ಭಾನುವಾರ, ಏಪ್ರಿಲ್ 25, 2021

ಭಾವಾನುವಾದ- ಅಧ್ಯಾಯ ೦೨

 

ಭಾವಾನುವಾದ- ಅಧ್ಯಾಯ ೦೨

ಮೊದಲನೇ ಅಧ್ಯಾಯದಲ್ಲಿ ಧ್ಯಾನವೆಂಬ ಕಡಗೋಲಿನಿಂದ ಕಡೆದು, ಸತ್ಯವೆಂಬ ಬೆಣ್ಣೆಯನ್ನು ಹುಡುಕಬೇಕು ಎನ್ನುವ ಮಾತನ್ನು ನೋಡಿದೆವು.  ಈ ಅಧ್ಯಾಯದಲ್ಲಿ  ಧ್ಯಾನವೆಂದರೇನು,  ಯೋಗವೆಂದರೇನು ಎನ್ನುವುದನ್ನು  ಋಷಿಗಳು ವಿವರಿಸಿರುವುದನ್ನು ನಾವು ಕಾಣುತ್ತೇವೆ.

ಯೋಗ ಎಂದು ಹೇಳಿದಾಗಲೇ ಮನಸ್ಸು ಉಲ್ಲಾಸಗೊಳ್ಳುತ್ತದೆ. ನಮ್ಮ ಮನಸ್ಸು ಸ್ಥಿರವಾಗಿಲ್ಲದೇ ಇರುವುದೇ ಅದರ ವಿಷಾದಕ್ಕೆ ಕಾರಣ. ಇಂತಹ ಮನಸ್ಸು ಬೇರೆಬೇರೆ ಕಡೆ ಚಲಿಸದಂತೆ ತಡೆಹಿಡಿದು ಏಕಾಗ್ರತೆ ಸಾಧಿಸುವ ಸಾಧನವೇ ‘ಯೋಗ’.  ಯೋಗ ಎಂದ ಕೂಡಲೆ ನಮಗೆ ನಾನಾ ಬಗೆಯ ದೇಹ ಭಂಗಿಗಳು, ಆಸನಗಳು ನೆನಪಾಗುತ್ತದೆ. ಆದರೆ ಇದು ಯೋಗದ ಭಾಗವಾದರೂ ಕೂಡಾ, ಇದಷ್ಟೇ ಯೋಗವಲ್ಲ. ಯೋಗಃ ಚಿತ್ತವೃತ್ತಿ ನಿರೋಧಃ’ ಎನ್ನುವುದು ಪತಂಜಲಿ ಸೂತ್ರ. ನಮ್ಮ ಚಿತ್ತದ ವೃತ್ತಿಯನ್ನು ಪ್ರಾಚೀನರು  ಐದು ಬಗೆಯಲ್ಲಿ ವಿವರಿಸಿದ್ದಾರೆ. ಅವುಗಳೆಂದರೆ ಕ್ಷಿಪ್ತ, ಮೂಢ, ವಿಕ್ಷಿಪ್ತ, ಏಕಾಗ್ರ, ನಿರುದ್ಧ. (೧) ಕ್ಷಿಪ್ತ: ಯಾವುದೋ ಐಹಿಕವಾದ ಕ್ಷುದ್ರ ವಿಷಯದಲ್ಲಿ ಮನಸ್ಸು ಪೂರ್ಣವಾಗಿ ನಿಲ್ಲುವ, ರಜೋಗುಣದಿಂದ ಪ್ರೇರಿತವಾಗಿರುವ ಸ್ಥಿತಿ  (೨) ಮೂಢ: ಯಾವ ಚಟುವಟಿಕೆಯೂ ಇಲ್ಲದೆ ಮನಸ್ಸು ಸೋಮಾರಿತನದಲ್ಲಿ ನಿಲ್ಲುವ ತಮೋಗುಣ ಪ್ರೇರಿತವಾಗಿರುವ ಸ್ಥಿತಿ. (೩) ವಿಕ್ಷಿಪ್ತ: ಮನಸ್ಸು ಕೋತಿಯಂತೆ ಅಲ್ಲಿ ಇಲ್ಲಿ ಹರಿದಾಡುವ ಚಂಚಲ ಸ್ಥಿತಿ.(ಉದಾಹರಣೆಗೆ ಭಗವಂತ ಇದ್ದಾನೋ ಇಲ್ಲವೋ ಎನ್ನುವ ಗೊಂದಲದ ಸ್ಥಿತಿ) (೪) ಏಕಾಗ್ರ: ಒಂದು ವಿಷಯದಲ್ಲಿ ಮನಸ್ಸು ಗಟ್ಟಿಯಾಗಿ ನಿಲ್ಲುವ ಸ್ಥಿತಿ.(ಉದಾಹರಣೆಗೆ: ಭಗವಂತನಿದ್ದಾನೆ ಎಂದು ತಿಳಿದು ಅವನಲ್ಲಿ ಮನಸ್ಸು ಏಕಾಗ್ರವಾಗುವುದು) (೫) ನಿರುದ್ಧ: ಒಮ್ಮೆ ತಿಳಿದಾಗ ಅಲ್ಲಿಂದ ಕದಲದೇ ಒಳಪ್ರಪಂಚದಲ್ಲೇ  ಸ್ಥಿರವಾಗಿ ನಿಲ್ಲುವ ಸ್ಥಿತಿ. (ಉದಾಹರಣೆಗೆ: ಭಗವಂತನಲ್ಲಿ ಏಕಾಗ್ರಕೊಂಡ ಮನಸ್ಸು ಅಲ್ಲಿಂದ ಕದಲದೇ ನಿಲ್ಲುವ ಸಮಾಧಿ ಸ್ಥಿತಿ). ಈ ಐದು ಸ್ಥಿತಿಗಳಲ್ಲಿ ಮೊದಲ ಮೂರು ಸ್ಥಿತಿಗಳನ್ನು ಮೀರಿ, ಭಗವಂತನಲ್ಲಿ ಏಕಾಗ್ರತೆ ಸಾಧಿಸಿ, ಮನಸ್ಸನ್ನು ನಿರುದ್ಧಗೊಳಿಸುವ ಸಾಧನವೇ ‘ಯೋಗ. 

 

̐

ಯುಞ್ಜತೇ ಮನ ಉತ ಯುಞ್ಜತೇ ಧಿಯೋ   ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ ।

ವಿ ಹೋತ್ರಾ ದಧೇ ವಯುನಾವಿದೇಕ   ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ ॥ ೨.೦೪ ॥

 

ನಿಜವಾದ ಜ್ಞಾನವುಳ್ಳವರು ನಿರಂತರ ಮನನದಿಂದ ಮನಸ್ಸನ್ನು ಭಗವಂತನ ಜೊತೆಗೆ ಜೋಡಿಸಿ, ತಮ್ಮ ಮನಸ್ಸನ್ನು ಅಲ್ಲೇ ನಿಲ್ಲುವಂತೆ ಮಾಡುತ್ತಾರೆ. ಇದನ್ನೇ ‘ಧ್ಯಾನ ಎನ್ನುತ್ತಾರೆ. ಇಲ್ಲಿ ‘ಧಿಯಃ’  ಎಂದರೆ ಧೀ-ವೃತ್ತಿಗಳು. ಅಂದರೆ ಇಂದ್ರಿಯ ವೃತ್ತಿಗಳು.  ಸಮಸ್ತ ಇಂದ್ರಿಯಗಳೂ ಭಗವಂತನಲ್ಲಿ ಕೇಂದ್ರೀಕೃತಗೊಂಡು, ಅಲ್ಲೇ ನಿಲ್ಲುವ ಸ್ಥಿತಿ ಈ ಧ್ಯಾನ ಸ್ಥಿತಿ.

ಇಲ್ಲಿ ‘ವಿಪ್ರರು ಈ ರೀತಿಯಾಗಿ ತಮ್ಮ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುತ್ತಾರೆ’ ಎಂದಿದ್ದಾರೆ. ಹೀಗೆ ಹೇಳಿದಾಗ ಸಾಮಾನ್ಯವಾಗಿ ನಮಗೆ ಯಜ್ಞೋಪವೀತಧಾರಿಗಳಷ್ಟೇ ಧ್ಯಾನ ಮಾಡಲು ಅರ್ಹರು ಎನ್ನುವ ತಪ್ಪು ಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಅದು ಸರಿಯಲ್ಲ. ಉಪನಿಷತ್ತಿನಲ್ಲಿ ‘ವಿಪ್ರರು ಎಂದರೆ ಜ್ಞಾನಿಗಳು ಎಂದರ್ಥ.   ಯಜ್ಞೋಪವೀತಧಾರಣೆ ಈ ದಿಕ್ಕಿನಲ್ಲಿ ಒಂದು ಧೀಕ್ಷಾಬಂಧ ಅಷ್ಟೇ. ಜನ್ನ-ದಾರà ಜನಿವಾರ(ಜನ್ನ=ಯಜ್ಞ). ‘ವೇದೋಕ್ತವಾಗಿರುವ ಕರ್ಮಾನುಷ್ಠಾನಗಳನ್ನು ನಾನು ಮಾಡುತ್ತೇನೆ ಎಂದು ಧೀಕ್ಷೆ ತೆಗೆದುಕೊಳ್ಳುವುದೇ ಜನಿವಾರ ಹಾಕಿಕೊಳ್ಳುವುದರ ಹಿಂದಿನ ಸಂಕಲ್ಪ. ಕೆಲವರು ‘ವಿಪ್ರರು’ ಎನ್ನುವುದು ಜಾತಿವಾಚಕ ಪದ ಎಂದುಕೊಳ್ಳುತ್ತಾರೆ. ಅಂದರೆ ಬ್ರಾಹ್ಮಣ ಜಾತಿಯ ತಂದೆ-ತಾಯಿಯಲ್ಲಿ ಹುಟ್ಟುವ ಸಂತಾನವಷ್ಟೇ ‘ವಿಪ್ರರು’ ಎನ್ನುವುದು ತಪ್ಪು ಕಲ್ಪನೆ. ಈ ತಿಳುವಳಿಕೆ ತಪ್ಪು ಎನ್ನುವುದು ನಮಗೆ ಮಹಾಭಾರತವನ್ನು ನೋಡಿದರೆ ತಿಳಿಯುತ್ತದೆ. ಭಾರತೀಯ ಸಂಸ್ಕೃತಿಯಲ್ಲಿನ  ಸಮಸ್ತ ವೇದವಾಙ್ಮಯಗಳನ್ನು ಜಗತ್ತಿಗೆ ನೀಡಿದ ವೇದವ್ಯಾಸರು ಬೆಸ್ತರ ಹುಡುಗಿಯ ಮಗ. ಆದರೆ ಅವರು ಅತ್ಯಂತ ದೊಡ್ಡ ವಿಪ್ರ. ವಿಪ್ರ ಎನ್ನುವ ಪದ ‘ಪ್ರ ಧಾತುವಿನಿಂದ ನಿಷ್ಫನ್ನವಾಗಿದೆ. ಹಾಗಾಗಿ ಇಲ್ಲಿ ವಿಪ್ರರು ಎಂದರೆ ‘ವಿಶಿಷ್ಟವಾದ ಅರಿವನ್ನು ಪಡೆದವರು ಅಂದರೆ ಜ್ಞಾನಿಗಳು’ ಎಂದರ್ಥ.    

ಭಗವಂತ ‘ಬೃಹತ್ ವಿಪ್ರ’.  ಅಂದರೆ ಅವನು ಸರ್ವವನ್ನೂ ಬಲ್ಲ ಸರ್ವೋನ್ನತ ಜ್ಞಾನಿ. ಅಂತಹ ಭಗವಂತನನ್ನು ಇಲ್ಲಿ ‘ವಿಪಶ್ಚಿತಃ’ ಎಂದು ಕರೆದಿದ್ದಾರೆ. ಇದೊಂದು ಅದ್ಭುತವಾದ ಶಬ್ದ. ಈ ಶಬ್ದದ ಒಳನೋಟವನ್ನು ವೇದಾಂತದೀಕ್ಷಿತರು ‘ವಿಪಶ್ಯಕ್-ಚಿತ್ತ್ವ’ ಅಂದರೆ ಎಲ್ಲವನ್ನೂ ಪ್ರತ್ಯಕ್ಷವಾಗಿ ಕಾಣುವ ಚೈತನ್ಯ  ಎಂದು ವರ್ಣಿಸುವುದನ್ನು ನಾವು ಕಾಣಬಹುದು.  ಇದನ್ನೇ ಸಾಕ್ಷಾತ್ ಈಯತೇ ಇತಿ ‘ಸಾಕ್ಷೀ ಎಂದು ವಿಷ್ಣುಸಹಸ್ರನಾಮ ವರ್ಣಿಸುತ್ತದೆ. ಅವನು ಎಲ್ಲವನ್ನು ಕಣ್ಣಾರೆ ಕಾಣಬಲ್ಲವ. ಹೀಗಾಗಿ ಅವನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ. ಭಗವಂತನ ಮುಂದೆ ನಾವೆಲ್ಲರೂ ಬತ್ತಲು, ಅವನರಿವಿಲ್ಲದ ಜೀವನ ಬರೀ ಕತ್ತಲು. ಹೀಗಾಗಿ ಇಂತಹ ‘ವಿಪಶ್ಚಿತ್ ವಿಪ್ರ’ನಲ್ಲಿ ‘ವಿಪ್ರರು ತಮ್ಮ ಮನಸ್ಸನ್ನು ನೆಲೆಗೊಳಿಸುತ್ತಾರೆ. 

ಎಲ್ಲರಿಗಿಂತ ದೊಡ್ಡಜ್ಞಾನಿ ಮತ್ತು ಎಲ್ಲವನ್ನೂ ಸಾಕ್ಷಾತ್ ಕಾಣುವ ಜ್ಞಾನಸ್ವರೂಪನಾದ ಭಗವಂತನಲ್ಲಿ ಜ್ಞಾನಿಗಳು ಏಕೆ ತಮ್ಮ ಮನಸ್ಸನ್ನು ನೆಲೆಗೊಳಿಸುತ್ತಾರೆ ಎಂದರೆ ಅದೊಂದು ಆನಂದದ ಅನುಭವ. ಹೊರಗಿನ ಪ್ರಪಂಚವನ್ನು ಮರೆತು ಒಳಪ್ರಪಂಚವನ್ನು ಹೊಕ್ಕಾಗ ಸಿಗುವ ಆನಂದ ಅಪರಂಪಾರ. ಈ ಪ್ರಕ್ರಿಯೆ ನಮಗಿಂದು ಗೊತ್ತೇ ಇಲ್ಲ. ಇಂದು ಹೊರಪ್ರಪಂಚದ ನೋವನ್ನು ಮರೆಯಲು ಜನ ಕುಡಿತದ ಚಟಕ್ಕೆ ಬಲಿ ಬೀಳುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಕ್ಷಣಿಕವಾಗಿ ಬಾಹ್ಯ ಸಮಸ್ಯೆ ಮರೆತುಹೋಗಿ ಸುಖ ಸಿಕ್ಕಂತೆ ಕಂಡರೂ ಕೂಡಾ,   ಅಮಲು ಇಳಿದಾಗ ಬಾಹ್ಯ ಸಮಸ್ಯೆ ದುಪ್ಪಟ್ಟಾಗಿ ಅವರನ್ನು ಕಾಡುತ್ತದೆ.  ಆದರೆ ಪ್ರಾಚೀನರು ಶಾಶ್ವತ ಆನಂದಕ್ಕಾಗಿ ಕಂಡುಕೊಂಡ ಮಾರ್ಗ ತಮ್ಮ ಮನಸ್ಸನ್ನು ಅಂತರ್ಮುಖಿಯಾಗಿಸಿ ಯೋಗದಲ್ಲಿ ತೊಡಗಿಸಿಕೊಳ್ಳುವುದು. ಆಗ ಬಾಹ್ಯ ಜಂಜಾಟ ಮರೆತು ಹೋಗುತ್ತದೆ. ಅಷ್ಟೇ ಅಲ್ಲಾ, ಆ ಸ್ಥಿತಿಯಿಂದ ಹೊರಬಂದಾಗಲೂ ಕೂಡಾ ಮನಸ್ಸು ನಿರ್ಮಲವಾಗಿರುತ್ತದೆ ಮತ್ತು ಹೊರಗಿನ ಸಮಸ್ಯೆ ನಮ್ಮನ್ನು ಕಾಡುವುದಿಲ್ಲ.  ಗೀತೆಯಲ್ಲಿ(೨-೩೮) ಶ್ರೀಕೃಷ್ಣ ಹೇಳುವ ಸುಖದುಃಖೇ ಸಮೇ ಕೃತ್ವಾ  ಅಂದರೆ ಸುಖ-ದುಃಖ ಇವೆರಡನ್ನೂ ಮೀರಿನಿಲ್ಲುವ ಸ್ಥಿತಿಯೇ ಈ ಧ್ಯಾನ ಸ್ಥಿತಿ.

ನಾವು ಯಾರನ್ನು ಧ್ಯಾನಿಸಬೇಕು? ಯಾವ ದೇವತೆಗಳನ್ನು ಪೂಜಿಸಬೇಕು? ಯಾವ ರೂಪವನ್ನು ಮನಸ್ಸಿನಲ್ಲಿ ನೆಲೆಗೊಳಿಸಬೇಕು? ಇತ್ಯಾದಿ ಪ್ರಶ್ನೆಗಳಿಗೆ  ಮೇಲಿನ ಶ್ಲೋಕದ ಉತ್ತರಾರ್ಧದಲ್ಲಿ  ಋಷಿಗಳು ಉತ್ತರಿಸಿದ್ದಾರೆ.

‘ಜ್ಞಾನಿಗಳು ಎಲ್ಲಾ ಮಂತ್ರಗಳಿಂದ ವಿಶಿಷ್ಟನಾದ ಒಬ್ಬನೇ ಒಬ್ಬ ಪರಮಾತ್ಮನನ್ನು ಕಾಣುತ್ತಾರೆ’ ಎಂದಿದ್ದಾರೆ ಋಷಿಗಳು. ಇಲ್ಲಿ ‘ವಯುನಾ’ ಎನ್ನುವ ವಿಶೇಷ ಪದ ಪ್ರಯೋಗವಾಗಿರುವುದನ್ನು ಕಾಣುತ್ತೇವೆ. ‘ವಯುನಮ್’ ಎಂದು ನಪುಂಸಕ ಲಿಂಗದ ರೂಪವಾದರೆ ಸ್ತ್ರೀಲಿಂಗದಲ್ಲಿ ‘ವಯುನಾ ಎಂದು ರೂಪವಾಗುತ್ತದೆ. ಲಿಂಗ ಬೇರೆ ಹೊರತು ಅರ್ಥ ಒಂದೆ. ಎರಡೂ ರೂಪದಲ್ಲೂ ಜ್ಞಾನ ಎಂದೇ ಅರ್ಥ.  ಈಶಾವಾಸ್ಯ ಉಪನಿಷತ್ತಿನಲ್ಲಿ (೧೮)  ವಿಶ್ವಾನಿ ದೇವ ವಯುನೇನ ವಿದ್ವಾನ್’ ಎನ್ನುವಲ್ಲಿ, ಅದೇ ರೀತಿ ಭಾಗವತದಲ್ಲಿ (೦೪.೦೯.೦೮) ‘ಯದ್ ದತ್ತಯಾ ವಯುನಯೇದಮಚಷ್ಟ ವಿಶ್ವಮ್’   ಈ ಪದ ಬಳಕೆಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ‘ವಯುನಮ್’ ಎಂದರೂ ಜ್ಞಾನ, ‘ವಯುನಾ’ ಎಂದರೂ ಜ್ಞಾನ ಎನ್ನುವುದು ತಿಳಿಯುತ್ತದೆ. ಶಬ್ದ ಸ್ವಭಾವದಂತೆ ಈ ಎರಡು ಪದಗಳು ನಪುಂಸಕಲಿಂಗ ಹಾಗು ಸ್ತ್ರೀಲಿಂಗದಲ್ಲಿದೆ ಅಷ್ಟೇ. ವ್ಯಾಕರಣದ ನಿಷ್ಪತ್ತಿ ಪ್ರಕಾರ ವಯುನಾ-ವಿಂದತೀತಿ ವಯುನಾತ್. ಅಂದರೆ ಎಲ್ಲಾ ಅರಿವನ್ನು ಪಡೆದವನು - ಜ್ಞಾನಿ ಎಂದರ್ಥ.

ಇಲ್ಲಿ ‘ಹೋತ್ರಾ ಎನ್ನುವ ಪದ ಬಳಕೆಯಾಗಿದೆ. ಸಾಮಾನ್ಯವಾಗಿ ನಾವು ಹೋತ್ರಾ ಎಂದರೆ ಹೋಮ ಮಾಡುವವನು ಅಥವಾ ಪುರೋಹಿತ ಎಂದುಕೊಳ್ಳುತ್ತೇವೆ. ಆದರೆ ಅದು ತಪ್ಪು. ಒಂದು ಯಜ್ಞ ಮಾಡಬೇಕಾದರೆ ಅಲ್ಲಿ ಋಗ್ವೇದಿಗಳಿರುತ್ತಾರೆ ಮತ್ತು ಯಜುರ್ವೇದಿಗಳೂ ಇರುತ್ತಾರೆ. ಇವರಲ್ಲಿ ಋಗ್ವೇದಿಗಳನ್ನು ಹೋತ್ರುಗಳು ಎಂದರೆ, ಯಜುರ್ವೇದಿಗಳನ್ನು  ಅಧ್ವರ್ಯುಗಳು ಎನ್ನುತ್ತಾರೆ. ಯಜ್ಞದಲ್ಲಿ ಪೂರ್ವಭಾವಿಯಾಗಿ ಮಂತ್ರಗಳನ್ನು ಹೇಳುವವರು ಹೋತೃಗಳಾದರೆ, ಹೋಮ ಮಾಡುವವರು ಅಧ್ವರ್ಯುಗಳು[1]. ಹೋತೃಗಳು ಭಗವಂತನನ್ನು ಮಂತ್ರಗಳ ಮೂಲಕ ಆಹ್ವಾನ ಮಾಡುವವರು. ಇನ್ನು ಭಗವಂತನನ್ನು ಕರೆಯುವ ಮಂತ್ರಗಳನ್ನೂ ಕೂಡಾ ‘ಹೋತೃ’ ಎನ್ನುತ್ತಾರೆ. ಎಲ್ಲಾ ಮಂತ್ರಗಳೂ ಕೂಡಾ ಒಬ್ಬನೇ ಒಬ್ಬ ಭಗವಂತನನ್ನು ಹೇಳುತ್ತವೆ. ಯಾವ ಹೆಸರಿನಿಂದ ಕರೆದರೂ ಅದು ಅಂತತಃ  ದೇವರನಾಮವೇ. ಜ್ಞಾನಿಗಳಿಗೆ ಈ ಸತ್ಯ ತಿಳಿದಿರುತ್ತದೆ. ಏಕೆಂದರೆ ಭಗವಂತನಿಗೆ ಹೆಸರಿಡುವವರೂ ಜ್ಞಾನಿಗಳೇ ಅಲ್ಲವೇ? ಇದನ್ನೇ ದಾಸರು ‘ನನಗೆ ನಿನ್ನಂತಹ ತಂದೆಯುಂಟು, ನಿನ್ನ ತಂದೆಯ ತೋರೋ ಎಂದು ಹಾಡಿರುವುದು. ಭಗವಂತನಿಗೆ ಹೆಸರಿಡುವ ಜ್ಞಾನಿಯೇ ಅವನ ಅಪ್ಪ!. ಇದನ್ನೇ  ಋಗ್ವೇದದಲ್ಲಿ(೧.೧೬೪.೧೬) ‘ಯಸ್ತಾ ವಿಜಾನಾತ್ ಸುಪಿತುಷ್ಟಿತಾಸತ್’ ಎಂದಿದ್ದಾರೆ. ಯಾರು ಭಗವಂತನನ್ನು ತಿಳಿದಿದ್ದಾನೋ, ಅವನು ತಂದೆಗೂ ನಾಮಕರಣ ಮಾಡುವ ತಂದೆ ಎಂದು ಬಹಳ ರೋಚಕವಾಗಿ ಇಲ್ಲಿ ಹೇಳಿದ್ದಾರೆ. ಆದ್ದರಿಂದ ಭಗವಂತನ ನಾಮ ಯಾವುದೋ ಅದು ಹೋತ್ರು. ಎಲ್ಲಾ ಮಂತ್ರಗಳಲ್ಲಿರುವುದೂ ಭಗವಂತನ ನಾಮಗಳು. ಹೀಗೆ  ಎಲ್ಲವೂ ಕೂಡಾ ಆ ಒಂದೇ ಒಂದು ಪರತತ್ವವನ್ನು ಹೇಳುತ್ತವೆ.  ಅಂತಹ ಪರತತ್ವವನ್ನು ಆನುಸಂಧಾನ ಮಾಡಿಕೊಂಡು ಜ್ಞಾನಿಯಾದವನು ಧ್ಯಾನ ಮಾಡುತ್ತಾನೆ. ಅವನಿಗೆ ಅಲ್ಲಿ ಯಾವ ಗೊಂದಲವೂ ಇರುವುದಿಲ್ಲ.

ಯಾವ ದೇವರನ್ನು ಧ್ಯಾನ ಮಾಡಬೇಕು ಎನ್ನುವ ಗೊಂದಲ ಕೆಲವರಿಗಾದರೆ ದೇವರು ಗಂಡೋ ಹೆಣ್ಣೋ ಎನ್ನುವ ಗೊಂದಲ ಇನ್ನು ಕೆಲವರಿಗೆ. ಭಗವಂತನನ್ನು ‘ಸಹಸ್ರಶೀರ್ಷಾ ಪುರುಷಃ’ ಎಂದು ಉಪಾಸನೆ ಮಾಡುವುದೋ ಅಥವಾ ‘ಶ್ರೀಮಾತಾ ಶ್ರೀ ಜಗನ್ಮಾತಾ’ ಎಂದು ಉಪಾಸನೆ ಮಾಡುವುದೋ? ಈ ಪ್ರಶ್ನೆಗೆ  ಋಗ್ವೇದದಲ್ಲಿ ಒಗಟಿನಂತೆ ಉತ್ತರಿಸಿರುವುದನ್ನು ನಾವು ಕಾಣುತ್ತೇವೆ. ಸ್ತ್ರಿಯಃ ಸತೀಸ್ತಾ̐ ಉ ಮೇ ಪುಂಸ ಆಹುಃ ಪಶ್ಯದಕ್ಷಣ್ವಾನ್ನವಿಚೇತದನ್ಧಃ(೧-೧೬೪-೧೬). ‘ಯಾರು ಸ್ತ್ರೀಯನ್ನು ಸ್ತ್ರೀಯಾಗಿ, ಗಂಡನ್ನು ಗಂಡಾಗಿ ಕಾಣುತ್ತಾನೋ ಅವನು ಕುರುಡನಿದ್ದಾನೆ, ಯಾರಿಗೆ ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಕಾಣುತ್ತದೋ ಅವನಿಗೆ ಕಣ್ಣಿದೆ’ ಎನ್ನುವ ಒಗಟಿನ ಮಾತು ಇದಾಗಿದೆ.  ಕವೀರ್ಯಃ ಪುತ್ರಃ ಸ ಇಮಾ ಚಿಕೇತ ಯಸ್ತಾ ವಿಜಾನಾತ್ ಸುಪಿತುಷ್ಟಿತಾsಸತ್  ಎನ್ನುವ ಶೃತಿಯ ಮಾತು ಈ ಒಗಟನ್ನು ಬಿಡಿಸುತ್ತದೆ. ಭಗವಂತನ ಹೊಕ್ಕುಳಲ್ಲಿ ಹುಟ್ಟಿದ ಒಬ್ಬ ಮಗನಿದ್ದಾನೆ(ಚತುರ್ಮುಖ ಬ್ರಹ್ಮ) ಅವನಿಗೆ ಗೊತ್ತು. ಅವನ ತಂದೆಯೂ ನಾರಾಯಣ, ತಾಯಿಯೂ ನಾರಾಯಣ. ಯಾರು ಭಗವಂತನ ಕುರಿತು ಈ ಸತ್ಯವನ್ನು ತಿಳಿಯಬಲ್ಲರೋ ಅವರು ಅವನಿಗೆ ನಾಮಕರಣ ಮಾಡಬಲ್ಲರು. ಹಾಗಾಗಿ ಅಂತಹ ಜ್ಞಾನಿಗಳು ಭಗವಂತನನ್ನು  ಸ್ತ್ರೀಲಿಂಗ, ಪುಲ್ಲಿಂಗ ಹಾಗು ನಪುಂಸಕ ಲಿಂಗದಿಂದಲೂ ಕರೆಯುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ಬರುವ ಮೊದಲ ಹೆಸರು ‘ವಿಶ್ವಮ್’ ನಪುಂಸಕ ಲಿಂಗ, ಎರಡನೇ ಹೆಸರಾದ ‘ವಿಷ್ಣುಃ’ ಪುಲ್ಲಿಂಗ. ಲೋಕದಲ್ಲಿ ಶಬ್ದ ಸ್ವಭಾವದಂತೆ ಭಾಷೆಯಲ್ಲಿ ಲಿಂಗ ಬಳಕೆಯಾದರೆ ಅದನ್ನು ಭಗವಂತನಲ್ಲಿ ಅನ್ವಯ ಮಾಡಿದಾಗ ಅದು ಅರ್ಥಸ್ವಭಾವವಾಗುತ್ತದೆ. ಭಗವಂತ ಸರ್ವಲಿಂಗ. ಅಂದರೆ ಅವನು ಗಂಡೂ ಹೌದು, ಹೆಣ್ಣೂ ಹೌದು. ಆದರೆ ಅವನು ಗಂಡೂ ಅಲ್ಲಾ, ಹೆಣ್ಣೂ ಅಲ್ಲಾ! ಏಕೆಂದರೆ ಸ್ತ್ರೀ-ಪುರುಷರಲ್ಲಿ ಇರುವ ಯಾವುದೇ ದೋಷ ಅವನಲ್ಲಿಲ್ಲ. ಪುಲ್ಲಿಂಗದಿಂದ ವಾಚ್ಯವಾದ ಭಗವಂತನ ರೂಪ ಪುರುಷರೂಪ(ಉದಾಹರಣೆಗೆ ಕೃಷ್ಣಃ, ಇದು ಭಗವಂತ ಪುರುಷರೂಪದಲ್ಲಿ ನಮಗೆ ತೋರಿಸಿಕೊಂಡ ರೂಪ ಹಾಗಾಗಿ ಪುಲ್ಲಿಂಗ). ಸ್ತ್ರೀಲಿಂಗದಿಂದ ವಾಚ್ಯವಾದ ಭಗವಂತನ ರೂಪ ಸ್ತ್ರೀರೂಪ(ಉದಾಹರಣೆಗೆ ಪೃಥಿವಿಯಲ್ಲಿ ಸನ್ನಿಹಿತನಾಗಿರುವ ಭಗವಂತನ  ‘ಪೃಥಿವೀ’ ನಾಮಕ ರೂಪ). ಹಾಗೆಯೇ ನಪುಂಸಕಲಿಂಗದಿಂದ ವಾಚ್ಯವಾದ ಭಗವಂತನ ರೂಪ ಉಭಯಲಿಂಗ. (ಉದಾಹರಣೆಗೆ  ವಿಶ್ವದಲ್ಲಿರುವ ಸ್ತ್ರೀಯರಲ್ಲಿ ಸ್ತ್ರೀಯಾಗಿ,  ಪುರುಷರಲ್ಲಿ ಪುರುಷನಾಗಿ ತುಂಬಿರುವ ಭಗವಂತನ  ‘ವಿಶ್ವಮ್ ನಾಮಕ ರೂಪ).

ಜ್ಞಾನಿಗಳು ಸಮಸ್ತ ಮಂತ್ರಗಳಿಂದ ಒಂದೇ ಒಂದು ಪರತತ್ವವನ್ನು ಧ್ಯಾನದಲ್ಲಿ ಕಂಡು ಆರಾಧಿಸುತ್ತಾರೆ. ಅವರಿಗೆ ಒಂದೊಂದು ಮಂತ್ರ ಒಂದೊಂದು ದೇವರಿಗಲ್ಲ, ಎಲ್ಲಾ ಮಂತ್ರಗಳೂ ಆ ಪರತತ್ವವನ್ನೇ ಹೇಳುತ್ತವೆ ಎನ್ನುವ ಸತ್ಯ ತಿಳಿದಿರುತ್ತದೆ. ಏಕೆಂದರೆ ಇಲ್ಲಿ ಹೇಳುತ್ತಾರೆ: ‘ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ’  ಎಂದು. ದೇವತೆಗಳು ಅನೇಕ, ಆದರೆ ದೇವರು ಒಬ್ಬನೇ. ‘ಏಕೋ ದೇವಃ ಸರ್ವಭೂತೇಷು ಗೂಢಃ’ ಎಂದು ಈ ಉಪನಿಷತ್ತಿನ ಆರನೇ ಅಧ್ಯಾಯದಲ್ಲಿ ಋಷಿಗಳು ವಿವರಿಸಿರುವುದನ್ನು ನಾವು ಮುಂದೆ ನೋಡಲಿದ್ದೇವೆ.  ಒಬ್ಬನೇ ಒಬ್ಬ ದೇವರಿಗೆ  ‘ಪರಿಷ್ಟುತಿಃ- ಬಗೆಬಗೆಯ ಸ್ತೋತ್ರಗಳು. ಭಗವಂತನ ನಾಮ ಗುಣವಾಚಕ. ಹಾಗಾಗಿ ಅನಂತ ಗುಣಗಳುಳ್ಳ ಭಗವಂತನಿಗೆ ಅನಂತ ನಾಮಗಳು. ಸಮಸ್ತ ವೇದಗಳು ಭಗವಂತನ ‘ಮಹಾಸ್ತೋತ್ರ. ಎಲ್ಲವನ್ನೂ ಸೃಷ್ಟಿ ಮಾಡಿದವನು ಅವನೇ ಆದ್ದರಿಂದ ಮೂಲತಃ ಎಲ್ಲಾ ಹೆಸರೂ ಅವನದ್ದೇ. ‘ಯೋ ದೇವಾನಾಂ ನಾಮಧಾ ಏಕ ಏವ’ (ಅಥರ್ವವೇದ ೨.೧.೩), ಎಲ್ಲಾ ದೇವತೆಗಳ ಹೆಸರು ಅಂತತಃ ಹೇಳುವುದು ಭಗವಂತನನ್ನೇ. ಹೀಗಾಗಿ ಯಾವ ನಾಮದಿಂದ ಹೇಳಿದರೂ ಕೂಡಾ ಅದು ಸರ್ವಶಕ್ತನಾದ ಪರಮಾತ್ಮನನ್ನು ಹೇಳುತ್ತದೆ ಎನ್ನುವ ಎಚ್ಚರ ನಮ್ಮೊಳಗಿರಬೇಕು.

ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲವನ್ನೂ ಸೃಷ್ಟಿ ಮಾಡಿರುವ ಆ ಮಹಾಶಕ್ತಿ ಭಗವಂತನನ್ನು ನಮಗೆ ಇಷ್ಟವಾಗುವ ಯಾವ ಭಾಷೆಯ ಯಾವ ಶಬ್ದದಿಂದಾಗಲೀ, ಇಷ್ಟವಾಗುವ ಯಾವ ರೂಪದಿಂದಾಗಲೀ ನಾವು ಉಪಾಸನೆ ಮಾಡಬಹುದು. ಅಂತಹ ಮಹಾ-ತತ್ವದಲ್ಲಿ ಮನಸ್ಸನ್ನು ನೆಲೆ ನಿಲ್ಲಿಸಿ ಧ್ಯಾನ ಮಾಡಬೇಕು.

 

ಅಗ್ನಿರ್ಯ್ಯತ್ರಾಭಿಮಥ್ಯತೇ ವಾಯುರ್ಯ್ಯತ್ರಾಧಿರುಧ್ಯತೇ

ಸೋಮೋ ಯತ್ರಾತಿರಿಚ್ಯತೇ ತತ್ರ ಸಂಜಾಯತೇ ಮನಃ ೦೨.೦೬

 

ಮನಸ್ಸು ಸಮಸ್ತ ಗೊಂದಲಗಳನ್ನು ದಾಟಿ ಸ್ಥಿರತೆಗೆ ಬರಲು ಪೂರ್ವಭಾವಿ ತಯಾರಿ ಮತ್ತು ನಮ್ಮ ಜೀವನ ಶೈಲಿ ಹೇಗಿರಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಇಲ್ಲಿ ಹೇಳುತ್ತಾರೆ: ‘ಅಗ್ನಿರ್ಯತ್ರಾಭಿಮಥ್ಯತೇ -  ಅಗ್ನಿಮಥನ ನಡೆಯಬೇಕು ಎಂದು. ಇದು ಒಗಟಿನ ರೀತಿಯ ಮಾತಾಗಿದೆ. ಎರಡು ಅರಣೀಕಾಷ್ಠವನ್ನು ಮಥನ ಮಾಡುವುದರಿಂದ ಅಲ್ಲಿ ಅಗ್ನಿ ಹುಟ್ಟುತ್ತದೆ ಎನ್ನುವುದನ್ನು ನಾವು ಈ ಹಿಂದೆ ನೋಡಿದ್ದೆವು. ಇಲ್ಲಿ  ಅರಣ್ಯೋಃ   ಗುರುಶಿಷ್ಯಯೋಃ’ ಅಂದರೆ ಗುರು ಮತ್ತು ಶಿಷ್ಯರೇ ಅರಣೀಕಾಷ್ಠಗಳು. ಅವರಿಬ್ಬರ ನಡುವೆ ಮಥನ ನಡೆದು ಅಲ್ಲಿ ಜ್ಞಾನಾಗ್ನಿ ಹೊರ ಹೊಮ್ಮಬೇಕು. ನಮಗೆ ಎಷ್ಟೇ ಅನುಭವವಿದ್ದರೂ ಕೂಡಾ, ನಾವು ಇನ್ನೊಬ್ಬರಿಂದ ಕಲಿಯುವುದು ಬಹಳ ಇರುತ್ತದೆ. ಈ ರೀತಿ ಇನ್ನೊಬ್ಬರ ಅನುಭವದಿಂದ ಕಲಿಯಲು ಗುರು ಮತ್ತು ಶಿಷ್ಯರ ನಡುವೆ ವಿಷಯದ ಮಥನ ನಡೆಯಬೇಕು. ನಾವೆಂದೂ ಕೂಡಾ  ಹಾಳು ಹರಟೆಯಲ್ಲಿ ಕಾಲ ಕಳೆಯಬಾರದು. ಈ ಕುರಿತು ಆಚಾರ್ಯ ಮಧ್ವರು ಒಂದು ಕಡೆ ಹೀಗೆ ಹೇಳುತ್ತಾರೆ: ‘ತದಲಂ ಬಹುಲೋಕವಿಚಿನ್ತನಯಾ ಪ್ರವಣಂ ಕುರು ಮಾನಸಮಿಶಪದೇ’ ಹಾಳು ಹರಟೆಯಲ್ಲಿ ಜೀವನವನ್ನು ವ್ಯರ್ಥಮಾಡಿಕೊಳ್ಳದೇ, ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ’ ಎನ್ನುವ ಎಚ್ಚರದ ನುಡಿ ಇದಾಗಿದೆ. ಆದ್ದರಿಂದ ಗುರು-ಶಿಷ್ಯರ ನಡುವೆ ನಿರಂತರ ಶಾಸ್ತ್ರದ ಮಥನ ನಡೆಯಬೇಕು ಮತ್ತು ಅದರಿಂದ ಜ್ಞಾನದ ಬೆಂಕಿ ಹುಟ್ಟಬೇಕು. ‘ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ’  (ಭಗವದ್ಗೀತೆ ೪.೩೭) ಹೀಗೆ ಹುಟ್ಟುವ ಜ್ಞಾನಾಗ್ನಿ ನಮ್ಮೆಲ್ಲಾ ಪಾಪ ಕರ್ಮಗಳನ್ನು ಸುಟ್ಟುಬಿಡುತ್ತದೆ. ಇದು ಜ್ಞಾನಯೋಗ.

‘ವಾಯುರ್ಯತ್ರಾಧಿರುಧ್ಯತೇ’  ಧ್ಯಾನಕ್ಕೆ ಬೇಕಾಗಿರುವ ಅತ್ಯಂತ ಮುಖ್ಯವಾದ ಪೂರ್ವಭಾವಿ ಸಿದ್ಧತೆ ಪ್ರಾಣಾಯಾಮ. ಉಸಿರಿನ ನಿಯಂತ್ರಣದಿಂದ ಪ್ರಾಣಶಕ್ತಿ ಬೆಳೆದು ಮನಸ್ಸಿನ ಶಕ್ತಿ ಹೆಚ್ಚುತ್ತದೆ. ನಾವು ತಿನ್ನುವ ಆಹಾರದಿಂದ ರೂಪುಗೊಂಡಿರುವ ಈ ಶರೀರ ಅನ್ನಮಯಕೋಶ. ಅದರೊಳಗೆ ಪ್ರಾಣಮಯಕೊಶವಿದೆ. ಪ್ರಾಣಮಯಕೋಶದ ಒಳಗಿರುವುದು ಮನೋಮಯಕೋಶ. ಹೇಗೆ ಪಾತ್ರೆ ಅಲುಗಾಡಿದಾಗ ಅದರಲ್ಲಿ ತುಂಬಿರುವ ನೀರೂ ಆಲುಗಾಡುತ್ತದೋ ಹಾಗೇ, ದೇಹ ಸ್ಥಿರವಿಲ್ಲದೇ ಇದ್ದಾಗ ಮನಸ್ಸು ಸ್ಥಿರವಾಗಿರುವುದಿಲ್ಲ. ಅದಕ್ಕಾಗಿ ಧ್ಯಾನ ಮಾಡುವಾಗ ದೇಹ ಚಲಿಸದಂತೆ ಸ್ಥಿರವಾದ ಆಸನದಲ್ಲಿ ನಾವಿರಬೇಕಾಗುತ್ತದೆ. ಆನಂತರ ಉಸಿರಿನ ನಿಯಂತ್ರಣ ಸಾಧಿಸಿ, ಮನಸ್ಸನ್ನು ಸ್ಥಿರಗೊಳಿಸಬೇಕು. ಹೀಗೆ ಶ್ವಾಸನಿರೋಧ ಮಾಡಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ಹಠಯೋಗ.  

‘ಸೋಮೋ ಯತ್ರಾತಿರಿಚ್ಯತೇ -  ಸೋಮ ಉಕ್ಕಿ ಹರಿಯಬೇಕು.  ಅಂದರೆ ನಾವು ಯಾವತ್ತೂ ಕೂಡಾ ನಿಷ್ಕ್ರೀಯರಾಗಿರಬಾರದು. ‘ಕರ್ಮಣಾ ಜ್ಞಾನಮಾತನೋತಿ’-ನಾವು ಸದಾ ಸತ್ಕರ್ಮಶೀಲರಾಗಿರಬೇಕು. ಎಲ್ಲಿ ಸೋಮರಸ ಉಕ್ಕಿ ಹರಿಯುತ್ತದೋ ಅಲ್ಲಿ ಮನಸ್ಸು ಶುದ್ಧವಾಗುತ್ತದೆ. ಇಲ್ಲಿ ಸೋಮರಸ ಉಕ್ಕಿ ಹರಿಯುವುದು ಅಂದರೆ ಸೋಮಯಾಗದಂತಹ[2] ಧಾರ್ಮಿಕ ಕ್ರಿಯೆಗಳು ನಿರಂತರ ನಡೆಯುತ್ತಿರುವುದು. ಯಾವುದರಿಂದ ಇನ್ನೊಬ್ಬರಿಗೆ ಉಪಯೋಗವಾಗುತ್ತದೋ,  ಅಂತಹ ಕರ್ಮಾಚರಣೆ ನಿರಂತರ ನಡೆಯುತ್ತಿರಬೇಕು ಮತ್ತು ಚಟುವಟಿಕೆ ತುಂಬಿದ ಜೀವನ ನಮ್ಮದಾಗಿರಬೇಕು ಎಂದರ್ಥ. ಇದು ಕರ್ಮಯೋಗ.

ದಿನದ ಇಪ್ಪತ್ನಾಲ್ಕು ಗಂಟೆ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಭಗವಂತನ ಅರಿವಿನೊಂದಿಗಿನ,  ಚಟುವಟಿಕೆಗಳಿಂದ ತುಂಬಿದ ಜೀವನ ನಮ್ಮದಾಗಿರಬೇಕು. ಜೊತೆಗೆ ಪ್ರಾಣಾಯಾಮ ಮತ್ತು ಧ್ಯಾನ. ಆಗ ಮನಸ್ಸು ಭಗವಂತನಲ್ಲಿ ಏಕಾಗ್ರತೆಯನ್ನು ಹೊಂದುತ್ತದೆ.

 

 

ತ್ರಿರುನ್ನತಂ ಸ್ಥಾಪ್ಯ ಸಮಂ ಶರೀರಂ ಹೃದೀನ್ದ್ರಿಯಾಣಿ ಮನಸಾ ಸಂನಿವೇಶ್ಯ ।

ಬ್ರಹ್ಮೋಡುಪೇನ ಪ್ರತರೇತ ವಿದ್ವಾನ್ ಸ್ರೋತಾಂಸಿ ಸರ್ವಾಣಿ ಭಯಾವಹಾನಿ ॥ ೦೨.೦೮ ॥

ಧ್ಯಾನದ ಭಂಗಿಯಲ್ಲಿ ಇರಬೇಕಾದ ಕೆಲವು ಆವಶ್ಯಕ ಸಲಹೆಗಳನ್ನು ಇಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಧ್ಯಾನದ ಒಂದು ಮುಖ್ಯವಾದ ಅಂಗ-ಕೂಡುವ ಭಂಗಿ. ಅದನ್ನೇ   ‘ಆಸನ ಎನ್ನುತ್ತಾರೆ. ನಾವು ಧ್ಯಾನಕ್ಕೆ ಎಲ್ಲಿ ಹೇಗೆ ಕುಳಿತುಕೊಳ್ಳಬೇಕು ಎನ್ನುವುದನ್ನು ವಿವರಿಸುತ್ತಾ ಇಲ್ಲಿ ಹೇಳುತ್ತಾರೆ: ‘ಸೊಂಟದ ಮೇಲಿನ ಮೂರು ಭಾಗಗಳು (ಬೆನ್ನು, ಕುತ್ತಿಗೆ ಮತ್ತು ತಲೆ) ನೆಟ್ಟಗೆ ಸರಳರೇಖೆಯಲ್ಲಿ ಇರುವಂತೆ ಕುಳಿತುಕೊಳ್ಳಬೇಕು’ ಎಂದು. ಈ ರೀತಿ ಕುಳಿತುಕೊಳ್ಳುವುದರಿಂದ ಧ್ಯಾನಕ್ಕೆ ಪೂರಕವಾದ ಪೂರ್ಣಪ್ರಮಾಣದ ಆಮ್ಲಜನಕ ದೇಹಕ್ಕೆ   ದೊರೆಯುತ್ತದೆ. ಪ್ರಾರಂಭದಿಂದ  ಧ್ಯಾನ ಮುಗಿಯುವ ತನಕ ದೇಹ ಬಗ್ಗಬಾರದು. ಇದು ಮುಖ್ಯವಾದ ಅಂಶ. ಕೆಲವೊಮ್ಮೆ ನಮಗರಿವಿಲ್ಲದೇ ದೇಹ ಬಗ್ಗುತ್ತದೆ.  ಈ ರೀತಿ ಆಗದಂತೆ ತಡೆಯಲು ವಜ್ರಾಸನದಲ್ಲಿ ಕೂರಬಹುದು.  ಇದಲ್ಲದೇ ಪದ್ಮಾಸನ, ಸ್ವಸ್ತಿಕಾಸನ, ಭದ್ರಾಸನ ಮತ್ತು   ವೀರಾಸನ, ಇವುಗಳಲ್ಲಿ ಯಾವ ಆಸನವನ್ನೂ ಕೂಡಾ ಆರಿಸಿಕೊಳ್ಳಬಹುದು[3]. ಯಾವುದೇ ಆಸನದಲ್ಲಿ ಕುಳಿತುಕೊಳ್ಳುವಾಗ ನೇರವಾಗಿ ನೆಲದಮೇಲೆ ಕುಳಿತು ಧ್ಯಾನ ಮಾಡಬಾರದು.  ಏಕೆಂದರೆ ನೆಲದಲ್ಲಿರುವ ಕೆಟ್ಟ ಕಂಪನಗಳು ನಮ್ಮ ಏಕಾಗ್ರತೆಯನ್ನು ಭಂಗಮಾಡಬಹುದು. ಅದಕ್ಕಾಗಿ ಮಣೆ, ಚಾಪೆ, ದಾವಳಿ, ಕೃಷ್ಣಾಜಿನ ಬಳಸಬಹುದು. (ಸನ್ಯಾಸಿಗಳು ವ್ಯಾಘ್ರಾಜಿನ ಬಳಸಬಹುದು). [ಇಲ್ಲಿ ಕೃಷ್ಣಾಜಿನ ಸತ್ತ ಪ್ರಾಣಿಯ ಚರ್ಮವಾದರೂ ಕೂಡಾ ಅದು ಮಡಿ. ಏಕೆಂದರೆ ಅದು ಮನಸ್ಸಿನ ಮೇಲೆ ಧನಾತ್ಮಕ ಕಂಪನವನ್ನು ಕೊಟ್ಟು ಮನಸ್ಸು ಶುದ್ಧವಾಗಲು ಸಹಕಾರಿಯಾದುದು. ಯಾವುದು ಶುದ್ಧ ಚಿಂತನೆಗೆ ಪೋಷಕವೋ ಅದು ಮಡಿ. ಯಾವುದು ಮನಸ್ಸನ್ನು ಕಲುಷಿತಗೊಳಿಸುತ್ತದೋ ಅದು ಮೈಲಿಗೆ]. ಶ್ರೀಕೃಷ್ಣ ಗೀತೆಯಲ್ಲಿ ಧ್ಯಾನದ ಪೂರ್ವತಯಾರಿ ಕುರಿತು ಹೀಗೆ ಹೇಳಿದ್ದಾನೆ:  ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ । ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್ (೬-೧೧) –ನಿರ್ಮಲವಾದ ತಾಣದಲ್ಲಿ, ಹುಲ್ಲಿನ/ದರ್ಬೆಯ ಚಾಪೆ/ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬಾ ಎತ್ತರವೂ ಅಲ್ಲದ, ತೀರಾ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಿಕೊಳ್ಳಬೇಕು ಎಂದಿದ್ದಾನೆ ಶ್ರೀಕೃಷ್ಣ.

ನೆಟ್ಟಗೆ ಕುಳಿತು, ಉಸಿರಾಟ ನಿಯಂತ್ರಣ ಮಾಡಿದ ನಂತರ ‘ಹೃದೀಂದ್ರಿಯಾಣಿ ಮನಸಾ ಸನ್ನಿವೇಶ್ಯ- ಮನಸ್ಸು ಮತ್ತು ಇಂದ್ರಿಯಗಳನ್ನು ‘ಹೃದಿ’ಯಲ್ಲಿ ನೆಲೆಗೊಳಿಸಬೇಕು ಎಂದಿದ್ದಾರೆ ಋಷಿಗಳು. ಇಲ್ಲಿ ಹೃದಿ ಎನ್ನುವ ಪದಕ್ಕೆ ಕೆಲವರು ನೇರವಾಗಿ ಹೃದಯ ಎಂದು ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವಿಕವಾಗಿ ನಮ್ಮ ಸಮಸ್ತ ಇಂದ್ರಿಯಗಳ ಮೂಲಸ್ಥಾನ ಜೀವದ ಸೂಕ್ಷ್ಮಶರೀರ. ಈ ಸೂಕ್ಷ್ಮಶರೀರ ಇರುವುದೇ ಹೃದಯದಲ್ಲಿ. ಆದ್ದರಿಂದ ಇಲ್ಲಿ ಹೃದಿ ಎಂದರೆ ಹೃದಯ ಅಲ್ಲ. ‘ಹರತೀತಿ ಹೃತ್’ ಅಂದರೆ-  ಎಲ್ಲವನ್ನೂ ಸಂಹಾರ ಮಾಡುವ(ಸಮಸ್ತ ದೋಷಗಳನ್ನು  ಪರಿಹಾರ ಮಾಡುವ) ಭಗವಂತ ಎಂದರ್ಥ. ‘ಹೃದಯಂ ಬ್ರಹ್ಮೇತ್ಯಾರುಣೇಯಃ’ (ಐತರೇಯ ಆರಣ್ಯಕ ೨.೧.೪). ಭಗವಂತನಿಗೆ ‘ಹೃದಯಂ’ ಎಂದು ಹೆಸರು. ಮನಸ್ಸು ಏಕಾಗ್ರವಾಗುವುದಕ್ಕೆ ಬಾಧಕವಾದ ಎಲ್ಲಾ ಸಂಗತಿಗಳನ್ನು ಪರಿಹಾರಮಾಡಿ, ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವ ಭಗವಂತನಲ್ಲಿ ನಾವು ನಮ್ಮ ಮನಸ್ಸನ್ನು ಹಾಗೂ ಇಂದ್ರಿಯಗಳನ್ನು  ನೆಲೆಗೊಳಿಸಬೇಕು. ನಮ್ಮ ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂದೆ ಸರಿಸಿ ಅಂತರ್ಮುಖವಾಗಿಸಬೇಕು. ಇದನ್ನು ಯೋಗದಲ್ಲಿ ‘ಪ್ರತ್ಯಾಹಾರ’ ಎನ್ನುತ್ತಾರೆ.

ಇಂದ್ರಿಯಗಳನ್ನು ಅಂತರ್ಮುಖಗೊಳಿಸಿದ ತಕ್ಷಣ ಏಕಾಗ್ರತೆ ಸಿಗುವುದಿಲ್ಲ. ಏಕೆಂದರೆ  ಮನಸ್ಸಿನಲ್ಲಿ ಹಿಂದೆ ನಾವು ತುಂಬಿಸಿಟ್ಟಿರುವ ಬೇಡವಾದ ಸಾವಿರಾರು ಕೆಟ್ಟ ಚಿಂತನೆಗಳಿರುತ್ತವೆ.  ಇದನ್ನು ಇಲ್ಲಿ ‘ಸ್ರೋತಸ್ಸು’ಗಳು ಎಂದಿದ್ದಾರೆ. ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಭಾವನೆಗಳನ್ನು ಇನ್ನೊಬ್ಬರಿಗೆ ಓದಲು ಸಾಧ್ಯವಾದರೆ ಅದು ಭಯಾನಕ. ಅಂತಹ ಕೊಚ್ಚೆನೀರಿನ ಪ್ರವಾಹ ನಮ್ಮೊಳಗಿರುತ್ತದೆ. ಅಂತಹ ಪ್ರವಾಹವನ್ನು ಓಂಕಾರವೆಂಬ ದೋಣಿಯಿಂದ ದಾಟು ಎಂದಿದ್ದಾರೆ ಋಷಿಗಳು. ಉಪನಿಷತ್ತಿನಲ್ಲಿ ಹೇಳುವಂತೆ 'ಪ್ಲವಾಹ್ಯೇತೇ ಅದೃಢಾಃ ಯಜ್ಞರೂಪಾಃ' (ಮುಂಡಕ) ಇಡೀ ಜೀವಮಾನ ಯಜ್ಞಮಾಡಿದರೂ ಕೂಡಾ  ಈ ಸ್ರೋತಸ್ಸನ್ನು ದಾಟುವುದು ಸಾಧ್ಯವಿಲ್ಲ. ಪ್ರಣವದ ಮುಂದೆ ಇತರ ದೋಣಿಗಳು ತೂತುಬಿದ್ದ ದೋಣಿಗಳೆನಿಸುತ್ತವೆ. ಅವು ಹುಚ್ಚು ಪ್ರವಾಹದಲ್ಲಿ ಕೊಚ್ಚಿ ಮುಳುಗಿ ಹೋಗುತ್ತವೆ. ಆದ್ದರಿಂದ ಅಂತಹ ಭಯಂಕರವಾದ ಪ್ರವಾಹದ ಮುಂದೆ, ಎಲ್ಲಾ ಬಿರುಗಾಳಿ ಹೆದ್ದೆರೆಗಳನ್ನು ಎದುರಿಸಿ ಸಾಗಬಲ್ಲ ದೊಡ್ಡ(ಬ್ರಹ್ಮ) ದೋಣಿ(ಉಡುಪ) ಈ ಓಂಕಾರದ ದೋಣಿ.

ಓಂಕಾರದ ಕುರಿತು ವಿವರವಾಗಿ ಈಗಾಗಲೇ ಒಂದನೇ ಅಧ್ಯಾಯದ ಪರಿಶಿಷ್ಠದಲ್ಲಿ ನಾವು ನೋಡಿದ್ದೇವೆ. ವಾಙ್ಮಯದ ಬೀಜಾಕ್ಷರವಾಗಿರುವ ಓಂಕಾರವನ್ನು[4]  ಅದರ ಅಷ್ಟಾಕ್ಷರದ ನಾದಕ್ರಮದಲ್ಲೇ  ಉಚ್ಚರಿಸಬೇಕು. ಮೊದಲು ‘ಅ, ಉ ಹಾಗೂ ಮ-ಕಾರ. ನಂತರ ಮ್ss(ನಾದ ಅಥವಾ ಹಿಂಕಾರ). ನಾದದ ಕೊನೆಯ ಮಜಲು ‘ಬಿಂದು’, ಆನಂತರ ನಾದತರಂಗ ಬಿಂದುವಾಗಿಯೂ ಕೇಳಿಸದ ಅವ್ಯಕ್ತವಾದ ‘ಕಲೆ’. ಈ ಅವ್ಯಕ್ತವಾದ ಕಂಪನದ ನಿಲುಗಡೆಯ ಹಂತ ‘ಶಾಂತ’. ಇದು ಕಲೆಯಿಂದ ಆಚೆಗಿನ, ಕಲೆಗಿಂತಲೂ ಸೂಕ್ಷ್ಮವಾದ ಸ್ವರವಾದ್ದರಿಂದ ಇದನ್ನು ಉಪನಿಷತ್ತು ‘ಕಲಾತೀತ ಎಂದು ಕರೆಯಿತು. ಶಾಂತವಾದ ನಾದ ತರಂಗದ ಕೊನೆಯ ನಿಲುಗಡೆ ಅತಿಶಾಂತ. ಇಲ್ಲಿ ನಾದದ ಅಲೆಗಳು ಕೊನೆಗೊಳ್ಳುತ್ತವೆ. ಇದು ಶಾಂತಕ್ಕಿಂತಲೂ ಆಚೆಗಿನ ಸೂಕ್ಷ್ಮಸ್ಥಿತಿಯಾದ್ದರಿಂದ ಇದನ್ನು ಉಪನಿಷತ್ತು ‘ತತ್ಪರ ಎಂದು ಕರೆದಿದೆ. ಇದು ಓಂಕಾರ ಉಚ್ಚಾರದ ಕ್ರಮ. ಹೀಗೆ ಪ್ರಣವದ ದೋಣಿಯಲ್ಲಿ ಕುಳಿತು, ಭಯಂಕರವಾದ ಸ್ರೋತಸ್ಸಿನ ಪ್ರವಾಹವನ್ನು ದಾಟಿ, ಅನಾಯಾಸವಾಗಿ ಭಗವಂತನ ನಾಡನ್ನು ನಾವು ಪ್ರವೇಶ ಮಾಡಬಹುದು.

   

ಪ್ರಾಣಾನ್ ಪ್ರಪೀಡ್ಯೇಹ ಸಂಯುಕ್ತಚೇಷ್ಟಃ  ಕ್ಷೀಣೇ ಪ್ರಾಣೇ ನಾಸಿಕಯೋಚ್ಛ್ವಸೀತ ।

ದುಷ್ಟಾಶ್ವಯುಕ್ತಮಿವ ವಾಹಮೇನಂ ವಿದ್ವಾನ್ ಮನೋ ಧಾರಯೇತಾಪ್ರಮತ್ತಃ ೦೨-೦೯

 

ಇಲ್ಲಿ ಪ್ರಾಣಾಯಾಮದ[5] ಕುರಿತಾದ ವಿವರಣೆಯನ್ನು ಕಾಣುತ್ತೇವೆ. ಸರಿಯಾದ ಆಸನದಲ್ಲಿ ಕುಳಿತು ದೇಹ ಸ್ಥಿರವಾದಮೇಲೆ ನಿಧಾನವಾಗಿ ವಾಯುವನ್ನು ನಾಸಿಕದ ಮೂಲಕ  ಒಳಗೆ ತೆಗೆದುಕೊಂಡು(ಪೂರಕ), ನಂತರ  ಉಸಿರನ್ನು ಸ್ಥಗನಗೊಳಿಸಬೇಕು(ಕುಂಭಕ). ಈ ರೀತಿ ಮಾಡುವಾಗ ದೇಹಕ್ಕೆ ಬಾಧಕವಾಗದಂತೆ ಎಷ್ಟು ಹೊತ್ತು ಸ್ಥಗನ ಮಾಡಲು ಸಾಧ್ಯವೋ ಅಷ್ಟು ಹೊತ್ತು  ಮಾಡಿ, ನಂತರ ಮೆಲ್ಲನೆ ಉಸಿರನ್ನು ನಾಸಿಕದಿಂದ  ಹೊರಬಿಡಬೇಕು(ರೇಚಕ). ಈ ರೀತಿ ಪೂರಕ-ಕುಂಭಕ-ರೇಚಕಗಳನ್ನು  ಪುನರಾವರ್ತನೆ ಮಾಡಬೇಕು.

ನಮ್ಮ ಶರೀರವೆಂಬ ಗಾಡಿಗೆ ಇಂದ್ರಿಯಗಳೇ ಕುದುರೆಗಳು.  ಹೇಗೆ ತರಬೇತಿ ಇಲ್ಲದ, ಕಡಿವಾಣವಿಲ್ಲದ, ಕಣ್ಣಪಟ್ಟಿ ಕಟ್ಟಿಲ್ಲದ  ಕುದುರೆಗಳು ಗಾಡಿಯನ್ನು ಹುಚ್ಚುಹುಚ್ಚಾಗಿ  ಎಲ್ಲೆಲ್ಲೋ ಎಳೆದುಕೊಂಡು ಹೋಗುತ್ತವೋ, ಹಾಗೇ ನಮ್ಮ ಇಂದ್ರಿಯಗಳು.  ನಾವು ನಮ್ಮ ಇಂದ್ರಿಯಗಳನ್ನು ಮನಸ್ಸೆಂಬ ಕಡಿವಾಣದಿಂದ ನಿಯಂತ್ರಿಸಿ, ಅವು ನಮ್ಮ ಮಾತನ್ನು ಕೇಳುವಂತೆ ನಿಯಂತ್ರಿಸಬೇಕು. ಇದು ಬಹಳ ಕಷ್ಟದ ಕೆಲಸವಾದರೂ ಕೂಡಾ ಅಸಾಧ್ಯವಾದ ಕೆಲಸವಲ್ಲ. ಇದನ್ನು ಸಾಧಿಸಲು ನಿರಂತರ ಅಭ್ಯಾಸಬೇಕು ಅಷ್ಟೇ. ಇದನ್ನೇ ಶ್ರೀಕೃಷ್ಣ ‘.. ಅಭ್ಯಾಸೇನ ತು ಕೌಂತೇಯ..’(ಭಗವದ್ಗೀತೆ- ೬.೩೫) ಎಂದಿರುವುದು. ಒಂದು ವೇಳೆ ಹಿಂದಿನ ಜನ್ಮದಲ್ಲಿ ಅಭ್ಯಾಸ ಮಾಡಿದ್ದಿದ್ದರೆ ಈ ಜನ್ಮದಲ್ಲಿ ಬಹಳ ಬೇಗ ಏಕಾಗ್ರತೆ ಬರುತ್ತದೆ. ಅಂದರೆ ಹಿಂದಿನ ಜನ್ಮದಲ್ಲಿ ಎಷ್ಟು ಕಲಿತಿದ್ದೆವೋ ಅಲ್ಲಿಂದಲೇ ಈ ಜನ್ಮದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ‘ನೇಹಾಭಿಕ್ರಮನಾಶೋSಸ್ತಿ...’(ಭಗವದ್ಗೀತೆ-೨.೪೦). ನಮ್ಮ ಸಾಧನೆ ಎಂದೂ ವ್ಯರ್ಥವಾಗುವುದಿಲ್ಲ. ಆದ್ದರಿಂದ ನಿರಾಶರಾಗದೇ ನಿರಂತರ ಅಭ್ಯಾಸ ಮಾಡಬೇಕು. ಈ ರೀತಿ ಅಭ್ಯಾಸಮಾಡಿ, ಇಂದ್ರಿಯಗಳನ್ನು ನಿಗ್ರಹಮಾಡಿ, ಅವುಗಳನ್ನು ನಮ್ಮ ವಶದಲ್ಲಿಟ್ಟುಕೊಳ್ಳಬೇಕು(ಜಿತೇಂದ್ರಿಯರಾಗಬೇಕು).  ಸಾಮಾನ್ಯವಾಗಿ ನಾವು ಬದುಕುವುದು ಇಂದ್ರಿಯಗಳ ದಾಸರಾಗಿ ಹೊರತು ಇಂದ್ರಿಯಗಳನ್ನು ನಾವು ಗೆದ್ದಿರುವುದಿಲ್ಲ. ಅದಕ್ಕಾಗಿ ಅಧ್ಯಾತ್ಮಸಾಧನೆಯಲ್ಲಿ ಇಂದ್ರಿಯನಿಗ್ರಹ ಅತ್ಯಂತ ಪ್ರಮುಖವಾದುದು.

ಪ್ರಾಣಾಯಾಮದಿಂದ ಪ್ರಾಣಮಯಕೋಶವನ್ನು  ಸ್ಥಿರಗೊಳಿಸಿ ನಂತರ ಮನೋಮಯಕೋಶವನ್ನು ನಿಗ್ರಹಿಸಬೇಕು.  ಮನೋಮಯಕೋಶದಲ್ಲಿ ಮನಸ್ಸು-ಬುದ್ಧಿ-ಅಹಂಕಾರ ಎನ್ನುವ ಮೂರು ಪದರಗಳಿವೆ. ಮನಸ್ಸಿನಲ್ಲಿ ಬರುವ ಬೇಡದ ಬಯಕೆಗಳು, ಬುದ್ಧಿಯಲ್ಲಿರುವ ಭೌದ್ಧಿಕ ಸಂಶಯ ಮತ್ತು ‘ನಾನು’ ಎನ್ನುವ ಅಹಂಕಾರ(ego) ಇವುಗಳಿಗೆ ನಾವು ಅಭ್ಯಾಸ ಮುಖೇನ ಕಡಿವಾಣ ಹಾಕಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಯಮ-ನಿಯಮಗಳನ್ನು[6] ಬದುಕಿನಲ್ಲಿ ರೂಢಿಸಿಕೊಂಡು, ಆಸನಬದ್ಧವಾಗಿ ಕುಳಿತುಕೊಳ್ಳಲು ಕಲಿತು, ಪ್ರಾಣಾಯಾಮದಿಂದ ಇಂದ್ರಿಯ ಹಾಗೂ ಮನಸ್ಸನ್ನು ಅಂತರ್ಮುಖಗೊಳಿಸಿ, ಪ್ರಣವ-ಜಪವೆಂಬ ದೋಣಿಯ ಮುಖೇನ ನಾವು ಪರಮಾತ್ಮನನ್ನು ಸೇರಬಹುದು.       

 

ಲಘುತ್ವಮಾರೋಗ್ಯಮಲೋಲುಪತ್ವಂ ವರ್ಣ್ಣಪ್ರಸಾದಂ ಸ್ವರಸೌಷ್ಠವಂ ಚ ।

ಗನ್ದಃ  ಶುಭೋ ಮೂತ್ರಪುರೀಷಮಲ್ಪಂ ಯೋಗಪ್ರವೃತ್ತಿಂ ಪ್ರಥಮಾಂ ವದನ್ತಿ ॥೦೨.೧೩॥

 

ಯೋಗ ಪ್ರವೃತ್ತಿಯಿಂದ ನಮ್ಮ ಶರೀರದಮೇಲೆ ಆಗುವ ಪರಿಣಾಮಗಳು ಅಥವಾ ನಮಗೆ ಕಾಣುವ ಚಿಹ್ನೆಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

೧. ಲಘುತ್ವ: ಯೋಗ ಪ್ರವೃತ್ತಿಯಿಂದ ನಮ್ಮ ದೇಹ ಹಗುರವಾಗಿ ಚುರುಕುತನವನ್ನು ಪಡೆಯುತ್ತದೆ. ಸಾಮಾನ್ಯವಾಗಿ ಪ್ರಾಣಿಗಳಿಗೆ ಈ ರೀತಿಯ ಚುರುಕುತನ ದೈವೀದತ್ತವಾಗಿ ಬಂದಿರುತ್ತದೆ. ಉದಾಹರಣೆಗೆ ಬೆಕ್ಕು-ಚಿರತೆಯಂತಹ ಪ್ರಾಣಿಗಳಲ್ಲಿ  ಚುರುಕುತನ ಬಹಳವಾಗಿ ಕಾಣಸಿಗುತ್ತದೆ. ಯೋಗ ಪ್ರವೃತ್ತಿಯಲ್ಲಿ ನಾವು ಲಘುತ್ವದ  ಅನುಭವವನ್ನು ಪಡೆಯುತ್ತೇವೆ.

೨. ಆರೋಗ್ಯ: ಯೋಗ ಪ್ರವೃತ್ತಿಯಿಂದ ದೇಹದಲ್ಲಿ ಪ್ರಾಣಶಕ್ತಿ  ಹೆಚ್ಚುತ್ತದೆ ಮತ್ತು ಅದರಿಂದ ಯಾವುದೇ ರೋಗ ನಮ್ಮನ್ನು ಬಾಧಿಸುವುದಿಲ್ಲ. ಪ್ರಾಣಶಕ್ತಿ ಇರುವವರ ಅಂಗೈ ಬಿಸಿಯಾಗಿರುತ್ತದೆ ಮತ್ತು ಅಂತವರು ತಮ್ಮ ಪ್ರಾಣಶಕ್ತಿಯಿಂದ(Touch Heal) ಇನ್ನೊಬ್ಬರ ರೋಗವನ್ನು ಗುಣಪಡಿಸಬಲ್ಲರು ಕೂಡಾ. ಎರಡು ಅಂಗೈಗಳನ್ನು ಹತ್ತಿರ ತಂದಾಗ ಅಲ್ಲಿ ಬಿಸಿಯ ಅನುಭವವಾದರೆ ಆತನಲ್ಲಿ ಪ್ರಾಣಶಕ್ತಿ ಇದೆ ಎಂದರ್ಥ. ಕೈಯನ್ನು ಇನ್ನೊಬ್ಬರ ತಲೆಯಮೇಲೆ ಇಟ್ಟು ಆಶೀರ್ವದಿಸಿದಾಗ ಅಲ್ಲಿ ಪ್ರಾಣಶಕ್ತಿ ಹರಿಯುತ್ತದೆ.  ಪ್ರಾಣಶಕ್ತಿ ಇರುವ ವೈದ್ಯ ಕೊಡುವ ಮದ್ದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಪ್ರಾಣಶಕ್ತಿ ಇಲ್ಲದವರ ಅಂಗೈ ತಣ್ಣಗಿರುತ್ತದೆ ಅಥವಾ ಬೆವರುತ್ತದೆ. ಧೂಮಪಾನ ಹಾಗು ಮದ್ಯಪಾನದಿಂದ  ಪ್ರಾಣಶಕ್ತಿ ಕಡಿಮೆಯಾಗುತ್ತದೆ.

೩. ಅಲೋಲುಪತ್ವಂ : ಮನಸ್ಸಿನ ಚಾಪಲ್ಯ ಕಡಿಮೆಯಾಗಿ ಮನಸ್ಸು ಗಟ್ಟಿಗೊಳ್ಳುತ್ತದೆ

೪. ವರ್ಣ್ಣಪ್ರಸಾದಃ :  ಮೈಯ ಬಣ್ಣ ಅಥವಾ ಚರ್ಮದ ಕಾಂತಿ ಹೆಚ್ಚುತ್ತದೆ.

೫. ಸ್ವರಸೌಷ್ಠವಂ : ಯೋಗಪ್ರವೃತ್ತಿಯಿಂದ ಮಾತಿನಲ್ಲಿ ಸ್ಪಷ್ಟತೆ ಬರುತ್ತದೆ. ಹೆಚ್ಚಿನವರಿಗೆ ಅಲ್ಪಪ್ರಾಣ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಛಾರ ಮಾಡಲು ಬರುವುದಿಲ್ಲ. ಆದರೆ ಯೋಗ ಪ್ರವೃತ್ತಿಯಿಂದ ಮಾತು ಶುದ್ಧವಾಗುತ್ತದೆ ಮತ್ತು ಶ್ರುತಿಬದ್ಧವಾಗುತ್ತದೆ. ಉದಾಹರಣೆಗೆ  ‘ಭ್ರಮದಭಿಭವ-ಭೂಭೃದ್-ಭೂರಿ-ಭೂಭಾರ-ಸದ್-ಭಿದ್-ಭಿದನವ-ವಿಭವ-ಭ್ರೂ-ವಿಭ್ರಮಾದಭ್ರ-ಶುಭ್ರ’ ಇದು ನರಸಿಂಹ ಸ್ತುತಿಯ ಒಂದು ಸಾಲು. ಇಂತಹ ಯಾವುದೇ ಕ್ಲಿಷ್ಟವಾದ ಸ್ತುತಿಯನ್ನೂ ಕೂಡಾ ಒಂದೇ ಉಸಿರಿನಲ್ಲಿ ಅಲ್ಪಪ್ರಾಣ-ಮಹಾಪ್ರಾಣಗಳನ್ನು ಸ್ಪಷ್ಟವಾಗಿ  ಶ್ರುತಿಬದ್ಧವಾಗಿ ಉಚ್ಛರಿಸುವ ಸಾಮರ್ಥ್ಯ ಯೋಗಪ್ರವೃತ್ತಿಯಿಂದ ಬೆಳೆಯುತ್ತದೆ.

೫. ಶುಭಗಂಧಃ : ಮೈಯ ವಾಸನೆ ನಾಶವಾಗುತ್ತದೆ ಹಾಗೂ ಶರೀರ ಸುವಾಸನೆಯನ್ನು ಸೂಸಲಾರಂಭಿಸುತ್ತದೆ.

೬. ಮೂತ್ರಪುರೀಷಮಲ್ಪಂ : ಮಲಮೂತ್ರಗಳ ವಿಸರ್ಜನಾ ಪ್ರಮಾಣ ಕಡಿಮೆಯಾಗುತ್ತದೆ. (ಯೋಗ ಪ್ರವೃತ್ತಿಯಿಂದ ತಿನ್ನುವುದೂ ಕಡಿಮೆಯಾಗಿ ಸ್ವಾಭಾವಿಕವಾಗಿ ವಿಸರ್ಜನೆಯೂ ಕಡಿಮೆಯಾಗುತ್ತದೆ)

ಇವು ಯೋಗಸಿದ್ಧಿಯ ದಾರಿಯಲ್ಲಿ ಕಾಣುವ ಪ್ರಮುಖವಾದ ಆರು ಗುಣಲಕ್ಷಣಗಳು.

 

ಏಷ ಹ ದೇವಃ[7] ಪ್ರದಿಶೋಽನು ಸರ್ವಾಃ ಪೂರ್ವೋ ಹ ಜಾತಃ ಸ ಉ ಗರ್ಬ್ಭೇ ಅನ್ತಃ[8]

ಸ ಏವ ಜಾತಃ ಸ ಜನಿಷ್ಯಮಾಣಃ  ಪ್ರತ್ಯಙ್ಜನಾಸ್ತಿಷ್ಠತಿ[9] ಸರ್ವತೋಮುಖಃ ॥೦೨-೧೬

 

ಯೋಗ-ಪ್ರಾಣಾಯಾಮ-ಧ್ಯಾನ ಎಲ್ಲವನ್ನೂ ಕೂಡಾ ಸಾಧನೆ ಮಾಡುವುದು ಭಗವಂತನನ್ನು ಕಾಣುವುದಕ್ಕಾಗಿ.  ಅದೇ ನಮ್ಮ ಅಖಂಡ ಬಯಕೆ. ಈ ರೀತಿ ನಿರಂತರ ಸಾಧನೆಮಾಡಿದಾಗ  ಭಗವಂತನ ಸಾಕ್ಷಾತ್ಕಾರವಾದರೆ ಆ ಅನುಭವ ಹೇಗಿರುತ್ತದೆ ಎನ್ನುವುದನ್ನು ಧ್ಯಾನದಲ್ಲಿ ಭಗವಂತನನ್ನು ಹತ್ತಿರದಲ್ಲಿ ಕಂಡ ಋಷಿಗಳು ಇಲ್ಲಿ ವರ್ಣಿಸಿದ್ದಾರೆ.  ‘ಸರ್ವೋತ್ಕ್ರಷ್ಟನಾದ, ಎಲ್ಲೆಡೆ ತುಂಬಿರುವ ಭಗವಂತ ಇಲ್ಲೇ ನನ್ನ  ಕೈಗೆಟಕುವಷ್ಟು ಹತ್ತಿರದಲ್ಲಿ ನನಗೆ ಕಾಣುತ್ತಿದ್ದಾನೆ. ಎಲ್ಲಕ್ಕಿಂತ ಮೊದಲಿದ್ದವನು, ಬ್ರಹ್ಮಾಂಡವನ್ನು ಸೃಷ್ಟಿಮಾಡಿ ಬ್ರಹ್ಮಾಂಡದ ಒಳಗೆ ನಿಂತವನು, ಇಡೀ ಬ್ರಹ್ಮಾಂಡವನ್ನು ತನ್ನ ಗರ್ಭದಲ್ಲಿ ಧರಿಸಿದವನು. ಅಷ್ಟೇ ಅಲ್ಲಾ, ಪ್ರತಿಯೊಬ್ಬ ಗರ್ಭಿಣಿ ತಾಯಿಯ ಉದರದಲ್ಲಿರುವ ಮಗುವಿನ ಅಂತರ್ಯಾಮಿಯಾಗಿ ಅವನು ಕುಳಿತಿದ್ದಾನೆ. ಎಂದೂ ಹುಟ್ಟದ ಆ ಭಗವಂತ ಪ್ರತಿಯೊಬ್ಬ ಗರ್ಭಿಣಿ ತಾಯಿಯಿಂದ ಹುಟ್ಟುತ್ತಿದ್ದಾನೆ, ಹಿಂದೆ ಹುಟ್ಟಿದ ಮಗುವಿನ ತಾಯಿಯ ಗರ್ಭದಲ್ಲಿದ್ದವನು, ಮುಂದೆ ಹುಟ್ಟಬೇಕಾಗಿರುವ ಮಗುವಿನ ತಾಯಿಯ ಗರ್ಭದಲ್ಲಿರುವವವನೂ  ಎಲ್ಲವೂ ಅವನೇ. ಓ ಲೋಕದ ಜನರೇ, ಜಿಜ್ಞಾಸುಗಳೇ, ಅನಂತ ರೂಪಗಳುಳ್ಳ, ಎಲ್ಲಾ ಕಡೆ ಮುಖಗಳುಳ್ಳ, ವಿಶ್ವದೆಲ್ಲೆಡೆ ತುಂಬಿರುವ ಭಗವಂತ ನನ್ನ ಕಣ್ಮುಂದೆ ನಿಂತಿದ್ದಾನೆ. ಇದು ಭಗವಂತನನ್ನು ಧ್ಯಾನದಲ್ಲಿ ಕಂಡ ಋಷಿಯ ಹರ್ಷೋದ್ಗಾರ.

ಐತರೇಯ ಉಪನಿಷತ್ತಿನಲ್ಲಿ ಅದ್ಭುತವಾದ ಮಾತೊಂದಿದೆ. ‘ಹೆಣ್ಣು ಒಂದು ದೇವಾಲಯ, ಹೆಣ್ಣಿನ ಗರ್ಭಕೋಶವೇ ಗರ್ಭಗುಡಿ, ಅದರೊಳಗೆ ಬೆಳೆಯುತ್ತಿರುವ ಮಗುವಿನೊಳಗೆ ಬಿಂಬ ರೂಪದಲ್ಲಿ ಭಗವಂತನಿದ್ದಾನೆ ಎನ್ನುವ ಮಾತು. ಇದಕ್ಕಾಗಿ ತಾಯಿಯ ದೇಹದಲ್ಲಿ ಮಗು ಬೆಳೆಯುವ ಸ್ಥಳಕ್ಕೂ, ದೇವಾಲಯದಲ್ಲಿ ಪ್ರತಿಮೆ ಇರುವ ಸ್ಥಳಕ್ಕೂ ‘ಗರ್ಭ ಎನ್ನುವ ಒಂದೇ ಶಬ್ದ ಬಳಕೆಯಾಗಿರುವುದು. ಆದ್ದರಿಂದ ‘ಹೇಗೆ ದೇವರ ಸ್ಥಾನ ಗೌರವಿಸಲ್ಪಡುತ್ತದೋ, ಹಾಗೇ ಗರ್ಭಿಣಿ ಹೆಣ್ಣನ್ನು ನೋಡು ಎನ್ನುತ್ತಾರೆ ಉಪನಿಷತ್ಕಾರರು. ಹೀಗೆ ಎಲ್ಲಾ ಗರ್ಭಿಣಿ ಹೆಣ್ಣಿನೊಳಗಿರುವ ಪುಟ್ಟ ಮಗುವಿನ ಅಂತರ್ಯಾಮಿಯಾಗಿ ಭಗವಂತ ಕುಳಿತಿದ್ದಾನೆ.  ಅಜಾಯ’ಮಾನೋ ಬಹುಧಾ ವಿಜಾ’ಯತೇ’ – ಎಂದೂ ಹುಟ್ಟದ ಭಗವಂತ ಎಲ್ಲಾ ತಾಯಿಯ ಹೊಟ್ಟೆಯಿಂದ ನಿರಂತರ ಹುಟ್ಟಿ ಬರುತ್ತಿರುತ್ತಾನೆ!

 

ಯೋ ದೇವೋ ಅಗ್ನೌ ಯೋ ಅಪ್ಸು ಯೋ ವಿಶ್ವಂ ಭುವನಮಾವಿವೇಶ ।

ಯ ಓಷಧೀಷು ಯೋ ವನಸ್ಪತಿಷು  ತಸ್ಮೈ ದೇವಾಯ ನಮೋ ನಮಃ ೦೨.೧೭

 

ಭಗವಂತನನ್ನು ಕಂಡಾಗ ಸಂತೋಷದಲ್ಲಿ ಹೊರಹೊಮ್ಮಿದ ಸ್ತೋತ್ರ ಇದಾಗಿದೆ: ‘ಜಲರೂಪದ ರೇತಸ್ಸಿನಲ್ಲಿ ಹೆಣ್ಣಿನ ದೇಹವನ್ನು ಜೀವ ಪ್ರವೇಶಿಸುವಂತೆ ಮಾಡಿ, ತಾಯಿಯ ಗರ್ಭದಲ್ಲಿ ನಿಂತು ಆ ಜೀವನಿಗೆ ರೂಪಕೊಟ್ಟು ಬೆಳೆಸಿ, ಆ ದೇಹದಲ್ಲಿ ಪ್ರಾಣಾಗ್ನಿರೂಪನಾಗಿ ನಿಂತು, ಭೂಮಿಯಲ್ಲಿ ಹುಟ್ಟಿದಮೇಲೆ ಆ ಜೀವನಿಗೆ(ಭೋಕ್ತನಿಗೆ) ಅಗತ್ಯವಿರುವ ಓಷಧಿ-ವನಸ್ಪತಿಗಳೆಂಬ ಜೀವಗಳನ್ನು  ಸೃಷ್ಟಿಸಿ(ಭೋಗ್ಯ), ಬದುಕನ್ನು ನೀಡುವ, ಹೀಗೆ ಲೀಲಾಮಾತ್ರದಿಂದ ಎಲ್ಲವನ್ನೂ ಸೃಷ್ಟಿಮಾಡುವ, ಎಲ್ಲಕ್ಕಿಂತಲೂ ಹಿರಿದಾದ, ಎಲ್ಲಾ ಗುಣಗಳಿಂದಲೂ ತುಂಬಿರುವ, ಎಲ್ಲಾ ಶಬ್ದಗಳಿಂದಲೂ ವಾಚ್ಯನಾದ, ಜಗತ್ತಿನ ಎಲ್ಲಾ ಬೆಳಕುಗಳಿಗೂ ಬೆಳಕನ್ನು ನೀಡುವ, ಸತ್ಯಸಂಕಲ್ಪ, ಸರ್ವಗತ, ಸರ್ವಜ್ಞನಾದ ಭಗವಂತನಿಗೆ ನಿರಂತರ ಪ್ರಣಾಮ.        

ಶರೀರದಲ್ಲಿ ಭಗವಂತ ನೆಲೆಸಿದ್ದರೆ ಮಾತ್ರ ಆ ಶರೀರಕ್ಕೆ ನೆಲೆ. ಭಗವಂತ ಹೊರ ನಡೆದರೆ ದೇಹ ಹೆಣವಾಗುತ್ತದೆ. ದೇಹದಲ್ಲಿ ಪ್ರಾಣಾಗ್ನಿಯಾಗಿ ಜೀವಧಾರಣೆ ಮಾಡಿ ಜೀವಕಳೆ ತುಂಬುವವನು ಭಗವಂತ. ಷಟ್-ಪ್ರಶ್ನ ಉಪನಿಷತ್ತಿನಲ್ಲಿ(೪.೩) ಹೇಳುವಂತೆ- ‘ಪ್ರಾಣಾಗ್ರಯ ಏವೈತಸ್ಮಿನ್ ಪುರೇ ಜಾಗ್ರತಿ’  ದೇಹದಲ್ಲಿ ಪ್ರಾಣಾಗ್ನಿ ಇರುವುದರಿಂದ ಅಲ್ಲಿ ಉಷ್ಣತೆ ಇದೆ. ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ಪ್ರಾಣದೇವರ ಐದು ರೂಪಗಳಲ್ಲಿ ಸನ್ನಿಹಿತನಾಗಿ ನಮಗೆ ಪ್ರಾಣವಿತ್ತ ಆ ಭಗವಂತನಿಗೆ ನಮಸ್ಕಾರ.

ನಮ್ಮ ದೇಹರಚನೆಯನ್ನು ನೋಡಿದರೆ ಅದೊಂದು ವಿಸ್ಮಯ. ದೇಹದೊಳಗೆ ಪ್ರವೇಶಿಸುವ ಕೆಲವು  ಹನಿ ರೇತಸ್ಸು ಸುಂದರ ಮಗುವಾಗಿ ರೂಪಗೊಳ್ಳುತ್ತದೆ. ಆ ಜಲದಲ್ಲಿ ತುಂಬಿ,  ಜೀವನಿಗಾಗಿ ಸುಂದರವಾದ ದೇಹ ರಚನೆ ಮಾಡುವ ಆ ಭಗವಂತನಿಗೆ ನಮಸ್ಕಾರ.  

ಈ ನೆಲದಮೇಲೆ ಹುಟ್ಟಿದ ಜೀವನಿಗೆ ಬದುಕಲು ಬೇಕಾದ ಭೋಗ್ಯವನ್ನು ಸೃಷ್ಟಿ ಮಾಡಿ ಕೊಡುವವನೂ ಆ ಭಗವಂತ. ‘ಜೀವೋ ಜೀವಸ್ಯ ಜೀವನಮ್’ ಎನ್ನುವಂತೆ,  ಜೀವವನ್ನು ಸೃಷ್ಟಿಮಾಡುವ ಭಗವಂತ ಅದಕ್ಕೆ ಆಹಾರವಾಗಿ ಇನ್ನೊಂದು ಜೀವವನ್ನು ಸೃಷ್ಟಿ ಮಾಡುತ್ತಾನೆ. ಅದನ್ನೇ ಇಲ್ಲಿ ಓಷಧಿ-ವನಸ್ಪತಿಗಳು ಎಂದಿದ್ದಾರೆ. ಓಷಧಿ ಎಂದರೆ ನಮ್ಮ ದೇಹದಲ್ಲಿ ಉಷ್ಣತೆ ಇರುವಂತೆ ರಕ್ಷಣೆ ಮಾಡುವವು ಎಂದರ್ಥ.  ‘ಯಾವ ಗಿಡದ ಸಂತಾನವೇ ಅದಕ್ಕೆ ಸಾವಾಗುತ್ತದೋ ಅದು ಓಷಧಿ’. ಉದಾಹರಣೆಗೆ ಭತ್ತ, ಉದ್ದು, ಹೆಸರು ಮುಂತಾದ ದಾನ್ಯಗಳು. ಇವು ನಮಗೆ ತಿನ್ನಲು ಬೇಕಾದ ಕಾಳನ್ನು ಕೊಟ್ಟು ಸಾಯುತ್ತವೆ.  ಬಾಳೆ ಕೂಡಾ ಓಷಧಿ. ಮರಗಳನ್ನು ವನಸ್ಪತಿಗಳು ಎಂದು ಕರೆಯುತ್ತಾರೆ. ಇವು ಹಣ್ಣನ್ನು ಕೊಟ್ಟು ನಾಶವಾಗುವುದಿಲ್ಲ. ಉದಾಹರಣೆಗೆ ಮಾವು. ವನಸ್ಪತಿ ನಮಗೆ ಆಹಾರವಾಗಿಯೂ, ಬೇಯಿಸುವ ಸಾಧನವಾಗಿಯೂ(ಕಟ್ಟಿಗೆ),  ಮನೆ ಕಟ್ಟಲು ಉಪಕರಣವಾಗಿಯೂ ಸಹಾಯಕವಾಗಿದೆ. ಇವೆಲ್ಲವನ್ನೂ ನಮ್ಮ ಭೋಗಕ್ಕಾಗಿ ಸೃಷ್ಟಿಮಾಡಿ ನೀಡಿರುವ ಭಗವಂತನಿಗೆ ನಮಸ್ಕಾರ.

ಹಿಂದಿನ ಶ್ಲೋಕದಲ್ಲಿ ‘ಏಷ ಹಿ ದೇವಃ’ ಎಂದು ಹೇಳಿದ್ದು, ಇಲ್ಲಿ ‘ತಸ್ಮೈ ದೇವಾಯ’ ಎಂದು ಹೇಳಿರುವುದನ್ನು ನಾವು ಗಮನಿಸಬೇಕು. ಅಪರೋಕ್ಷ ಜ್ಞಾನಿಗೂ ಕೂಡಾ ದೇವರು ನಿರಂತರ ಕಣ್ಮುಂದೆ  ಕಾಣುವುದಿಲ್ಲ. ಅದೊಂದು ಮಿಂಚು(flash). ಈ ರೀತಿ ಕಾಣಿಸಿಕೊಂಡು ಕಾಣೆಯಾದ ದೇವರಿಗೆ ನಮಸ್ಕಾರ ಎನ್ನುವ ಅರ್ಥದಲ್ಲಿ ಇಲ್ಲಿ ‘ತಸ್ಮೈ’ ಪದ ಬಳಕೆಯಾಗಿದೆ.

ಸ್ತೋತ್ರದ ಕೊನೆಯಲ್ಲಿ ನಮೋ ನಮಃ ಎಂದು ಎರಡು ಬಾರಿ ನಮಸ್ಕಾರವನ್ನು ಹೇಳಲಾಗಿದೆ. ಇದು ಅಧ್ಯಾಯ ಕೊನೆಗೊಂಡಿತು ಎಂದು ಸೂಚಿಸುವುದರ ಜೊತೆಗೆ ನಮಸ್ಕಾರದ ನಿರಂತರತೆಯನ್ನೂ ಹೇಳುತ್ತದೆ. ಯಾಜ್ಞೀಯಮಂತ್ರೋಪನಿಷತ್ತಿನಲ್ಲಿ[10] ಹೇಳುವಂತೆ: ‘ಭೂ ಯಿಷ್ಠಾಂ ತೇ  ನಮಉಕ್ತಿಂ ವಿಧೇಮ’  ನಾವು ನಿನ್ನ ಮುಂದೆ ಏನು ಹೇಳುವುದು ? ಏನು ಕೇಳುವುದು? ನಿನ್ನ ಭೌಮರೂಪದ ಮುಂದೆ ನಾವೊಂದು ಅಣುಕಣವೂ ಅಲ್ಲ. ನಾವು ಮಾಡಿದ ಪಾಪಕರ್ಮಗಳು ನಮ್ಮನ್ನು ಇನ್ನಷ್ಟು ಅಲ್ಪರನ್ನಾಗಿ, ಇನ್ನಷ್ಟು ಸಣ್ಣವರನ್ನಾಗಿ ಮಾಡುತ್ತಿವೆ. ತಿಳಿದೋ ತಿಳಿಯದೆಯೋ ಮಾಡಿದ ಅಂತಹ ಪಾಪಕೃತ್ಯಗಳಿಂದ ಬಿಡುಗಡೆಗೊಳಿಸು. ಇನ್ನು ಮುಂದೆ ನಮ್ಮಿಂದ ಪಾಪಕೃತ್ಯ ನಡೆಯದಂತೆ ಅನುಗ್ರಹಿಸು. ನೀನು ನಮಗೆ ಮಾಡಿದ ಪರಮಾನುಗ್ರಹಕ್ಕೆ ಪ್ರತಿಯಾಗಿ ನಿನಗೆ ನಾವೇನು ಮಾಡಬಲ್ಲೆವು? ನಮ್ಮಿಂದ ಏನಾಗುತ್ತದೆ? ನೀನು ಇಟ್ಟಂತೆ ಇರುವವರು, ನೀನು ನಡೆಸಿದಂತೆ ನಡೆಯುವವರು ನಾವು. ನೀನು ತೋರಿದ ಈ ಕರುಣೆಗಾಗಿ,  ಈ ಪರಮಾನುಗ್ರಹಕ್ಕಾಗಿ ನಾವು ಭಕ್ತಿಯಿಂದ ತಲೆಬಾಗಿ  ನಿನಗೆ ‘ನಮೋನಮೋ’ ಎಂದು ಮಣಿಯುತ್ತಿದ್ದೇವೆ; ನೀನೇ ನುಡಿಸಿದ ನುಡಿಯನ್ನು ನಿನಗೆ ಸಮರ್ಪಿಸುತ್ತಿದ್ದೇವೆ -ಅಷ್ಟೇ.

 

 




[1] ಸೋಮಯಾಗಕ್ಕೆ ಹದಿನಾರು ಮಂದಿ ಋತ್ವಿಕ್ಕುಗಳನ್ನು ಅಶ್ವಲಾಯನರು ಉಲ್ಲೇಖಿಸುತ್ತಾರೆ: ‘ತಸ್ಯರ್ತ್ವಿಜಃ, ಜತ್ವಾರಸ್ತ್ರಿಪುರುಷಾಃ, ತಸ್ಯತಸ್ಯೋತ್ತರೇ ತ್ರಯಃ, ಹೋತಾ, ಮೈತ್ರಾವರುಣೋsಚ್ಛಾವಾಕೋ ಗ್ರಾವಸ್ತುತ್, ಅಧ್ವರ್ಯ್ಯುಃ, ಪ್ರತಿಪ್ರಸ್ಥಾತಾನೋಷ್ಟೋನ್ನೇತಾ, ಬ್ರಹ್ಮಾ, ಬ್ರಾಹ್ಮಣಾಚ್ಛಂಸ್ಯಗ್ನೀಧ್ರಃ  ಪೋತಾ,  ಉದ್ಗಾತಾ, ಪ್ರಸ್ತೋತಾ ಪ್ರತಿಹರ್ತಾ ಸುಬ್ರಹ್ಮಣ್ಯ ಇತಿ’ ಇದರ ಪ್ರಕಾರ ಋಗ್ವೇದದ ಋತ್ವಿಜರು ನಾಕು ಮಂದಿ: ಹೋತಾ(ಪ್ರಧಾನ ಋತ್ವಿಕ್)  ಹಾಗೂ ಮೈತ್ರಾವರುಣ, ಅಚ್ಛಾವಾಕ ಮತ್ತು ಗ್ರಾಮಸ್ತುತ್ ಎಂಬ ಮೂರು ಮಂದಿ ಸಹಾಯಕರು. ಯಜುರ್ವೇದದ ಋತ್ವಿಜರು ನಾಕು ಮಂದಿ: ಅಧ್ವರ್ಯು (ಪ್ರಧಾನ ಋತ್ವಿಕ್) ಹಾಗೂ ಪ್ರತಿಪ್ರಸ್ಠಾತೃ, ನೇಷ್ಟೈ ಮತ್ತು ಉನ್ನೇತೃ  ಎಂಬ ಮೂರು ಮಂದಿ ಸಹಾಯಕರು. ಸಾಮವೇದದ ಋತ್ವಿಜರು ನಾಕು ಮಂದಿ: ಉದ್ಗಾತೃ (ಪ್ರಧಾನ ಋತ್ವಿಕ್) ಹಾಗೂ ಪ್ರಸ್ತೋತೃ, ಪ್ರತಿಹರ್ತೃ ಮತ್ತು ಸುಬ್ರಹ್ಮಣ್ಯ ಎಂಬ ಮೂರು ಮಂದಿ ಸಹಾಯಕರು. ಅಥರ್ವವೇದದ ಋತ್ವಿಜರೂ ನಾಕು ಮಂದಿ: ಬ್ರಹ್ಮ(ಪ್ರಧಾನ ಋತ್ವಿಕ್) ಹಾಗೂ ಬ್ರಾಹ್ಮಣಾಚ್ಛಂಸಿ, ಅಗ್ನೀಧ್ರ ಮತ್ತು  ಪೋತೃ ಎಂಬ ಮೂರು ಮಂದಿ ಸಹಾಯಕರು. ಹೀಗೆ ಒಟ್ಟು ಹದಿನಾರು ಮಂದಿ.

[2] ಸೋಮಯಾಗ  ಸಾಮಾನ್ಯವಾಗಿ ಲೋಕಕಲ್ಯಾಣಕ್ಕಾಗಿ ಮಾಡುವ ಮಹಾಯಾಗ. ಅಲ್ಲಿ ಅಗ್ನಿಪ್ರತಿಷ್ಠೆ ಮಾಡಿ, ಅಶ್ವತ್ಥ ಹಾಗೂ ಇತರ ಸಮಿಧೆಗಳನ್ನು ಬಳಸಿ, ತುಪ್ಪ, ಸೋಮರಸ, ಇತ್ಯಾದಿ ಹವಿಸ್ಸುಗಳನ್ನು ಆಹುತಿ ಕೊಡುತ್ತಿದ್ದರು. ಹೀಗೆ ಮಾಡಿದಾಗ  ಅಗ್ನಿ ಏಳು ಬಣ್ಣಗಳಿಂದ ಪ್ರಜ್ವಲಿಸುತ್ತದೆ. ಅಗ್ನಿಯ ಏಳು ಬಣ್ಣಗಳನ್ನು, ಸೂರ್ಯಕಿರಣದ ಏಳು ಬಣ್ಣಗಳೊಂದಿಗೆ  ಸಂಕ್ರಾಂತಗೊಳಿಸಿ, ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞದ ಹಿಂದಿರುವ ವಿಜ್ಞಾನವಾಗಿತ್ತು. ಈ ಪ್ರಕ್ರಿಯೆಗೂ ನಮ್ಮ ದೇಹದಲ್ಲಿರುವ ಏಳು ಶಕ್ತಿಕೇಂದ್ರಗಳಿಗೂ ಸಂಬಂಧವಿದೆ ಎನ್ನುತ್ತಾರೆ.  ಸೋಮಯಾಗದಲ್ಲಿ ವಿಶೇಷವಾಗಿ ಸೋಮಲತೆಯ ರಸವನ್ನು ಬಳಸುತ್ತಿದ್ದರು. ಯಾವ ರೀತಿ ಕೆಲವು ಆಯುರ್ವೇದ ಔಷಧಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮದ್ಯಸಾರ ಇರುತ್ತದೋ ಹಾಗೇ,  ಸೋಮರಸದಲ್ಲೂ ಕೂಡಾ ಅಂತಹ ಅಂಶ ಇರುತ್ತದೆ. ಇಂದು ಈ ಸೋಮಲತೆಯ ಪರಿಚಯ ನಮಗಿಲ್ಲವಾಗಿದೆ. ಹಿಮಾಲಯದ ಸುಶೋಮಾ ನದಿಯ ದಡದಲ್ಲಿ ಸೋಮಲತೆ ಯಥೇಚ್ಛವಾಗಿ ಬೆಳೆಯುತ್ತಿತ್ತು ಎನ್ನಲಾಗುತ್ತದೆ. ಗಿಡಮೂಲಿಕೆಗಳ ಬಗ್ಗೆ ಅತ್ಯಂತ ಪರಿಚಯವಿದ್ದ ಪ್ರಾಚೀನರು, ಈ ಸೋಮರಸದ ಹಿಂದಿನ  ಅಮೂಲ್ಯ ಗುಣವನ್ನು ಗುರುತಿಸಿ, ಅದನ್ನು ಅಗ್ನಿಗೆ ಆಹುತಿಯಾಗಿ ಅರ್ಪಿಸುತ್ತಿದ್ದರು ಮತ್ತು ಪ್ರಸಾದರೂಪದಲ್ಲಿ ತಾವೂ ಸ್ವೀಕರಿಸುತ್ತಿದ್ದರು. ಸೋಮರಸ ಆರೋಗ್ಯಕ್ಕೆ ಪೂರಕವಾಗಿದ್ದು ಮನಸ್ಸನ್ನು ಆಹ್ಲಾದಗೊಳಿಸುತ್ತದೇ ಹೊರತು, ಅದು ಸುರ ಪಾನದಂತೆ ಮೈಮರೆಸುವುದಿಲ್ಲ. ಇದಕ್ಕಾಗಿಯೇ ಶಾಸ್ತ್ರಕಾರರು ‘ಸೋಮಂ ಪಿಭೇತ್ ಸುರಾಂ ನಪಿಬೇತ್’ ಎನ್ನುವ ಮಾತನ್ನು ಹೇಳಿರುವುದು.

 

[3]  ಪ್ರಾಣಾಯಾಮದ ಸಾಧಕರಿಗೆ ಅಭ್ಯಾಸದ ಸೌಕರ್ಯಕ್ಕಾಗಿ ಸುಲಭವಾದ ಮತ್ತು ಆರೋಗ್ಯಕರವಾದ ಇನ್ನೊಂದು ಆಸನವನ್ನು ಯೋಗಸೂತ್ರದಲ್ಲಿ ಹೇಳಲಾಗಿದೆ: ‘ಶವವಾಚ್ಚಾನ್ಯದಾಸನಮಾಸನಮ್   ಹೆಣದಂತೆ ನಿಶ್ಚಲವಾಗಿ ಅಂಗಾತ ಮಲಗಬೇಕು; ಕೈಕಾಲುಗಳನ್ನು ನೀಡಿ ಸಡಿಲಗೊಳಿಸಿಕೊಂಡು ಅಭ್ಯಾಸ ಮಾಡಬಹುದು.

[4] ಓಂಕಾರ ಜಪವನ್ನು ಎಲ್ಲರೂ ಮಾಡುವಂತಿಲ್ಲ. ಈ ಕುರಿತು ಈಗಾಗಲೇ ಅಧ್ಯಾಯ ಒಂದರ ಪರಿಶಿಷ್ಠದಲ್ಲಿ ವಿವರಿಸಲಾಗಿದೆ. ಆದ್ದರಿಂದ ಈ ಕುರಿತು ಸರಿಯಾಗಿ ತಿಳಿದು, ಗುರುಗಳ ಮಾರ್ಗದರ್ಶನ ಪಡೆದು ಮುಂದುವರಿಯಬೇಕು. ಓಂಕಾರ ಜಪವಷ್ಟೇ ಅಲ್ಲಾ, ಯಾವುದೇ ಮಂತ್ರ ಜಪ ಮಾಡಲು ಗುರುಗಳ ಮಾರ್ಗದರ್ಶನ ಅಗತ್ಯ.

ವಾಙ್ಮಯದ ಬೀಜಾಕ್ಷರವಾಗಿರುವ ಓಂಕಾರದ ಕುರಿತ ವಿಸ್ತೃತ ವಿವರಣೆಯನ್ನು ಓದುಗರು ಆಚಾರ್ಯರ ತಂತ್ರಸಾರ-ಸಂಗ್ರಹ ಪುಸ್ತಕದಲ್ಲಿ ಕಾಣಬಹುದು.

ಧ್ಯಾನದ ಕುರಿತಾದ  ಶ್ರೀಕೃಷ್ಣನ ಅದ್ಭುತ ವಿವರಣೆಯನ್ನು ಓದುಗರು ಭಗವದ್ಗೀತೆಯ ಆರನೇ ಅಧ್ಯಾಯದಲ್ಲಿ ಕಾಣಬಹುದು.

[5] ದೇಹ-ಮನಸ್ಸು ಶುದ್ಧಮಾಡಿಕೊಂಡು, ಸರಿಯಾದ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ‘ಅಶನಾತ್ ಪೂರ್ವಮ್’ ಊಟಕ್ಕಿಂತ ಮೊದಲು ಪ್ರಾಣಯಾಮ ಮಾಡುವುದು ಉತ್ತಮ. ‘ಘಟಿಕಾನಂತರಂ ಪಾಶ್ಚಾತ್’ ಮೊದಲೇ ಊಟವಾಗಿದ್ದರೆ, ಊಟಮಾಡಿ  ಕನಿಷ್ಠ ಒಂದು ಗಳಿಗೆ  ಕಳೆದ ನಂತರವೇ ಪ್ರಾಣಾಯಾಮಕ್ಕೆ ತೊಡಗಬೇಕು. ಮಲಮೂತ್ರ ಕಟ್ಟಿಕೊಂಡು ಪ್ರಾಣಾಯಾಮ ಮಾಡಕೂಡದು. ‘ವಸಂತೇ ಶರದಿ ಚಾಭ್ಯಸೇತ್’ ವಸಂತ ಮತ್ತು ಶರತ್ ಕಾಲದಲ್ಲಿ ಅಭ್ಯಾಸ ಮಾಡಬೇಕು.  ‘ನ ಸ್ವೇದಪರಿಮಾರ್ಜನಮ್  ಪ್ರಾಣಾಯಾಮ ಮಾಡುವಾಗ ಬೆವರು ಬಂದರೆ ಅದನ್ನು ಒರೆಸಿಕೊಳ್ಳಬಾರದು. ‘ನೋಷ್ಮೇ’ ಬಿಸಿಲ ಉರಿಯಲ್ಲಿ-ಕೂಡದು. ‘ನ ಕರ್ಣಾಕ್ಷಿನಾಸಾದಂತಶಿರಃಶೂಲೀ  ಕಿವಿ, ಕಣ್ಣು ಮೂಗು, ಹಲ್ಲು, ತಲೆಗಳಲ್ಲಿ ನೋವಿದ್ದರೆ-ಕೂಡದು. ‘ಕ್ರಮೇಣ ವ್ರುಧ್ಹಿಃ ಅಭ್ಯಾಸದಿಂದ ಹಿಡಿತಬಂದ ಮೇಲೆ ಕ್ರಮವಾಗಿ ಕುಂಭಕ ಕಾಲವನ್ನು ಹೆಚ್ಚಿಸಬೇಕು. ಚತುರ್ದಶವರ್ಷಾದೂರ್ಧ್ವಮ್’ ಎಂಟನೆಯ ವರ್ಷದಲ್ಲಿ ಉಪನಯನವಾದರೂ ಹದಿನಾಕರ ತನಕ ಪೂರ್ವಾಭ್ಯಾಸವೇ. ಹದಿನಾಕರಿಂದ ಅಧಿಕಾರ ಪ್ರಾಪ್ತಿ. ಸುಮಾರಾಗಿ ಎಂಬತ್ತು ವರ್ಷಗಳ ತನಕ ಅಥವಾ ದೇಹ ಸುದೃಢವಾಗಿರುವ ತನಕ ಮಾಡಬಹುದು. ಯಾವ ಕಾರಣಕ್ಕೂ ಬಲತ್ಕಾರವಾಗಿ ಮಾಡಬಾರದು.  ನಿಮೀಲಿತಚಕ್ಷುಃ’ ಕಣ್ಣುಮುಚ್ಚಿಕೊಂಡಿರಬೇಕು. ‘ಗುದದ್ವಾರಾಕುಂಚನಂ ಮೂಲಬಂಧೋ ಬಂಧಃ’ ಗುದದ್ವಾರವನ್ನು ಬಿಗಿಯಾಗಿ ಮುಚ್ಚಿಕೊಂಡು ಕುಂಭಕದಲ್ಲಿ ನಿಲ್ಲಿಸಿದ ವಾಯು ಅಪಾನದ್ವಾರದಿಂದ ಸೋರಿ ಹೋಗದಂತೆ ಮೂಲಬಂಧದಲ್ಲಿರಬೇಕು. ಹೀಗೆ ಪ್ರಾಣಾಯಾಮದಲ್ಲಿ ಅನುಸರಿಸಬೇಕಾದ ಅನೇಕ ನಿಯಮಗಳನ್ನು ಯೋಗಸೂತ್ರದಲ್ಲಿ ವಿವರಿಸಲಾಗಿದೆ. ಹೀಗಾಗಿ  ಪ್ರಾಣಾಯಾಮ ಮಾಡುವ ಮೊದಲು ಗುರುಗಳ ಮಾರ್ಗದರ್ಶನ ಪಡೆಯುವುದು ಉತ್ತಮ. ಪ್ರಾಣಾಯಾಮದ ಕುರಿತಾಗಿ ಓದುಗರು ಆಚಾರ್ಯರ ‘ಪ್ರಾಣ ಸೂತ್ರಗಳು’ ಎನ್ನುವ ಪುಸ್ತಕವನ್ನು ಓದಬಹುದು.

[6] ಐದು ಯಮ ಹಾಗು ಐದು ನಿಯಮಗಳ ಕುರಿತಾದ ಸಂಕ್ಷಿಪ್ತ ವಿವರವನ್ನು ಈ ಅಧ್ಯಾಯದ ಕೊನೆಯಲ್ಲಿ ಪರಿಶಿಷ್ಠದಲ್ಲಿ ನೀಡಲಾಗಿದೆ.

[7] ಏಷ ಹಿ ದೇವಃ

[8] ಜಾತೋ ಹಿ ಪೂರ್ವಃ

[9] ವಿಶ್ವಙ್ಜನಾಸ್ತಿಷ್ಠತಿ

[10] ಈಶಾವಾಸ್ಯೂಪನಿಷತ್ ಎಂದು ಕರೆಯಲ್ಪಡುವ ಯಾಜ್ಞೀಯಮಂತ್ರೋಪನಿಷತ್ತಿನ ವಿವರಣೆಯನ್ನು ಆಸಕ್ತ ಓದುಗರಿಗಾಗಿ  ಆಚಾರ್ಯರು ಕನ್ನಡದ ಕನ್ನಡಿಯಲ್ಲಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ