ಭಾನುವಾರ, ಏಪ್ರಿಲ್ 25, 2021

ಶಾಂತಿಮಂತ್ರ

 

ಶಾಂತಿಮಂತ್ರ

॥ ಓ̐ ॥

ಅಧ್ಯಯನ ಪ್ರಾರಂಭಿಸುವ ಮೊದಲು ದೇವರನ್ನು ಪ್ರಾರ್ಥನೆ ಮಾಡಿ, “ನಿರ್ವಿಘ್ನವಾಗಿ ನಮ್ಮ ಅಧ್ಯಯನ ನಡೆಯಲಿ” ಎಂದು ಪ್ರಾರ್ಥಿಸುವ ಸ್ತೋತ್ರ ಶಾಂತಿಮಂತ್ರ. ಇಲ್ಲಿ  ಜ್ಞಾನಾನಂದವನ್ನು ಕೊಡು ಎನ್ನುವ ಪ್ರಾರ್ಥನೆಯ ಜೊತೆಗೆ, ವಿಶ್ವಶಾಂತಿಯ ಪ್ರಾರ್ಥನೆ ಕೂಡಾ ಇದೆ. ಹೀಗಾಗಿ ಯಾವುದೇ ಒಂದು ಅಧ್ಯಯನ ಮಾಡುವ ಮೊದಲು ಮತ್ತು ಕೊನೆಯಲ್ಲಿ ಶಾಂತಿಮಂತ್ರ ಹೇಳುವ ಕ್ರಮವಿದೆ. ಇದು ಜೀವನದಲ್ಲಿ ಅಶಾಂತಿ ಬರಬಾರದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಂತಿಯನ್ನು ಪ್ರಾರ್ಥಿಸುವ ಮಂತ್ರ ಕೂಡಾ ಹೌದು. ಒಂದೊಂದು ವೇದ ಶಾಖೆಯವರಿಗೂ ಒಂದೊಂದು ಶಾಂತಿ ಮಂತ್ರವಿದೆ. ಇಲ್ಲಿ ಬಂದಿರುವುದು ಕೃಷ್ಣ ಯಜುರ್ವೇದದ ಶಾಂತಿ ಮಂತ್ರ. [ಯಜುರ್ವೇದದ ತೈತ್ತಿರೀಯಶಾಖೆಯವರಿಗೆ ‘ಶಂ ನೋ ಮಿತ್ರಃ ಶಂ ವರುಣಃ...’ ಎನ್ನುವ ಎರಡನೇ  ಶಾಂತಿ ಮಂತ್ರವೂ ಇದೆ]. ಇದು ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.

 

ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯ್ಯಂ ಕರವಾವಹೈ ।

ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ ಓ̐ ಶಾನ್ತಿಃ ಶಾನ್ತಿಃ ಶಾನ್ತಿಃ॥

 

ಈ ಮಂತ್ರದ ಸಂಕ್ಷಿಪ್ತ ಅರ್ಥ ಹೀಗಿದೆ: ‘ಓ ಭಗವಂತ, ನೀನು ಗುರುಶಿಷ್ಯರಾದ ನಮ್ಮನ್ನು  ಜೊತೆಯಲ್ಲಿ ಕಾಪಾಡಿ ಪೋಷಿಸು. ನಮಗೆ ಈ ಅಧ್ಯಯನ ಮಾಡುವ ಸಾಮರ್ಥ್ಯವನ್ನು ಕೊಡು. ಈ ಅಧ್ಯಯನದಿಂದ ನಾವು ತೇಜಸ್ವಿಗಳಾಗುವಂತೆ ಮಾಡು. ನಾವೆಂದೂ ಪರಸ್ಪರ ದ್ವೇಷಮಾಡದೇ ಇರುವಂತೆ ರಕ್ಷಿಸು. ಓಂಕಾರ ವಾಚ್ಯ ಮತ್ತು ಮೋಕ್ಷನಿಯಾಮಕನಾದ ನೀನು ಜ್ಞಾನಾನಂದಗಳ ತುತ್ತತುದಿ’.

ಸಹ ನಾವವತು: ಇಲ್ಲಿ ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. ‘ಓ ಭಗವಂತ,  ನೀನು ನನ್ನ ಗುರುವಿನೊಳಗೆ ಕುಳಿತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿತುಂಬು. ನನ್ನೊಳಗೆ ಕುಳಿತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು’.

ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು. ‘ಓ ಭಗವಂತ,  ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯ ತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಜ್ಞಾನಾರ್ಜನೆಗೆ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು’.

ಸಹ ವೀರ್ಯ್ಯಂ ಕರವಾವಹೈ: ‘ಗುರುಗಳಿಗೆ, ಈ ಅಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು, ನಮ್ಮನ್ನು ಉದ್ಧರಿಸುವಂತೆ ಮಾಡುವ ಸಾಮರ್ಥ್ಯವನ್ನು ಕೊಡು. ನಮ್ಮ ಅಧ್ಯಯನ ಶಕ್ತಿಶಾಲಿಯಾಗಿರಲಿ. ನಮಗೆ ಈ ವಿದ್ಯೆಯನ್ನು ಗ್ರಹಿಸುವ ಮತ್ತು ಗ್ರಹಿಸಿ ಲೋಕಕ್ಕೆ ಉಪಯೋಗವಾಗುವಂತೆ ಬಳಸುವ ಸಾಮರ್ಥ್ಯವನ್ನು ಕೊಡು’.

ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ: ‘ನಮ್ಮಿಬ್ಬರ ಕೂಡುವಿಕೆಯಿಂದ ನಡೆಯುವ ಈ ಶಾಸ್ತ್ರಾಧ್ಯಯನದಿಂದ ಶಾಸ್ತ್ರದ ವರ್ಚಸ್ಸು ನಮ್ಮಲ್ಲಿ ವ್ಯಕ್ತವಾಗಲಿ. ಶಿಷ್ಯ ಪರಂಪರೆಯಿಂದ ಊರ್ಜಿತವಾಗಿ ವಿದ್ಯೆ ಮುಂದುವರಿಯಲು ಬೇಕಾಗಿರುವ ತೇಜಸ್ಸು ನಮ್ಮಲ್ಲಿ ಬರಲಿ. ಗುರುಗಳು ಹೇಳಿದ್ದನ್ನು ನಾನು ನನ್ನ ಮುಂದಿನ ತಲೆಮಾರಿಗೆ ಕೊಡುವ ಶಕ್ತಿ ಕರುಣಿಸು. ಕೊನೇಯ ತನಕ ನಾವು ಒಬ್ಬರನ್ನೊಬ್ಬರು ದ್ವೇಷಿಸದೇ, ಗೌರವ ಮತ್ತು ಪ್ರೀತಿಯಿಂದಿರುವಂತೆ ಮಾಡು. ನಾವು ಎಂದೆಂದೂ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಪ್ರೀತಿಸುತ್ತಾ  ಬದುಕುವಂತೆ ಮಾಡು’.

ಓ̐ ಶಾನ್ತಿಃ ಶಾನ್ತಿಃ ಶಾನ್ತಿಃ :   ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓ̐ ಶಾನ್ತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ.  ಮೂರು ವೇದಗಳಲ್ಲಿ ಪ್ರತಿಪಾದ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾ ಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. ‘ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡಾ ಶಾಂತಿಯನ್ನು ಕೊಡು’ ಎನ್ನುವ ಪ್ರಾರ್ಥನೆ ಇಲ್ಲಿದೆ.

‘ನಮಗೆ ಜ್ಞಾನಾನಂದದ ಪೂರ್ಣತೆಯನ್ನು ಕೊಡು; ನಮಗೆ  ಆ ಮೋಕ್ಷದ ಸ್ಥಿತಿಯನ್ನು ಕೊಡು; ಸದಾ ನಿನ್ನೊಂದಿಗಿರುವ ಜ್ಞಾನಾನಂದದ ಅನುಭವವನ್ನು ಕೊಡು; ಅಲ್ಲಿಯ ತನಕ ನಮ್ಮ ಬದುಕಿನಲ್ಲಿ ಇನ್ನೊಬ್ಬರನ್ನು ದ್ವೇಷಿಸದೇ ನೆಮ್ಮದಿಯಿಂದ ಬದುಕುವ ಶಾಂತಿಮಯವಾದ ಬದುಕನ್ನು ಕೊಡು; ಎಲ್ಲರನ್ನೂ ಶಾಂತಿ-ನೆಮ್ಮದಿಯಿಂದ ಬದುಕಲು ಬಿಡೋಣ ಮತ್ತು ನಾವು ನೆಮ್ಮದಿಯಿಂದ ಬದುಕೋಣ; ಯಾರೂ ಯಾರನ್ನೂ ದ್ವೇಷಿಸುವುದು ಬೇಡ’ ಎನ್ನುವುದು ಈ ಶಾಂತಿ ಮಂತ್ರದ ಮೂಲ ಸಂದೇಶ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ