ಹತ್ತಿರವಾಗುತ್ತೇವೆ.  ಹೀಗಾಗಿ ‘ಹತ್ತಿರ ಎನ್ನುವ ಅರ್ಥವೂ ಇಲ್ಲಿ ಕೂಡುತ್ತದೆ. ‘ಉಪನಿಷಣ್ಣಂ ಬ್ರಹ್ಮತತ್ವಂ ಅತ್ರೇತ್ಯುಪನಿಷತ್’ ಯಾವುದರಿಂದ ಬ್ರಹ್ಮತತ್ವವನ್ನು ಅರಿಯಬಹುದೋ ಅದು ಉಪನಿಷತ್ ಎನ್ನುವುದು ಇನ್ನೊಂದು ಅರ್ಥ. ಒಟ್ಟಿನಲ್ಲಿ ಯಾವುದು ನಮ್ಮನ್ನು ಬೌದ್ಧಿಕವಾಗಿ ಎತ್ತರಕ್ಕೇರಿಸುವುದೋ ಅದು ಉಪನಿಷತ್ತು.

ಇಂದು ಅನೇಕ ಉಪನಿಷತ್ತುಗಳು ಉಪಲಬ್ಧವಾಗಿವೆ. ಆದರೆ ಎಲ್ಲವೂ ಮೂಲ ಉಪನಿಷತ್ತುಗಳಲ್ಲ. ಮುಖ್ಯವಾಗಿ ನಾಲ್ಕುವೇದಗಳಿಗೆ ಸಂಬಂಧಪಟ್ಟಂತೆ, ಪ್ರಾಚೀನರು ಹತ್ತು ಉಪನಿಷತ್ತುಗಳನ್ನು ಆಯ್ಕೆ ಮಾಡಿದ್ದಾರೆ. ಅದನ್ನು ದಶೋಪನಿಷತ್ತು ಎನ್ನುತ್ತಾರೆ. ಈ ದಶೋಪನಿಷತ್ತುಗಳಿಗೆ ಆಚಾರ್ಯ ಶಂಕರರು ಮತ್ತು ಆಚಾರ್ಯ ಮಧ್ವರು ಭಾಷ್ಯ ಬರೆದಿರುವುದನ್ನು ನಾವು ಕಾಣಬಹುದು. ರಾಮಾನುಜರು ವೇದಾರ್ಥದೀಪ ಎನ್ನುವ ಉಪನಿಷತ್ ಸಾರಸಂಗ್ರಹ ಎನ್ನುವ ಗ್ರಂಥವನ್ನು ನೀಡಿದ್ದಾರೆ. ನಂತರ ರಾಮಾನುಜರ ಪರಂಪರೆಯಲ್ಲಿ ಬಂದ ರಂಗರಾಮಾನುಜರು ಈ ಹತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದಿರುವುದನ್ನು ನಾವು ಕಾಣಬಹುದು. ಹೀಗಾಗಿ ಮತ ಪರಂಪರೆಯಲ್ಲಿ ಹತ್ತು ಉಪನಿಷತ್ತುಗಳ ಭಾಷ್ಯ ಎನ್ನುವುದು ಒಂದು ಅನಿವಾರ್ಯ ಅಂಗವಾಯಿತು.  ಹೀಗೆ ಹಿಂದೆ ಇದ್ದಂತಹ ಅನೇಕ ಉಪನಿಷತ್ತುಗಳಲ್ಲಿ ನಾಲ್ಕು ವೇದಗಳಿಗೆ ಸಂಬಂಧಿಸಿದ ಹತ್ತು ಉಪನಿಷತ್ತುಗಳನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿರುವುದನ್ನು ನಾವು ಕಾಣಬಹುದು.

   ಈ ದಶೋಪನಿಷತ್ತಿನಲ್ಲಿ ಋಗ್ವೇದಕ್ಕೆ ಸಂಬಂಧಪಟ್ಟ ಉಪನಿಷತ್ತು ಐತರೇಯ ಉಪನಿಷತ್ತು. ಸಾಮವೇದಕ್ಕೆ ಸಂಬಂಧಿಸಿದ ಉಪನಿಷತ್ತು ತಲವಕಾರ(ಕೇನ)  ಮತ್ತು   ಛಂದೋಗ ಉಪನಿಷತ್ತು. ಅಥರ್ವವೇದಕ್ಕೆ ಸಂಬಂಧಿಸಿದ ಉಪನಿಷತ್ತು   ಷಟ್ ಪ್ರಶ್ನ,  ಅಥರ್ವ(ಮುಂಡಕ) ಮತ್ತು ಮಾಂಡೂಕೋಪನಿಷತ್ತು. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆಗಳಿವೆ ಮತ್ತು ಅಲ್ಲಿನ ಪ್ರತೀ ಶಾಖೆಯ ಎರಡು ಉಪನಿಷತ್ತುಗಳು ದಶೋಪನಿಷತ್ತಿನಲ್ಲಿ ಸೇರಿದೆ. ಅವುಗಳೆಂದರೆ  ಶುಕ್ಲಯಜುರ್ವೇದದ ಯಾಜ್ಞೀಯ ಮಂತ್ರೋಪನಿಷತ್ತು (ಈಶಾವಾಸ್ಯ ಉಪನಿಷತ್ತು) ಮತ್ತು ಬೃಹದಾರಣ್ಯಕ ಉಪನಿಷತ್ತು ಜೊತೆಗೆ ಕೃಷ್ಣಯಜುರ್ವೇದ ತೈತ್ತಿರೀಯ ಉಪನಿಷತ್ತು  ಮತ್ತು ಕಾಠಕ(ಕಠ) ಉಪನಿಷತ್ತು.

   ತೈತ್ತಿರೀಯ ಉಪನಿಷತ್ತಿನ ಮುಂದಿನ ಭಾಗವೇ ಮಹಾನಾರಾಯಣ ಉಪನಿಷತ್ತು. ಇದನ್ನು ಪ್ರಾಚೀನರು ಪ್ರತ್ಯೇಕವಾಗಿ ಪರಿಗಣಿಸಲಿಲ್ಲ. ಅದು ತೈತ್ತಿರೀಯ ಉಪನಿಷತ್ತಿನಲ್ಲೇ ಸೇರಿ ಹೋಯಿತು. ಇನ್ನು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದ ಇನ್ನೊಂದು ಪರಂಪರೆ  ಶ್ವೇತಾಶ್ವತರ ಪರಂಪರೆ. ಆ ಪರಂಪರೆಯಲ್ಲಿ ಬಂದ ಉಪನಿಷತ್ತು ಈ ಶ್ವೇತಾಶ್ವತರ ಉಪನಿಷತ್ತು. ಇದು ಮೇಲೆ ಹೇಳಿದ ದಶೋಪನಿಷತ್ತುಗಳಲ್ಲಿ ಸೇರಿಲ್ಲವಾದರೂ ಕೂಡಾ, ಬಹಳ ಮಹತ್ವವಾದ ಮತ್ತು ಅತ್ಯಂತ ಪ್ರಸಿದ್ಧ ಉಪನಿಷತ್ತುಗಳಲ್ಲಿ  ಒಂದಾಗಿರುವುದು ವಿಶೇಷ.

   ಈ ಉಪನಿಷತ್ತಿನ ಹೆಸರೇ ವಿಚಿತ್ರವಾಗಿದೆ. ಒಂದು ಕಾಲದಲ್ಲಿ ‘ಶ್ವೇತಾಶ್ವತರರು’ ಎನ್ನುವ ಹೆಸರಿನ ಒಂದು ಋಷಿ ಪರಂಪರೆ ಈ ದೇಶದಲ್ಲಿತ್ತು. ಆ ಶ್ವೇತಾಶ್ವತರರು ಆಚರಣೆಗೆ ತಂದ ಉಪನಿಷತ್ತಿಗೆ ಶ್ವೇತಾಶ್ವತರ ಉಪನಿಷತ್ತು ಎನ್ನುತ್ತಾರೆ.

ಖಚಿತವಾಗಿ ‘ಶ್ವೇತಾಶ್ವತರ’ ಋಷಿಪರಂಪರೆ ಬಗ್ಗೆ ಇಂದು ಯಾವ ಮಾಹಿತಿಯೂ ಲಭ್ಯವಿಲ್ಲದಿದ್ದರೂ  ಕೂಡಾ, ಈ ಉಪನಿಷತ್ತಿನ ಹೆಸರಿನಿಂದಲೇ    ಋಷಿಪರಂಪರೆ ಬಗ್ಗೆ ನಾವು ಕೆಲವು ಮಾಹಿತಿಗಳನ್ನು ಸಂಗ್ರಹಮಾಡಬಹುದು.

   ಭಾರತೀಯ ಭಾಷೆಯ ಹಿಂದೆ ಒಂದು ಸಂಸ್ಕೃತಿಯ ಪರಂಪರೆ ಇರುವುದು ವಿಶೇಷ.  ಹೀಗಾಗಿ ಅಲ್ಲಿ ಬಳಸುವ ಶಬ್ದದ  ಮೂಲಕವೂ ನಾವು ಆ ಪರಂಪರೆಯ ಇತಿಹಾಸವನ್ನು ಗುರುತಿಸಬಹುದು.  ಶ್ವೇತ+ಅಶ್ವತರ=> ಶ್ವೇತಾಶ್ವತರ.  ಇಲ್ಲಿ ‘ಅಶ್ವತರ’ ಎಂದರೆ ಗಂಡು ಕತ್ತೆ ಮತ್ತು ಹೆಣ್ಣುಕುದುರೆಯ ಸಮಾಗಮದಿಂದ ಹುಟ್ಟಿದ ಕುದುರೆ[1].   ಶ್ವೇತಾಶ್ವತರ ಎಂದರೆ ಈ ರೀತಿ ಹುಟ್ಟಿದ ಬಿಳಿಕುದುರೆ. ಈ ರೀತಿ ಕತ್ತೆಯಿಂದ ಕುದುರೆಯಲ್ಲಿ ಜನಿಸಿದ ಕುದುರೆ ನಿಜವಾದ ಕುದುರೆಗಿಂತ ಹೆಚ್ಚು ವೇಗವಾಗಿ ಓಡಬಲ್ಲದಂತೆ. ಆದ್ದರಿಂದ ಕುದುರೆಯ ಮೇಲೆ ಸವಾರಿ ಮಾಡುವ ಅಥವಾ ಕುದುರೆಯ ರಥವನ್ನು ಹೊಂದಿರುವ ಕ್ಷತ್ರಿಯರು ಜಾತಿಕುದುರೆಗಿಂತ ಹೆಚ್ಚಾಗಿ ಅಶ್ವತರವನ್ನು ಬಳಸುತ್ತಿದ್ದರು.  ‘ಅಶ್ವತರೀ ರಥ ಎನ್ನುವ ಪದಪ್ರಯೋಗ ಉಪನಿಷತ್ತಿನಲ್ಲಿ ಬಂದಿರುವುದನ್ನೂ  ನಾವು ಕಾಣಬಹುದು. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ‘ಕ್ಷತ್ರಿಯತ್ವಾಗತೇಶ್ಚೋತ್ತರತ್ರ ಚೈತ್ರರಥೇನ ಲಿಂಗಾತ್’ ಎಂದು ಒಂದು ಸೂತ್ರವನ್ನು ಹೇಳುತ್ತಾರೆ. ಒಬ್ಬ ರಾಜನ ಕುರಿತು ಹೇಳುವಾಗ ‘ಚೈತ್ರರಥದಲ್ಲಿ’ ಓಡಾಡುವವರು ಕ್ಷತ್ರಿಯರು ಎಂದು ಅಲ್ಲಿ ಹೇಳಿರುವುದನ್ನು ನಾವು ಕಾಣುತ್ತೇವೆ. ಚೈತ್ರರಥ ಎಂದರೆ ಅಶ್ವತರವನ್ನು ಕಟ್ಟಿದ ರಥ ಎಂದರ್ಥ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಉಪನಿಷತ್ತನ್ನು ಕಂಡ ಋಷಿಗಳು ಮೂಲತಃ ಕ್ಷತ್ರಿಯರು(ರಾಜರ್ಷಿಗಳು) ಎನ್ನುವುದು ತಿಳಿಯುತ್ತದೆ. ಕ್ಷತ್ರಿಯರು ಹಿಂದೆ ತಮ್ಮ ಅರಸೊತ್ತಿಗೆಯನ್ನು ಬಿಟ್ಟು ಕಾಡಿಗೆ ಹೋಗಿ ತಪಸ್ಸನ್ನಾಚರಿಸುವುದು ಸಾಮಾನ್ಯವಾಗಿತ್ತು. ಅಂತಹ ತಪಸ್ಸು ಮಾಡಿದ ರಾಜರ್ಷಿಗಳು ಕಂಡ ಉಪನಿಷತ್ತು ಈ ಶ್ವೇತಾಶ್ವತರ ಉಪನಿಷತ್ತು.

    ಪ್ರಾಯಃ ಮನುಷ್ಯ ಚಿಂತನೆ ಮಾಡಲು ತೊಡಗಿದಾಗ ಅವನನ್ನು ಕಾಡಿದ ಮೊದಲ ಪ್ರಶ್ನೆಗಳನ್ನೇ ಈ ಉಪನಿಷತ್ತು ಹೇಳುವುದರಿಂದಲೇ    ಉಪನಿಷತ್ತು ಮಹತ್ವದ್ದಾಗಿದೆ. ಉಪನಿಷತ್ತು ಪ್ರಾರಂಭವಾಗುವುದೂ ಕೂಡಾ ಪ್ರಶ್ನೆಯಿಂದಲೇ. ಬನ್ನಿ, ಈ ಹಿನ್ನೆಲೆಯೊಂದಿಗೆ ನಾವು ಶ್ವೇತಾಶ್ವತರ ಉಪನಿಷತ್ತನ್ನು  ಪ್ರವೇಶಿಸೋಣ.




[1] ಕೆಲವರು ಅಶ್ವತರ ಎಂದರೆ ‘ಹೇಸರಗತ್ತೆ’ ಎನ್ನುತ್ತಾರೆ. ಆದರೆ ಅದು ಸರಿಯಲ್ಲ. ಹೇಸರಗತ್ತೆ ಎಂದರೆ ಕತ್ತೆಯ ಮರಿ, ಕುದುರೆಯ ಮರಿ ಅಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ